Tuesday, December 11, 2012

ಗಾಲಿಗಳುರುಳುವವುನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ಈ ಊರ ದಾರಿಗಳವು
ಲಕ್ಷ ಜನರ ಅಲಕ್ಷ್ಯದ ನಡುವೆಯೂ
ನಿನ್ನ ನೆನಪ ಮೆತ್ತಿಕೊಂಡಿಹವು
ಗಾಲಿಗಳುರುಳುವಾಗ ಮುಂದೆ-ಮುಂದೆ
ಹಿಂದೆ ನೆನಪುಗಳರಳುವವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ನಾ-ನೀ ಭೇಟಿಯಾಗುತಿದ್ದ ಜಾಗಗಳು,
ಕೈ-ಕೈ ಜೋಡಿಸಿ ನಡೆದ ದಾರಿಗಳು,
ಹೆಜ್ಜೆ ಗುರುತುಗಳ,
ಗೆಜ್ಜೆ ಸದ್ದುಗಳ
ಜೋಪಾನವಾಗಿರಿಸಿಹವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ದಾರಿಗಳ ಸರದಾರ ನೀ,
ಅದೆಲ್ಲೋ ಹೋಗಿ, ಇನ್ನೆಲ್ಲೋ ತಿರುಗಿ,
ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ
ಹೊಸ ದಾರಿ ತೋರಿಸುತಿದ್ದೆ.
ನೀ ತೋರಿದ ದಾರಿಗಳೇ
ದಾರಿದೀಪ ನನಗೀಗ!

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ರಾತ್ರಿಯೂಟಗಳಿಗಾಗಿ,
ಬೆಳಗಿನುಣುಸುಗಳಿಗಾಗಿ,
ತರಕಾರಿ-ದಿನಿಸುಗಳಿಗಾಗಿ,
ಕೆಲಸ ಸಲುವಾಗಿ,
ಪಯಣದ ಸುಖಕಾಗಿ
ಹೋಗದ ದಾರಿಗಳಿಲ್ಲ
ತಿರುಗದ ತಿರುವುಗಳಿಲ್ಲ

ಊರಿನ ಮೂಲೆ-ಮೂಲೆಗಳಲೂ
ನೀ ನೆನಪಿನ ಗಂಟು ಕಟ್ಟಿಟ್ಟದ್ದು
ನನಗೆಂದೂ ತಿಳಿಯಲೇ ಇಲ್ಲ!
ಇಂದೂ ಅಷ್ಟೇ
ಇವೆಲ್ಲ ನನ್ನ ನೆನಪುಗಳಲ್ಲ...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ರಸ್ತೆಗಳಗುಂಟ
ಮನಸ ಬೆಚ್ಚಗಾಗಿಸುವ
ಥರ-ಥರದ ನೆನಪುಗಳು,
ಅದರ ಮಗ್ಗುಲಲೇ
ಜೊತೆ-ಜೊತೆಯಾಗಿ ಓಡುವ
ನೋವಿನ ಗೆರೆಗಳು

ತುಟಿಯಂಚಿನಲ್ಲಿ ಮುಗುಳುನಗೆ,
ಕಣ್ಣಂಚಲ್ಲಿ ನೀರ ಹನಿ
ಪದೇ-ಪದೇ ಈ ರಸ್ತೆಗಳಿಗೆ
ಸಲಾಮು ಹಾಕುವವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

Tuesday, October 23, 2012

ಉತ್ತರಗಳು ಎತ್ತರಗಳು -1 (ದಿನ - ೨)

(ಅಕ್ಟೋಬರ್ 16 ರಂದು ಅವಧಿಯಲ್ಲಿ ಪ್ರಕಟವಾಗಿತ್ತು. ಇಲ್ಲಿ ಹೆಚ್ಚಿನ ಚಿತ್ರಗಳೊಂದಿಗೆ...)

