Wednesday, December 10, 2014

ಕಲ್ಪನೆ ನನ್ನ ತವರು...

ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ನಾ ಹುಟ್ಟಿ ಬೆಳೆದದ್ದು
ಮತ್ತೆ ಬೆರಗಾಗಿದ್ದು
ಕನಸುಗಳ ಹೆಣೆದದ್ದು
ಅಲ್ಲೇ ಎಲ್ಲ
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ಉಸಿರುಗಟ್ಟಿಸುತದೆ ವಾಸ್ತವ
ಅದ ಪಲ್ಲವಿಸುವ ಗಾಳಿಯಿಲ್ಲ
ಮತ್ತೆ ತವರಿಗೆ ತೆರಳಿ
ಹೊಸ ಜೀವದೊರವ ಪಡೆದು
ನಸು-ನಗುತ ಮರಳಿದರೆ
ಇಲ್ಲಿ ಏನಿಲ್ಲ
ಅಲ್ಲಿ ಏನೇನಿಲ್ಲ!
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ಚಂದ್ರ ತಾರೆಗಳವರು
ಸೂರ್ಯ, ಬಾಂದಳದೂರು
ಇವರೆಲ್ಲರೂ ನನ್ನ ಬಂಧು-ಬಳಗ
ದೂರದಲ್ಲಿದ್ದರೂ
ಹತ್ತಿರವ ಮುಟ್ಟುವರು
ಮತ್ತೆ ಪಿಸುಗುಟ್ಟುವರು
ಮರಳಿ ಬಾ ಮಗಳೇ!
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ತವರ ತೇರನು ಎಳೆದು
ಇಲ್ಲಿ ತರಲಾಗದು
ಆ ಲೋಕವೇ ಬೇರೆ ಇಲ್ಲಿನಂತಲ್ಲ
ನಕ್ಕರೂ, ಅತ್ತರೂ,
ಮನದಣಿಯೆ ಕುಣಿದರೂ
ನನ್ನ ತವರಿನಲಿ ಯಾವ ಸುಂಕವಿಲ್ಲ
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ಈ ಪಯಣದಲೇ ಜೀವನ
ತೆವಳಿ ಸಾಗುತಲಿದೆ
ತವರಲ್ಲೇ ಉಳಿಯಲು
ನನಗೆ ಅನುಮತಿಯಿಲ್ಲ!
ವಾಸ್ತವಕೆ ಮರಳಿದರೂ
ತವರಿನಲ್ಲಿಯೇ ಮನಸು
ಕನಸ ತೊರೆದು ಬದುಕಿ
ನನಗೆ ಅಭ್ಯಾಸವಿಲ್ಲ
ಕಡ ತಂದ ಬದುಕಿಗೆ
ಬದುಕ ತುಂಬಲು ಹಂಬಲಿಸುತೇನೆ
ನನ್ನುಸಿರ ಏರಿಳಿತ
ಇಲ್ಲ್ಯಾರಿಗೂ ತಿಳಿಯುವುದೇ ಇಲ್ಲ...
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ...

Monday, March 04, 2013

ಗುರುತ್ವಾಕರ್ಷಣೆ!

ಬದುಕಬೇಕೆನಿಸುತ್ತದೆ
ಕಾಲಾತೀತವಾಗಿ
ನಿನ್ನೆ, ಇಂದು, ನಾಳೆಗಳ
ಹಂಗಿಲ್ಲದೇ...
ಹಂಗಿನರಮನೆಯಲ್ಲಿ ಬಂಧಿಯಾಗಿರುವುದಕಿಂತ
ಬೀದಿ ಅಲೆಯಬೇಕೆನಿಸುತ್ತದೆ
ಯಾವ ಎಗ್ಗಿಲ್ಲದೇ!

ಎಲ್ಲಿದೆ ಹಂಗು?
ಕಣ್ಣಿಗೆ ಕಾಣದು ಎಂದೆಯಾ?
ಕಾಲವಾದರೂ ಕಂಡಿದ್ದರೆ
ಹಿಡಿದು ತಾ ನನ್ನೆದುರು
ಗಡಿಯಾರದ ತಿರುಗೋ ಮುಳ್ಳುಗಳ
ಸಮಯವೆಂದು ತಿಳಿದೆಯಾ ಮಳ್ಳ?
ನಮ್ಮನೆಯ ಗಡಿಯಾರದ ಮುಳ್ಳುಗಳು ಚಲಿಸದೇ
ಗಂಟೆಗಳಲ್ಲ,
ಆಗಲೇ ಹದಿ’ಮೂರು’ ’ದಿನ’ಗಳಾಯ್ತು!

ಕಣ್ಣಿಗೆ ಕಾಣದ್ದೆಲ್ಲ
ತೋರಿಸುವ ಚಪಲ
ನಮಗೆಲ್ಲರಿಗೂ
ಆ ಕವಿ, ಈ ಚಿತ್ರಕಾರ
ಮತ್ತೆ ಕಲ್ಪನೆಗಳ
ಕೊರಳ ಹಾರ!

ಅಲ್ಪರು ನಾವೆಲ್ಲ
ಭೂಮಿ ತಾಯಿಯ ಮುಂದೆ
ಅವಳಿಗೂ ಇದೇ ಚಪಲ
ಅರಿವಾಗಿರಲಿಲ್ಲ ನನಗೆ!

ಆಕರ್ಷಣೆ, ಅಲ್ಲಲ್ಲ
’ಗುರುತರ’ ಆಕರ್ಷಣೆ,
ಅಲ್ಲಲ್ಲ, ಗುರುತ್ವಾಕರ್ಷಣೆಯ
ಹೇಗೆ ತೋರುವಳಮ್ಮ?


