ಮೇಣದ ಬತ್ತಿ



ನೀನೆಂಬ ಮೇಣದಲಿ
ನಾನೆಂಬ ಬತ್ತಿ
ಜೊತೆಯಾಗಿ ಹಿತವಾಗಿ
ಬೆರೆತಾಯ್ತು ನೂರ್ಕಾಲ
ಬೆಳಗಲಿಲ್ಲ ಇನ್ನೂ ಪ್ರೀತಿ ಹಣತೆ...
ನನ್ನಲ್ಲೂ, ನಿನ್ನಲ್ಲೂ
ನಮ್ಮ ಮೌನಗಳಲ್ಲೂ
ನುಸುಳಲಿಲ್ಲ ಯಾವ ಕುಂದು-ಕೊರತೆ!

ಸುಮ್ಮನೇ ಕಾಯುವುದೂ
ಒಂದು ತೆರನಾದ ತಪಸ್ಸು
ಆರಾಮಾಗಿದ್ದುಬಿಡೋಣ
ಆಗುವವರೆಗೂ ತಮಸ್ಸು..

ಆಮೇಲೆ..
ಅನು-ಕ್ಷಣವೂ ನಾ ಬೆಂದು ಸುಡುತಿರುವಾಗ
ಹನಿ-ಹನಿಯಾಗಿ, ನೀ ಕರಗಿ ಬೆರೆಯಬೇಕು
ನಾ ಕಾಯಬೇಕು, ನೀ ಕರಗಬೇಕು
ಜಗದ ತುಂಬೆಲ್ಲ ಆಗ
ಝಗ-ಮಗ ಬೆಳಕು..!

ನಿನ್ನಲ್ಲಿ ನಾನು,
ನನಗಾಗಿ ನೀನು
ಕರಗಿ ಬೆಳಗುವಾಗ
ಜಗವೆಲ್ಲ ಬೆರಗು..

ನೀ ಕರಗದೇ
ನಾ ಬೆಳಗಲಾರೆ
ನಾ ಬೆಳಗದೇ
ನೀ ಕರಗಲಾರೆ..

ಬಾ
ಜೊತೆ-ಜೊತೆಯಾಗಿ
ಜ್ವಾಲಾಮುಖಿಯಾಗೋಣ
ನಮಿಸುತ್ತ ನಮ್ಮನೊಂದು
ಮಾಡಿದ ಕೈಗಳಿಗೆ
ಸ್ಮರಿಸುತ್ತ ಬೆಳಕ ಕಿಡಿ
ಹೊತ್ತಿಸಿದ ಕೈಗೆ

ಅಡಿಯಿಂದ-ಮುಡಿವರೆಗೆ
ಮೊದಲಿಂದ ಕೊನೆವರೆಗೆ
ನಾವೇ ಅಲ್ಲವೇ
ಸಾರ್ಥಕ ಸಾಂಗತ್ಯದನುಕರಣೆ
ಅಮರ ಪ್ರೇಮದ
ಜ್ವಲಂತ ಉದಾಹರಣೆ...!

 ಚಿತ್ರ ಕೃಪೆ: ಅಂತರ್ಜಾಲ 



Comments

ತಮಸ್ಸು - ತಪಸ್ಸುಗಳ ಸಮರ್ಥ ಅನಾವರಣ.
ನನ್ನನ್ನು ಮುನ್ನಡೆಸುವ ನನ್ನೊಳಗಿನ ದೀಪ
ಬಾಳಿನ ಬೆಳಕಾಗಲಿ ಈ ನಂದಾ ದೀಪ....
Anushanth said…
ತುಂಬಾ ಚಂದದ ಭಾವ, ಅರಳಿದ ಕಲ್ಪನೆ ಅಷ್ಟೇ ಚಂದದ ಚಿತ್ರಣವಾಗಿ ಮನಸಿಗೆ ಹಿಡಿಸಿತು ಮಂಜುಳಾ.
Anushanth said…
ತುಂಬಾ ಚಂದದ ಭಾವ, ಅರಳಿದ ಕಲ್ಪನೆ ಅಷ್ಟೇ ಚಂದದ ಚಿತ್ರಣವಾಗಿ ಮನಸಿಗೆ ಹಿಡಿಸಿತು ಮಂಜುಳಾ.
sunaath said…
ತುಂಬ ಸುಂದರವಾದ ಕವನ.
ಈ ಕವಿತೆಯ ಪ್ರತಿಮೆ ಚೆನ್ನಾಗಿದೆ ಮಾನ್ಯ ಮಂಜುಳರವರೆ.

Popular Posts