ಬಾಬಾ ಮಂದಿರ್ ಮತ್ತು ಚಂಗು ಸರೋವರಗಳು ಅಂದಾಜು ೧೨,೪೦೦ ಅಡಿ ಎತ್ತರದಲ್ಲಿರುವ ಸ್ಥಳಗಳು. ಅದರಲ್ಲೂ ನಾವು ಕ್ರಮಿಸುತ್ತಿದ್ದದ್ದು ಬಳಸು ದಾರಿಯಲ್ಲಿ. ದಾರಿಗುಂಟ ಸಿಗುವ ಚೆಕ್‍ಪೋಸ್ಟ್ಗಳಲ್ಲಿ ಅನುಮತಿ ಪಡೆಯುತ್ತ, ಮೈ ನವಿರೇಳಿಸುವ ಎತ್ತರ ಏರುತ್ತಿದ್ದೆವು. ಅದೆಷ್ಟು ಹೇರ್‌ಪಿನ್ ತಿರುವುಗಳನ್ನು ಬಳಸಿದೆವೋ ಗೊತ್ತಿಲ್ಲ! ಅಂದ್ಯಾಕೋ ಭಾಸ್ಕರ ನಮ್ಮ ಜೊತೆಗೇ ಇರುವ ನಿರ್ಧಾರ ಮಾಡಿದಂತಿತ್ತು.. ಬೆಳಗಿನಲ್ಲಿ ಕಂಡ ಬೆಳಕು ನನ್ನ ಕಣ್ಣಲ್ಲಿನ್ನೂ ಫಳ-ಫಳ ನಗುತಿತ್ತು!

ಮೇಲೆರಿದಂತೆ ಮಂಜು ಮುಸುಕಿದ ದಾರಿ... ಚಳಿಯ ಚುಮು ಚುಮು ಮೈ ತಾಗುತ್ತಿತ್ತು.. ಅಪ್ಪ-ಮಗರಿಬ್ಬರೂ fully packed ಆಗಿಬಿಟ್ಟರು.. ನಾ ಚಳಿ ಅನುಭವಿಸುತ್ತ ಮಂದಹಾಸದಲ್ಲಿದ್ದೆ! ನಡು-ನಡುವೆ ಮಂಜಿನ ತೆರೆ ಸರಿಸಿ ಭಾಸ್ಕರ ಬೆಚ್ಚಗಾಗಿಸುತ್ತಿದ್ದ... ನಂತರ ಚಳಿ, ಬಿಸಿಲು, ಬೆಳಕು, ಕತ್ತಲು, ಎಲ್ಲಾ ಮರೆತೋಯ್ತು... ಕಣ್ಣು ಕಂಡಿದ್ದು ಬಣ್ಣ-ಬಣ್ಣ! ಎತ್ತರ ಹೆಚ್ಚುತ್ತಿದ್ದಂತೆ ಭೂದೃಶ್ಯದಲ್ಲಿ ವಿಪರೀತ ವ್ಯತ್ಯಾಸ... ಇಂಥ ಸುಂದರ ಭೂಮಿಯನ್ನ ನಾ ಎಂದೂ ನಿಜದಲ್ಲಿ ಕಂಡಿದ್ದೇ ಇಲ್ಲ, ಪೋಸ್ಟರ್‌ಗಳಲ್ಲಿ ಕಾಣುವಂಥ ಸುಂದರ, ಸುಂದರ ಜಗತ್ತು!

ಆ ಎತ್ತರದಂಚಿನಲ್ಲಿ ಬಣ್ಣ-ಬಣ್ಣದ ಪೊದೆಗಳು, ಅಲ್ಲಿ-ಅಲ್ಲಿ ಹಸಿರಲ್ಲಿ ಸ್ವಚ್ಛ, ಸುಂದರ ಸರೋವರಗಳು, ನಿರಮ್ಮಳವಾಗಿ ಮೇಯುತ್ತಿದ್ದ ಕುದುರೆ, ಹಸು, ಯಾಕ್‍ಗಳು... ಬದುಕು ಆ ಕ್ಷಣದಲ್ಲಿ ಫ್ರೀಜ಼್ ಆಗಿಬಿಡಬೇಕು ಅನಿಸಿತ್ತು :-) ಬಣ್ಣಗಳಿಗೆ ಕೊರತೆಯಿರದ ಲೋಕವ ನೋಡಲು ಎರಡೂ ಕಣ್ಣು ಸಾಲದಾಗಿದ್ದವು.. ಕಾರ್ ಇಳಿದು ಓಡಿ ಹೋಗುವ ಮನಸಾಗಿತ್ತು... ಕ್ಯಾಮೆರಾ ಕಣ್ಣರಳಿಸಲು... ಆದರೆ ಕಾರ್‌ನ ಚಾಲಕ ನಾನ್-ಸ್ಟಾಪ್, ಜೊತೆಗೆ ನಿಸರ್ಗದ ನಿಬಂಧನೆಗಳು (ಯಾವಾಗ ಮಳೆ ಬರುತ್ತೋ, ಯಾವಾಗ ಪಯಣ ಕಠಿಣವಾಗುತ್ತೋ, ಗೊತ್ತಿರದ ದುಗುಡಗಳು - ಮರಳಿ ಹೋಗಲೂ ೫-೬ ಗಂಟೆಗಳು ಬೇಕಾಗಬಹುದು ಎಂಬ ಯೋಚನೆ, ಹೀಗೇ...)