ನ್ಯೂಟನ್ನನ ಸೇಬು
ಕೆಳಗುರುಳಿದಂತೆ
ಜೀವವೂ ಉರುಳಬಲ್ಲದಂತೆ
ಗುರುತ್ವಾಕರ್ಷಣೆಯಿಂದ!
ನ್ಯೂಟನ್‍ಗೂ ನನಗೂ
ಎತ್ತಿಂದೆತ್ತಣ ಸಂಬಂಧ?
ಯಾವ ಜನ್ಮದ, ಋಣಾನುಬಂಧ?! :-)

ಬಂಧಗಳಿರದ ಬದುಕು
ಸಾಧ್ಯವಿಲ್ಲವೆನಿಸಿದಾಗಲೆಲ್ಲ
ನಿಡುಸುಯ್ಯಬೇಕೆನಿಸುವುದು ಮತ್ತೆ-ಮತ್ತೆ!
ಮುಕ್ತಿ ಎಂಬುದು ಕೇವಲ
ಕಲ್ಪನೆಯ ಕೂಸೆನಿಸಿದಾಗ
ಮರಳುತ್ತೇನೆ ನಾನು
ವಾಸ್ತವತಾವಾದಿಯಂತೆ!


Thursday, February 21, 2013

ಮೌನ - ಸ್ಪಂದನಹೃದಯದಿ ತುಂಬಿರಲು
ನೂರೆಂಟು ಭಾವ
ವಿವರಿಸಬಲ್ಲುದೆ ಶಬ್ದ-ಕೋಶ
ಮನದಿ ತುಂಬಿದ ತುಮುಲಗಳ...
ಆತ್ಮೀಯರ ಮನ ಮುಟ್ಟುವಂತೆ?


ಮಾತೆಯ ಮಮತೆಯ ಸ್ಪರ್ಶ..
ಮುಗ್ಧ ಮಗುವಿಗೆ ನೀಡುವ ಸಿಹಿ ಮುತ್ತು
ಮಾತನಾಡುವುದೇ ಪದಗಳಲಿ?
ಪದಗಳಿಗೆ ಇಲ್ಲಿ ಬೆಲೆಯೆಲ್ಲಿ?
ತುಂಬಿ ಬಂದಿರಲು ಪ್ರೀತಿ ಮನದಲಿ..


ಒಂದು ಕಣ್ಣಿನ ನೋಟ..
ನುಡಿವುದು ನೂರು ಮಾತುಗಳ
ಸ್ಪಂದಿಸಬೇಕಾದಲ್ಲಿ ಹೃದಯ
ಬೇಕಿಲ್ಲ ಮಾತುಗಳ ಆಶ್ರಯ..


ಹೃದಯದಾಳದಲಿ ಹೆಪ್ಪುಗಟ್ಟಿದ
ನೋವು-ದುಃಖಗಳ
ಹೇಳಲು ಸಾಧ್ಯವೇ ಬರಿ ಮಾತಿನಲಿ?
ಎಲ್ಲ ಮಾತುಗಳು ಕರಗಿ ನೀರಾಗುವವು
ಮೌನ ರಾರಾಜಿಸುವುದಿಲ್ಲಿ...


ದೈನಂದಿನ ಬದುಕಿಗೆ ಮಾತು ಅಗತ್ಯ
ಮಾತಿಲ್ಲದೆ ದೈನಂದಿನ ಬದುಕು ನಕಾರ..
ಆದರೆ
ಹೃದಯವಂತರ ಲೋಕದಲಿ
ಭಾವನೆಗಳ ಸಂಗಮದಲಿ..
ಮಾತು ಬೆಳ್ಳಿ ಅರ್ಥಪೂರ್ಣ ಮೌನಬಂಗಾರ!


 ಚಿತ್ರ ಕೃಪೆ: ಅಂತರ್ಜಾಲ 

Wednesday, January 30, 2013

ಮೇಣದ ಬತ್ತಿನೀನೆಂಬ ಮೇಣದಲಿ
ನಾನೆಂಬ ಬತ್ತಿ
ಜೊತೆಯಾಗಿ ಹಿತವಾಗಿ
ಬೆರೆತಾಯ್ತು ನೂರ್ಕಾಲ
ಬೆಳಗಲಿಲ್ಲ ಇನ್ನೂ ಪ್ರೀತಿ ಹಣತೆ...
ನನ್ನಲ್ಲೂ, ನಿನ್ನಲ್ಲೂ
ನಮ್ಮ ಮೌನಗಳಲ್ಲೂ
ನುಸುಳಲಿಲ್ಲ ಯಾವ ಕುಂದು-ಕೊರತೆ!

ಸುಮ್ಮನೇ ಕಾಯುವುದೂ
ಒಂದು ತೆರನಾದ ತಪಸ್ಸು
ಆರಾಮಾಗಿದ್ದುಬಿಡೋಣ
ಆಗುವವರೆಗೂ ತಮಸ್ಸು..

ಆಮೇಲೆ..
ಅನು-ಕ್ಷಣವೂ ನಾ ಬೆಂದು ಸುಡುತಿರುವಾಗ
ಹನಿ-ಹನಿಯಾಗಿ, ನೀ ಕರಗಿ ಬೆರೆಯಬೇಕು
ನಾ ಕಾಯಬೇಕು, ನೀ ಕರಗಬೇಕು
ಜಗದ ತುಂಬೆಲ್ಲ ಆಗ
ಝಗ-ಮಗ ಬೆಳಕು..!

ನಿನ್ನಲ್ಲಿ ನಾನು,
ನನಗಾಗಿ ನೀನು
ಕರಗಿ ಬೆಳಗುವಾಗ
ಜಗವೆಲ್ಲ ಬೆರಗು..

ನೀ ಕರಗದೇ
ನಾ ಬೆಳಗಲಾರೆ
ನಾ ಬೆಳಗದೇ
ನೀ ಕರಗಲಾರೆ..

ಬಾ
ಜೊತೆ-ಜೊತೆಯಾಗಿ
ಜ್ವಾಲಾಮುಖಿಯಾಗೋಣ
ನಮಿಸುತ್ತ ನಮ್ಮನೊಂದು
ಮಾಡಿದ ಕೈಗಳಿಗೆ
ಸ್ಮರಿಸುತ್ತ ಬೆಳಕ ಕಿಡಿ
ಹೊತ್ತಿಸಿದ ಕೈಗೆ

ಅಡಿಯಿಂದ-ಮುಡಿವರೆಗೆ
ಮೊದಲಿಂದ ಕೊನೆವರೆಗೆ
ನಾವೇ ಅಲ್ಲವೇ
ಸಾರ್ಥಕ ಸಾಂಗತ್ಯದನುಕರಣೆ
ಅಮರ ಪ್ರೇಮದ
ಜ್ವಲಂತ ಉದಾಹರಣೆ...!

 ಚಿತ್ರ ಕೃಪೆ: ಅಂತರ್ಜಾಲ Friday, January 04, 2013

ಹಳತೆಲ್ಲ ಹೊಸತು...!

ಈ ತಿಂಗಳು ನನ್ನ ಕೆಲವು ಹಳೆಯ ಕವನಗಳನ್ನು ಇಲ್ಲಿ ಪೋಸ್ಟಿಸುವ ಸಮಯ. ಅಲ್ಲಿ-ಇಲ್ಲಿ ಹರಡಿಕೊಂಡಿರುವ ಕವನಗಳನ್ನ ಒಂದೆಡೆ ಸಂಗ್ರಹಿಸಿ ಮುಂದುವರೆಯುವ ಆಲೋಚನೆ. ಈ ನಿಟ್ಟಿನಲ್ಲಿ ಮೊದಲನೆಯದು ಇದು...


’ಕಾಲ’ ಕೂಡಿ ಬಂದಾಗ!
 
ಮನಸಿನ, ಕನಸಿನ ಹಸಿ-ಬಿಸಿ ಮಣ್ಣು
ಆಳದಿ ಹುದುಗಿದ
ಭಾವ ಬೀಜಗಳು
ಕೊಡುವವರ್ಯಾರೋ ಬೆಳಕು, ನೀರು
ಉಸಿರಾಗುವ ತವಕ,
ಹಸಿರಾಗುವ ತನಕ,
ಬಸಿರಿನ ಪುಳಕವ ಹೊತ್ತು ಕಾಯುವರ್ಯಾರು?!

ಕತ್ತಲ ಮಡುವಲೇ ಮನೆಯನು ಮಾಡಿ
ಗಾಳಿಗೆ, ಬೆಳಕಿಗೆ ತಡ-ತಡಕಾಡಿ
ಆಂತರ್ಯದ ತುಮುಲದ
ಅರ್ಥ ಜಾಲಾಡಿ
ಕುಡಿಯೊಡೆಯಲು ಮತ್ತೆ-ಮತ್ತೆ ಹೆಣಗಾಡಿ...
ಇವುಗಳ ಇಲ್ಲಿಗೆ ತಂದವರ್ಯಾರು..?!
ಸೋತವರ್ಯಾರು? ಗೆದ್ದವರ್ಯಾರು?!

ದಿನಗಳೆದಂತೆ ಮಾಗುವ ಮನಸು
ಕತ್ತಲ ಮುಸುಕನು ಭೇದಿಸಿ ಬೆಳೆಯುವ ಕನಸು
ಮೆಲ್ಲನೆ ನುಸುಳಿದೆ ಅರ್ಥದ ಬೆಳಕು
ಜೊತೆಯಲೆ ನಗುತಿದೆ ಅನು’ಭಾವ’ದ ಚಿಮುಕು

’ಇಂದು’
ಭಾವ ಬೀಜಗಳು
ಹಸಿರಾಗುವ ಸಮಯ
’ಕಾಲ’ ಕೂಡಿ ಬಂದಾಗಲೇ
ಹೊಸ - ಬದುಕಿನ ಉದಯ!

ಚಿತ್ರ ಕೃಪೆ : ಅಂತರ್ಜಾಲ 

Tuesday, December 11, 2012

ಗಾಲಿಗಳುರುಳುವವುನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ಈ ಊರ ದಾರಿಗಳವು
ಲಕ್ಷ ಜನರ ಅಲಕ್ಷ್ಯದ ನಡುವೆಯೂ
ನಿನ್ನ ನೆನಪ ಮೆತ್ತಿಕೊಂಡಿಹವು
ಗಾಲಿಗಳುರುಳುವಾಗ ಮುಂದೆ-ಮುಂದೆ
ಹಿಂದೆ ನೆನಪುಗಳರಳುವವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ನಾ-ನೀ ಭೇಟಿಯಾಗುತಿದ್ದ ಜಾಗಗಳು,
ಕೈ-ಕೈ ಜೋಡಿಸಿ ನಡೆದ ದಾರಿಗಳು,
ಹೆಜ್ಜೆ ಗುರುತುಗಳ,
ಗೆಜ್ಜೆ ಸದ್ದುಗಳ
ಜೋಪಾನವಾಗಿರಿಸಿಹವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ದಾರಿಗಳ ಸರದಾರ ನೀ,
ಅದೆಲ್ಲೋ ಹೋಗಿ, ಇನ್ನೆಲ್ಲೋ ತಿರುಗಿ,
ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ
ಹೊಸ ದಾರಿ ತೋರಿಸುತಿದ್ದೆ.
ನೀ ತೋರಿದ ದಾರಿಗಳೇ
ದಾರಿದೀಪ ನನಗೀಗ!