ಆದರೆ ನನಗೆ ಪ್ರಕೃತಿಯ ಸೆಳೆತ ವಿಪರೀತ! ಆ ಬಣ್ಣ-ಬಣ್ಣದ ನೆಲ ಹಾಸಿನಲ್ಲಿ ಅದೆಂಥೆಂಥ ಪೊದೆಗಳಿವೆ ಅಂತ ನೋಡೋ ಕುತೂಹಲ... ಆಗಲೇ ನನಗೆ ಹೊಳೆದ ಉಪಾಯ ನೇಚರ್ ಕಾಲ್‌ದು ;-) (Of course nature was calling me!). ಗಾಡಿ ನಿಂತಿತು. ಎಲ್ಲರೂ ಅವರವರ ನೇಚರ್ ಕಾಲ್ ಮುಗಿಸಿದರು. ನಾನೂ ಓಡಿದ್ದೆ ನೇಚರ್ ಕಾಲ್‍ನೆಡೆಗೆ ಕ್ಯಾಮೆರಾದೊಂದಿಗೆ... ಆಗ ಕಣ್ಣಿಗೆ ಕಂಡ ಹೂಗಳು.. ಓಹ್! ಅನಿವರ್ಚನೀಯ... ಭಗವಂತನ ಕಲಾ-ಕುಸುರಿಯ ಅಪ್ರತಿಮತೆ ಮೆರೆಯುತ್ತಿದ್ದ ಹೂಗಳು.. ಚೆಲುವ ನಾಚಿಸುವಂಥವು... ಅಷ್ಟೊತ್ತಿಗೆ ಬೇರೆಯವರ ಕಾಲ್ ಕೇಳಿಸಿತು.. ’ತಡವಾಗ್ತಾ ಇದೆ, ಬೇಗ ಬಾ!’ ಬ್ಯಾಕ್ ಟು ಕಾರ್..

ಸ್ವಲ್ಪ ದೂರ ಕ್ರಮಿಸಿದ ನಂತರ ನಾವು ಬಾಬಾ ಮಂದಿರ್ ತಲುಪಿದ್ದೆವು.. ಅದರ ಬಗ್ಗೆ ಆಗಲೇ ಗೆಳತಿಯರೊಡನೆ ಚರ್ಚಿಸಿ, ಅಂತರ್ಜಾಲದಲ್ಲಿ ವಿವರ ತಿಳಿದಿದ್ದರಿಂದ ಆ ಸ್ಥಳದ ಬಗ್ಗೆ ಒಂದು ಮಟ್ಟಿಗೆ ತಿಳುವಳಿಕೆ ಇತ್ತು. ಕೋಶ ಓದುವುದು, ದೇಶ ನೋಡುವುದೂ ಎರಡು ಜ್ಞಾನ ಕೊಡುತ್ತವೆ, ಅನುಭವ ಕೊಡುತ್ತವೆ, ಆದರೆ ಅವುಗಳ ಪರಿ ಬೇರೆ ಅಷ್ಟೇ! ಬಾಬಾ ಮಂದಿರ್ ಹತ್ತಿರ ಇಳಿದ ಕ್ಷಣ ಮೂಡಿದ ಭಾವ - ಪ್ರಾಯಶಃ ಗೌರವ, ಭಕ್ತಿ, ಆನಂದ, ಆಶ್ಚರ್ಯ ಇವುಗಳೆಲ್ಲದರ ಮಿಶ್ರಣವಾಗಿತ್ತು ಅನ್ಸತ್ತೆ ಅಥವಾ ನನ್ನಲ್ಲಿ ಮೂಡಿದ ಭಾವನೆಗಳನ್ನು ಪ್ರಾಯಶಃ ಸರಿಯಾಗಿ ವಿವರಿಸಲು ಬರುವುದಿಲ್ಲವೇನೋ ಅನ್ಸತ್ತೆ! ಅಲ್ಲಿ ನಡೆದದ್ದರ ಬಗ್ಗೆ ವಿವರಿಸಬಹುದು… ನವಿರಾದ ಪಂಜಾಬಿ ಭಜನ್, ಹಲವಾರು ಸೈನಿಕರು,  ಹರಭಜನ್ ಸಿಂಗ್ ಬಾಬಾ ಅವರ ವೃತ್ತಾಂತದ ಕುರಿತು ಒಂದು ದೊಡ್ಡ ಫಲಕ, ಅದರ ಪಕ್ಕವೇ ಮಿಲಿಟರಿ ಕ್ಯಾಂಟೀನ್.  ಅಂದು ಭಾನುವಾರವಾದ್ದರಿಂದ ಪ್ರಸಾದದ ರೂಪದಲ್ಲಿ ನಮಗೆ ಸೈನಿಕರ ಕೈಯೂಟ...! ಸರಳ, ರುಚಿಕರ ಊಟ, ಕುಡಿಯಲು ಬಿಸಿ ನೀರು, ಆದರಾತೀಥ್ಯ ನೋಡಿ ನಾನಂತೂ ಭಾವುಕಳಾಗಿಬಿಟ್ಟಿದ್ದೆ… ಸೌಭಾಗ್ಯವೆಂದರೆ ಇದೇನಾ ಅನಿಸಿಬಿಟ್ಟಿತ್ತು...! ಇವರೂ ಮೂಕರಾಗಿದ್ದರು… ಸೈನ್ಯವೆಂದರೆ ಇವರಿಗೂ ಅದೇನೋ ಶ್ರದ್ಧೆ, ಗೌರವ, ಆಕರ್ಷಣೆ…