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ರಾತ್ರಿಯೂಟಗಳಿಗಾಗಿ,
ಬೆಳಗಿನುಣುಸುಗಳಿಗಾಗಿ,
ತರಕಾರಿ-ದಿನಿಸುಗಳಿಗಾಗಿ,
ಕೆಲಸ ಸಲುವಾಗಿ,
ಪಯಣದ ಸುಖಕಾಗಿ
ಹೋಗದ ದಾರಿಗಳಿಲ್ಲ
ತಿರುಗದ ತಿರುವುಗಳಿಲ್ಲ

ಊರಿನ ಮೂಲೆ-ಮೂಲೆಗಳಲೂ
ನೀ ನೆನಪಿನ ಗಂಟು ಕಟ್ಟಿಟ್ಟದ್ದು
ನನಗೆಂದೂ ತಿಳಿಯಲೇ ಇಲ್ಲ!
ಇಂದೂ ಅಷ್ಟೇ
ಇವೆಲ್ಲ ನನ್ನ ನೆನಪುಗಳಲ್ಲ...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ರಸ್ತೆಗಳಗುಂಟ
ಮನಸ ಬೆಚ್ಚಗಾಗಿಸುವ
ಥರ-ಥರದ ನೆನಪುಗಳು,
ಅದರ ಮಗ್ಗುಲಲೇ
ಜೊತೆ-ಜೊತೆಯಾಗಿ ಓಡುವ
ನೋವಿನ ಗೆರೆಗಳು

ತುಟಿಯಂಚಿನಲ್ಲಿ ಮುಗುಳುನಗೆ,
ಕಣ್ಣಂಚಲ್ಲಿ ನೀರ ಹನಿ
ಪದೇ-ಪದೇ ಈ ರಸ್ತೆಗಳಿಗೆ
ಸಲಾಮು ಹಾಕುವವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

Tuesday, October 23, 2012

ಉತ್ತರಗಳು ಎತ್ತರಗಳು -1 (ದಿನ - ೨)

(ಅಕ್ಟೋಬರ್ 16 ರಂದು ಅವಧಿಯಲ್ಲಿ ಪ್ರಕಟವಾಗಿತ್ತು. ಇಲ್ಲಿ ಹೆಚ್ಚಿನ ಚಿತ್ರಗಳೊಂದಿಗೆ...)

ಬಾಬಾ ಮಂದಿರ್ ಮತ್ತು ಚಂಗು ಸರೋವರಗಳು ಅಂದಾಜು ೧೨,೪೦೦ ಅಡಿ ಎತ್ತರದಲ್ಲಿರುವ ಸ್ಥಳಗಳು. ಅದರಲ್ಲೂ ನಾವು ಕ್ರಮಿಸುತ್ತಿದ್ದದ್ದು ಬಳಸು ದಾರಿಯಲ್ಲಿ. ದಾರಿಗುಂಟ ಸಿಗುವ ಚೆಕ್‍ಪೋಸ್ಟ್ಗಳಲ್ಲಿ ಅನುಮತಿ ಪಡೆಯುತ್ತ, ಮೈ ನವಿರೇಳಿಸುವ ಎತ್ತರ ಏರುತ್ತಿದ್ದೆವು. ಅದೆಷ್ಟು ಹೇರ್‌ಪಿನ್ ತಿರುವುಗಳನ್ನು ಬಳಸಿದೆವೋ ಗೊತ್ತಿಲ್ಲ! ಅಂದ್ಯಾಕೋ ಭಾಸ್ಕರ ನಮ್ಮ ಜೊತೆಗೇ ಇರುವ ನಿರ್ಧಾರ ಮಾಡಿದಂತಿತ್ತು.. ಬೆಳಗಿನಲ್ಲಿ ಕಂಡ ಬೆಳಕು ನನ್ನ ಕಣ್ಣಲ್ಲಿನ್ನೂ ಫಳ-ಫಳ ನಗುತಿತ್ತು!

ಮೇಲೆರಿದಂತೆ ಮಂಜು ಮುಸುಕಿದ ದಾರಿ... ಚಳಿಯ ಚುಮು ಚುಮು ಮೈ ತಾಗುತ್ತಿತ್ತು.. ಅಪ್ಪ-ಮಗರಿಬ್ಬರೂ fully packed ಆಗಿಬಿಟ್ಟರು.. ನಾ ಚಳಿ ಅನುಭವಿಸುತ್ತ ಮಂದಹಾಸದಲ್ಲಿದ್ದೆ! ನಡು-ನಡುವೆ ಮಂಜಿನ ತೆರೆ ಸರಿಸಿ ಭಾಸ್ಕರ ಬೆಚ್ಚಗಾಗಿಸುತ್ತಿದ್ದ... ನಂತರ ಚಳಿ, ಬಿಸಿಲು, ಬೆಳಕು, ಕತ್ತಲು, ಎಲ್ಲಾ ಮರೆತೋಯ್ತು... ಕಣ್ಣು ಕಂಡಿದ್ದು ಬಣ್ಣ-ಬಣ್ಣ! ಎತ್ತರ ಹೆಚ್ಚುತ್ತಿದ್ದಂತೆ ಭೂದೃಶ್ಯದಲ್ಲಿ ವಿಪರೀತ ವ್ಯತ್ಯಾಸ... ಇಂಥ ಸುಂದರ ಭೂಮಿಯನ್ನ ನಾ ಎಂದೂ ನಿಜದಲ್ಲಿ ಕಂಡಿದ್ದೇ ಇಲ್ಲ, ಪೋಸ್ಟರ್‌ಗಳಲ್ಲಿ ಕಾಣುವಂಥ ಸುಂದರ, ಸುಂದರ ಜಗತ್ತು!

ಆ ಎತ್ತರದಂಚಿನಲ್ಲಿ ಬಣ್ಣ-ಬಣ್ಣದ ಪೊದೆಗಳು, ಅಲ್ಲಿ-ಅಲ್ಲಿ ಹಸಿರಲ್ಲಿ ಸ್ವಚ್ಛ, ಸುಂದರ ಸರೋವರಗಳು, ನಿರಮ್ಮಳವಾಗಿ ಮೇಯುತ್ತಿದ್ದ ಕುದುರೆ, ಹಸು, ಯಾಕ್‍ಗಳು... ಬದುಕು ಆ ಕ್ಷಣದಲ್ಲಿ ಫ್ರೀಜ಼್ ಆಗಿಬಿಡಬೇಕು ಅನಿಸಿತ್ತು :-) ಬಣ್ಣಗಳಿಗೆ ಕೊರತೆಯಿರದ ಲೋಕವ ನೋಡಲು ಎರಡೂ ಕಣ್ಣು ಸಾಲದಾಗಿದ್ದವು.. ಕಾರ್ ಇಳಿದು ಓಡಿ ಹೋಗುವ ಮನಸಾಗಿತ್ತು... ಕ್ಯಾಮೆರಾ ಕಣ್ಣರಳಿಸಲು... ಆದರೆ ಕಾರ್‌ನ ಚಾಲಕ ನಾನ್-ಸ್ಟಾಪ್, ಜೊತೆಗೆ ನಿಸರ್ಗದ ನಿಬಂಧನೆಗಳು (ಯಾವಾಗ ಮಳೆ ಬರುತ್ತೋ, ಯಾವಾಗ ಪಯಣ ಕಠಿಣವಾಗುತ್ತೋ, ಗೊತ್ತಿರದ ದುಗುಡಗಳು - ಮರಳಿ ಹೋಗಲೂ ೫-೬ ಗಂಟೆಗಳು ಬೇಕಾಗಬಹುದು ಎಂಬ ಯೋಚನೆ, ಹೀಗೇ...)

ಆದರೆ ನನಗೆ ಪ್ರಕೃತಿಯ ಸೆಳೆತ ವಿಪರೀತ! ಆ ಬಣ್ಣ-ಬಣ್ಣದ ನೆಲ ಹಾಸಿನಲ್ಲಿ ಅದೆಂಥೆಂಥ ಪೊದೆಗಳಿವೆ ಅಂತ ನೋಡೋ ಕುತೂಹಲ... ಆಗಲೇ ನನಗೆ ಹೊಳೆದ ಉಪಾಯ ನೇಚರ್ ಕಾಲ್‌ದು ;-) (Of course nature was calling me!). ಗಾಡಿ ನಿಂತಿತು. ಎಲ್ಲರೂ ಅವರವರ ನೇಚರ್ ಕಾಲ್ ಮುಗಿಸಿದರು. ನಾನೂ ಓಡಿದ್ದೆ ನೇಚರ್ ಕಾಲ್‍ನೆಡೆಗೆ ಕ್ಯಾಮೆರಾದೊಂದಿಗೆ... ಆಗ ಕಣ್ಣಿಗೆ ಕಂಡ ಹೂಗಳು.. ಓಹ್! ಅನಿವರ್ಚನೀಯ... ಭಗವಂತನ ಕಲಾ-ಕುಸುರಿಯ ಅಪ್ರತಿಮತೆ ಮೆರೆಯುತ್ತಿದ್ದ ಹೂಗಳು.. ಚೆಲುವ ನಾಚಿಸುವಂಥವು... ಅಷ್ಟೊತ್ತಿಗೆ ಬೇರೆಯವರ ಕಾಲ್ ಕೇಳಿಸಿತು.. ’ತಡವಾಗ್ತಾ ಇದೆ, ಬೇಗ ಬಾ!’ ಬ್ಯಾಕ್ ಟು ಕಾರ್..