ಬಾಬಾ ಅವರ ಕಥೆ ರೋಚಕ! ೧೯೬೬ ರಲ್ಲಿ ಸಿಪಾಯಿ ಹುದ್ದೆಯಲ್ಲಿ ಅವರು ಸೈನ್ಯ ಸೇರಿದ್ದರು. ೧೯೬೮ರಲ್ಲಿ ನೈಸರ್ಗಿಕ ವೈಪರೀತ್ಯದಿಂದ ಸಿಕ್ಕಿಂ, ಮತ್ತು ಉತ್ತರ ಬಂಗಾಳದಲ್ಲಿ ಸಾವಿರಾರು ಜನರ ಸಾವು ಸಂಭವಿಸಿತ್ತು. ಇಂಥದೇ ಒಂದು ದಿನ, ಅಕ್ಟೊಬರ್ ೪, ೧೯೬೮ರಲ್ಲಿ ಬಾಬಾ ಅವರು ತುಕುಲಾನಿಂದ ಡೆಂಗ್‍ಚುಕ್ಲಾಗೆ ಕೆಲವು ಜನರನ್ನು ಹೇಸರಗತ್ತೆಯ ಮೇಲೆ ಸಾಗಿಸುತ್ತಿರುವಾಗ ಜೋರಾಗಿ ಹರಿಯುತ್ತಿದ್ದ ಒಂದು ಪ್ರವಾಹದಲ್ಲಿ ಕಾಲ್ಜಾರಿ ಬಿದ್ದು ಮುಳುಗಿ ಹೋದರು. ಅವರು ನಾಪತ್ತೆಯಾದ ೫ನೇ ದಿನದಂದು ಅವರು ತಮ್ಮ ಸಹೋದ್ಯೋಗಿ ಪ್ರೀತಂ ಸಿಂಗ್‍ನ ಕನಸಲ್ಲಿ ಬಂದು, ತನ್ನ ಜೊತೆ ನಡೆದ ಆ ದಾರುಣ ಘಟನೆಯ ವಿವರಗಳನ್ನು ನೀಡಿ, ತಮ್ಮ ಮೃತ ಶರೀರ ಹಿಮದ ಗುಡ್ಡೆಯ ಕೆಳಗೆ ಮುಚ್ಚಿಹಾಕಿಕೊಂಡಿದೆ ಎಂದು ತಿಳಿಸಿದರಂತೆ, ಹಾಗೇ ತನಗಾಗಿ ಒಂದು ಸಮಾಧಿಯನ್ನೂ ನಿರ್ಮಿಸುವಂತೆ ಆಸೆ ವ್ಯಕ್ತ ಪಡಿಸಿದರಂತೆ. ಪ್ರೀತಮ್ ಸಿಂಗ್ ಇದೆಲ್ಲ ತಮ್ಮ ಕಲ್ಪನೆಯಷ್ಟೇ ಅಂತ ಆ ಕನಸನ್ನು ನಿರ್ಲಕ್ಷಿಸಿದರಂತೆ. ಆದರೆ ಕೆಲ ದಿನಗಳ ನಂತರ ಹರಭಜನ್ ಸಿಂಗ್ ಅವರ ಮೃತ ದೇಹ ಪ್ರೀತಂ ಸಿಂಗ್‍ಗೆ ಕನಸಿನಲ್ಲಿ ತಿಳಿಸಿದ ಜಾಗದಲ್ಲೇ ದೊರೆತಾಗ ಎಲ್ಲರೂ ಆಶ್ಚರ್ಯಚಕಿತರಾದರಂತೆ. ಹರಭಜನ್ ಸಿಂಗ್ ಅವರಿಗೆ ಗೌರವ ನೀಡಲೆಂದು ಅವರಾಸೆಯಂತೆ ಅವರ ಸಮಾಧಿಯನ್ನು ಛೋಕ್ಯಾಛೋ ಬಳಿ ನಿರ್ಮಿಸಲಾಗಿದೆ. ಅವರು ಇಂದಿಗೂ ಗಡಿ ಪ್ರದೇಶದಲ್ಲಿ ನಡೆಯುವ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಸೈನಿಕರ ಕನಸಲ್ಲಿ ಬಂದು ಮಾಹಿತಿ ನೀಡುವರೆಂಬ ನಂಬಿಕೆಯಿದೆ. ಚೀನಾ ಸೈನಿಕರೂ ಸಹ ಈ ಸತ್ಯವನ್ನು ನಂಬುತ್ತಾರೆ. ಇಂದಿಗೂ ಹರಭಜನ್ ಸಿಂಗ್ ಅವರ ಕಛೇರಿ (ಹೊಸ ಬಾಬಾ ಮಂದಿರ್ ಬಳಿ) ಕಾರ್ಯ ನಿರತವಾಗಿದೆ. ಅವರಿಗೀಗ ಸೈನ್ಯದಲ್ಲಿ ಗೌರವಾರ್ಥಕ ಕ್ಯಾಪ್ಟೇನ್ ಹುದ್ದೆ ನೀಡಲಾಗಿದೆ. (ಪಕ್ಕದ ಚಿತ್ರದಲ್ಲಿರುವ ಮಾಹಿತಿ ಓದಿ).