ಸ್ವಲ್ಪ ದೂರ ಕ್ರಮಿಸಿದ ನಂತರ ನಾವು ಬಾಬಾ ಮಂದಿರ್ ತಲುಪಿದ್ದೆವು.. ಅದರ ಬಗ್ಗೆ ಆಗಲೇ ಗೆಳತಿಯರೊಡನೆ ಚರ್ಚಿಸಿ, ಅಂತರ್ಜಾಲದಲ್ಲಿ ವಿವರ ತಿಳಿದಿದ್ದರಿಂದ ಆ ಸ್ಥಳದ ಬಗ್ಗೆ ಒಂದು ಮಟ್ಟಿಗೆ ತಿಳುವಳಿಕೆ ಇತ್ತು. ಕೋಶ ಓದುವುದು, ದೇಶ ನೋಡುವುದೂ ಎರಡು ಜ್ಞಾನ ಕೊಡುತ್ತವೆ, ಅನುಭವ ಕೊಡುತ್ತವೆ, ಆದರೆ ಅವುಗಳ ಪರಿ ಬೇರೆ ಅಷ್ಟೇ! ಬಾಬಾ ಮಂದಿರ್ ಹತ್ತಿರ ಇಳಿದ ಕ್ಷಣ ಮೂಡಿದ ಭಾವ - ಪ್ರಾಯಶಃ ಗೌರವ, ಭಕ್ತಿ, ಆನಂದ, ಆಶ್ಚರ್ಯ ಇವುಗಳೆಲ್ಲದರ ಮಿಶ್ರಣವಾಗಿತ್ತು ಅನ್ಸತ್ತೆ ಅಥವಾ ನನ್ನಲ್ಲಿ ಮೂಡಿದ ಭಾವನೆಗಳನ್ನು ಪ್ರಾಯಶಃ ಸರಿಯಾಗಿ ವಿವರಿಸಲು ಬರುವುದಿಲ್ಲವೇನೋ ಅನ್ಸತ್ತೆ! ಅಲ್ಲಿ ನಡೆದದ್ದರ ಬಗ್ಗೆ ವಿವರಿಸಬಹುದು… ನವಿರಾದ ಪಂಜಾಬಿ ಭಜನ್, ಹಲವಾರು ಸೈನಿಕರು,  ಹರಭಜನ್ ಸಿಂಗ್ ಬಾಬಾ ಅವರ ವೃತ್ತಾಂತದ ಕುರಿತು ಒಂದು ದೊಡ್ಡ ಫಲಕ, ಅದರ ಪಕ್ಕವೇ ಮಿಲಿಟರಿ ಕ್ಯಾಂಟೀನ್.  ಅಂದು ಭಾನುವಾರವಾದ್ದರಿಂದ ಪ್ರಸಾದದ ರೂಪದಲ್ಲಿ ನಮಗೆ ಸೈನಿಕರ ಕೈಯೂಟ...! ಸರಳ, ರುಚಿಕರ ಊಟ, ಕುಡಿಯಲು ಬಿಸಿ ನೀರು, ಆದರಾತೀಥ್ಯ ನೋಡಿ ನಾನಂತೂ ಭಾವುಕಳಾಗಿಬಿಟ್ಟಿದ್ದೆ… ಸೌಭಾಗ್ಯವೆಂದರೆ ಇದೇನಾ ಅನಿಸಿಬಿಟ್ಟಿತ್ತು...! ಇವರೂ ಮೂಕರಾಗಿದ್ದರು… ಸೈನ್ಯವೆಂದರೆ ಇವರಿಗೂ ಅದೇನೋ ಶ್ರದ್ಧೆ, ಗೌರವ, ಆಕರ್ಷಣೆ…


ಬಾಬಾ ಅವರ ಕಥೆ ರೋಚಕ! ೧೯೬೬ ರಲ್ಲಿ ಸಿಪಾಯಿ ಹುದ್ದೆಯಲ್ಲಿ ಅವರು ಸೈನ್ಯ ಸೇರಿದ್ದರು. ೧೯೬೮ರಲ್ಲಿ ನೈಸರ್ಗಿಕ ವೈಪರೀತ್ಯದಿಂದ ಸಿಕ್ಕಿಂ, ಮತ್ತು ಉತ್ತರ ಬಂಗಾಳದಲ್ಲಿ ಸಾವಿರಾರು ಜನರ ಸಾವು ಸಂಭವಿಸಿತ್ತು. ಇಂಥದೇ ಒಂದು ದಿನ, ಅಕ್ಟೊಬರ್ ೪, ೧೯೬೮ರಲ್ಲಿ ಬಾಬಾ ಅವರು ತುಕುಲಾನಿಂದ ಡೆಂಗ್‍ಚುಕ್ಲಾಗೆ ಕೆಲವು ಜನರನ್ನು ಹೇಸರಗತ್ತೆಯ ಮೇಲೆ ಸಾಗಿಸುತ್ತಿರುವಾಗ ಜೋರಾಗಿ ಹರಿಯುತ್ತಿದ್ದ ಒಂದು ಪ್ರವಾಹದಲ್ಲಿ ಕಾಲ್ಜಾರಿ ಬಿದ್ದು ಮುಳುಗಿ ಹೋದರು. ಅವರು ನಾಪತ್ತೆಯಾದ ೫ನೇ ದಿನದಂದು ಅವರು ತಮ್ಮ ಸಹೋದ್ಯೋಗಿ ಪ್ರೀತಂ ಸಿಂಗ್‍ನ ಕನಸಲ್ಲಿ ಬಂದು, ತನ್ನ ಜೊತೆ ನಡೆದ ಆ ದಾರುಣ ಘಟನೆಯ ವಿವರಗಳನ್ನು ನೀಡಿ, ತಮ್ಮ ಮೃತ ಶರೀರ ಹಿಮದ ಗುಡ್ಡೆಯ ಕೆಳಗೆ ಮುಚ್ಚಿಹಾಕಿಕೊಂಡಿದೆ ಎಂದು ತಿಳಿಸಿದರಂತೆ, ಹಾಗೇ ತನಗಾಗಿ ಒಂದು ಸಮಾಧಿಯನ್ನೂ ನಿರ್ಮಿಸುವಂತೆ ಆಸೆ ವ್ಯಕ್ತ ಪಡಿಸಿದರಂತೆ. ಪ್ರೀತಮ್ ಸಿಂಗ್ ಇದೆಲ್ಲ ತಮ್ಮ ಕಲ್ಪನೆಯಷ್ಟೇ ಅಂತ ಆ ಕನಸನ್ನು ನಿರ್ಲಕ್ಷಿಸಿದರಂತೆ. ಆದರೆ ಕೆಲ ದಿನಗಳ ನಂತರ ಹರಭಜನ್ ಸಿಂಗ್ ಅವರ ಮೃತ ದೇಹ ಪ್ರೀತಂ ಸಿಂಗ್‍ಗೆ ಕನಸಿನಲ್ಲಿ ತಿಳಿಸಿದ ಜಾಗದಲ್ಲೇ ದೊರೆತಾಗ ಎಲ್ಲರೂ ಆಶ್ಚರ್ಯಚಕಿತರಾದರಂತೆ. ಹರಭಜನ್ ಸಿಂಗ್ ಅವರಿಗೆ ಗೌರವ ನೀಡಲೆಂದು ಅವರಾಸೆಯಂತೆ ಅವರ ಸಮಾಧಿಯನ್ನು ಛೋಕ್ಯಾಛೋ ಬಳಿ ನಿರ್ಮಿಸಲಾಗಿದೆ. ಅವರು ಇಂದಿಗೂ ಗಡಿ ಪ್ರದೇಶದಲ್ಲಿ ನಡೆಯುವ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಸೈನಿಕರ ಕನಸಲ್ಲಿ ಬಂದು ಮಾಹಿತಿ ನೀಡುವರೆಂಬ ನಂಬಿಕೆಯಿದೆ. ಚೀನಾ ಸೈನಿಕರೂ ಸಹ ಈ ಸತ್ಯವನ್ನು ನಂಬುತ್ತಾರೆ. ಇಂದಿಗೂ ಹರಭಜನ್ ಸಿಂಗ್ ಅವರ ಕಛೇರಿ (ಹೊಸ ಬಾಬಾ ಮಂದಿರ್ ಬಳಿ) ಕಾರ್ಯ ನಿರತವಾಗಿದೆ. ಅವರಿಗೀಗ ಸೈನ್ಯದಲ್ಲಿ ಗೌರವಾರ್ಥಕ ಕ್ಯಾಪ್ಟೇನ್ ಹುದ್ದೆ ನೀಡಲಾಗಿದೆ. (ಪಕ್ಕದ ಚಿತ್ರದಲ್ಲಿರುವ ಮಾಹಿತಿ ಓದಿ).

ಬಾಬಾ ಮಂದಿರ್‌ನಿಂದ ಸ್ವಲ್ಪವೇ ದೂರದಲ್ಲಿ ಹೊಸ ಬಾಬಾ ಮಂದಿರ್ ಇದೆ. ಅಲ್ಲಿಯೇ ಅವರ ಕಛೇರಿಯಿದೆ, ಅವರ ಹಾಸಿಗೆ, ಚಪ್ಪಲಿಗಳು, ಬೂಟುಗಳು, ಯೂನಿಫಾರ್ಮ್, ಅವರಿಗೆ ಬಂದ ಪತ್ರಗಳು ಎಲ್ಲದರ ಸಂಗ್ರಹವಿದೆ. ಫೋಟೊ ತೆಗೆಯಲು ಯಾವುದೇ ಕಟ್ಟಳೆಯಿಲ್ಲ.. ಮಂದಿರ್‌ ಇರುವ ಸ್ಥಳ ರಮಣೀಯ. ಬಾಬಾಗೆ ಈಗಲೂ ವಾರ್ಷಿಕ ರಜೆಗಳು, ಸಂಬಳ ಸಂದಾಯವಾಗುತ್ತವೆ.

ಅಲ್ಲಿಂದ ನಮ್ಮ ಪಯಣ ಚಂಗು ಸರೋವರದೆಡೆಗೆ. ಹಾದಿಯಲ್ಲಿ ನಾಥುಲಾ ಪಾಸ್‌ಗೆ (ಭಾರತ-ಚೀನಾ ಗಡಿ) ಹೋಗುವ ದಾರಿ, ಭಾರತ-ಚೀನಾ ಗಡಿ ವ್ಯಾಪಾರ ಪ್ರದೇಶಗಳು, ಇವುಗಳನ್ನೆಲ್ಲ ನೋಡುತ್ತ ಮುನ್ನಡೆದಾಗ ಕಂಡದ್ದು ಮೋಡದ ಮಧ್ಯದಲ್ಲೂ ಸೂರ್ಯನ ಹೊಳಹನ್ನು ಪ್ರತಿಫಲಿಸುತ್ತಿದ್ದ ಪ್ರಶಾಂತ ಚಂಗು ಸರೋವರ.

Tsomgo ಅಂದರೆ ಭುತಿಯಾ ಭಾಷೆಯಲ್ಲಿ ನೀರಿನ ಮೂಲ ಎಂದು ಅರ್ಥವಂತೆ.  ದೈವಿಕ ಸೌಂದರ್ಯವುಳ್ಳ ಈ ಸರೋವರ, ಬೇರೆ-ಬೇರೆ ಋತುಗಳಲ್ಲಿ ಬೇರೆ-ಬೇರೆಯಾಗಿ ಕಾಣುವುದು. ಚಳಿಗಾಲದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟುವ ಈ ಸರೋವರ, ವಸಂತದಲ್ಲಿ ಬಣ್ಣ-ಬಣ್ಣದ ಹೂಗಳ ಆವರಣದಿಂದ (ಸರೋವರವನ್ನು ಸುತ್ತುವರೆದ ಬೆಟ್ಟಗಾಡಿನಲ್ಲಿ ಅರಳುವ ಹೂಗಳಿಂದ) ಅಲಂಕರಿಸಲ್ಪಡುತ್ತದೆ. ನನಗೆ ಅಕ್ಟೋಬರ್ ತಿಂಗಳಲ್ಲೇ ಬಣ್ಣಗಳ ರಾಶಿ ಕಂಡದ್ದಾಗಿದೆ… ಹಾಗಾದರೆ ಇಲ್ಲಿನ ವಸಂತ ಹೇಗಿರಬೇಡ?!!

ಈ ಸರೋವರವನ್ನು ಸಿಕ್ಕಿಂ ಪ್ರಾಂತದ ಜನ ಪವಿತ್ರವೆಂದು ಪರಿಗಣಿಸುತ್ತಾರೆ (ಮತ್ತು ಇದು ನಿಜಕ್ಕೂ ಪವಿತ್ರ, ಶುದ್ಧ…! ಗಂಗೆಯ ನೆನಪಾಗುತ್ತಿದೆ  :-( ) ಹಳೆಯ ಕಾಲದಲ್ಲಿ ಬೌದ್ಧ ಧರ್ಮದ ಗುರುಗಳು ಭವಿಷ್ಯವನ್ನು ಊಹಿಸಲು ಈ ಸರೋವರದ ಬಣ್ಣ ಬದಲಾವಣೆಯನ್ನು ಅಭ್ಯಸಿಸುತ್ತಿದ್ದರಂತೆ. ಇಂದಿಗೂ ಗುರು ಪೂರ್ಣಿಮೆಯ ದಿನ ಈ ಸರೋವರಕ್ಕೆ ಪ್ರಾರ್ಥನೆ ಸಲ್ಲಿಸಲು ರಾಜ್ಯದ ಜನತೆ ಒಟ್ಟುಗೂಡುತ್ತಾರಂತೆ.

ಇಂಥ ನಯನ ಮನೋಹರ ಸ್ಥಳದಲ್ಲಿ, ಸೈನಿಕರೊಂದಿಗೆ ಕೆಲವು ಮೌನ ನಿಮಿಷಗಳನ್ನು ಆಚರಿಸಿ ಹೊರಡಲು ಅನುವಾಗುತ್ತಿದ್ದಂತೆ ಒಂದು ನಾಚಿಕೆ ಸ್ವಭಾವದ ಯಾಕ್ ಒಂದೆರಡು ಫೋಟೊಗಳಿಗೆ ಪೋಸ್ ಕೊಟ್ಟು ಓಡಿ ಹೋಯಿತು. ಮತ್ತೆ ನಮ್ಮ ಕಾರ್ ಚಾಲಕನ ಕರೆ! ಹೆಜ್ಜೆ ಕಿತ್ತಿಡಲಾಗದೇ ಹೊರಟಿದ್ದಾಯಿತು. ವಾಪಸ್ ಹೊರಡುವಾಗ ಗ್ಯಾಂಗ್‍ಟಾಕ್ ಮತ್ತು ಚಂಗು ಸರೋವರದ ನಡುವಣ ಸನಿಹದ ಮಾರ್ಗ ತೆರೆದಿತ್ತು ಎಂದು ಮಾಹಿತಿ ದೊರೆಯಿತು. ನಿರಮ್ಮಳವಾಗಿ ಅಲ್ಲಿಂದ ಹೊರಟರೆ… ಆ ದಾರಿ ನೋಡಿ ನಾವೆಲ್ಲ ದಂಗು! ದುರ್ಗಮ ದಾರಿ, ಅಲ್ಲಲ್ಲಿ ಕಾಣುವ ಲ್ಯಾಂಡ್ ಸ್ಲೈಡ್, ರೊಜ್ಜು-ರೊಜ್ಜು ರಸ್ತೆ, ಜಿಟಿ-ಜಿಟಿ ಮಳೆ...

ಗಂಟೆಗಟ್ಟಲೇ ಹರ್ಷ, ಗೌರವ, ಆಶ್ಚರ್ಯ, ಭಕ್ತಿ ಇಂಥ ನವಿರು ಭಾವಗಳಲ್ಲೇ ಕಳೆದುಹೋಗಿದ್ದವರಿಗೆ, ಈ ಸಾಹಸಮಯ ಪಯಣ ಬೇರೆ ಬದಲಾವಣೆಯನ್ನೇ ತಂದಿತ್ತು.. ಹೆಜ್ಜೆ-ಹೆಜ್ಜೆಗೂ ನಾವು ಜಾಗೃತರಾಗಿಬಿಟ್ಟಿದ್ದೆವು… ಕಳೆದು ಹೋದರೆ ಖಾಯಂ ಆಗಿ ಕಳೆದು ಹೋಗೋ ಅಪಾಯ :-) ಅಂತೂ-ಇಂತೂ ಸುರಕ್ಷಿತವಾಗಿ ಗ್ಯಾಂಗ್‍ಟಾಕ್ ಸೇರಿಯಾಗಿತ್ತು. ನೆನಪಿನಂಗಳಕ್ಕೆ ಇನ್ನೊ(ನ್ನೆ)ಂ(ದೂ) ಮರೆಯದ ದಿನವೊಂದು ಸೇರ್ಪಡೆಯಾಗಿತ್ತು :-) ಮತ್ತೆ ಮಳೆ ಸುರಿಯತೊಡಗಿತ್ತು ...!