ಬಾಬಾ ಮಂದಿರ್‌ನಿಂದ ಸ್ವಲ್ಪವೇ ದೂರದಲ್ಲಿ ಹೊಸ ಬಾಬಾ ಮಂದಿರ್ ಇದೆ. ಅಲ್ಲಿಯೇ ಅವರ ಕಛೇರಿಯಿದೆ, ಅವರ ಹಾಸಿಗೆ, ಚಪ್ಪಲಿಗಳು, ಬೂಟುಗಳು, ಯೂನಿಫಾರ್ಮ್, ಅವರಿಗೆ ಬಂದ ಪತ್ರಗಳು ಎಲ್ಲದರ ಸಂಗ್ರಹವಿದೆ. ಫೋಟೊ ತೆಗೆಯಲು ಯಾವುದೇ ಕಟ್ಟಳೆಯಿಲ್ಲ.. ಮಂದಿರ್‌ ಇರುವ ಸ್ಥಳ ರಮಣೀಯ. ಬಾಬಾಗೆ ಈಗಲೂ ವಾರ್ಷಿಕ ರಜೆಗಳು, ಸಂಬಳ ಸಂದಾಯವಾಗುತ್ತವೆ.

ಅಲ್ಲಿಂದ ನಮ್ಮ ಪಯಣ ಚಂಗು ಸರೋವರದೆಡೆಗೆ. ಹಾದಿಯಲ್ಲಿ ನಾಥುಲಾ ಪಾಸ್‌ಗೆ (ಭಾರತ-ಚೀನಾ ಗಡಿ) ಹೋಗುವ ದಾರಿ, ಭಾರತ-ಚೀನಾ ಗಡಿ ವ್ಯಾಪಾರ ಪ್ರದೇಶಗಳು, ಇವುಗಳನ್ನೆಲ್ಲ ನೋಡುತ್ತ ಮುನ್ನಡೆದಾಗ ಕಂಡದ್ದು ಮೋಡದ ಮಧ್ಯದಲ್ಲೂ ಸೂರ್ಯನ ಹೊಳಹನ್ನು ಪ್ರತಿಫಲಿಸುತ್ತಿದ್ದ ಪ್ರಶಾಂತ ಚಂಗು ಸರೋವರ.

Tsomgo ಅಂದರೆ ಭುತಿಯಾ ಭಾಷೆಯಲ್ಲಿ ನೀರಿನ ಮೂಲ ಎಂದು ಅರ್ಥವಂತೆ.  ದೈವಿಕ ಸೌಂದರ್ಯವುಳ್ಳ ಈ ಸರೋವರ, ಬೇರೆ-ಬೇರೆ ಋತುಗಳಲ್ಲಿ ಬೇರೆ-ಬೇರೆಯಾಗಿ ಕಾಣುವುದು. ಚಳಿಗಾಲದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟುವ ಈ ಸರೋವರ, ವಸಂತದಲ್ಲಿ ಬಣ್ಣ-ಬಣ್ಣದ ಹೂಗಳ ಆವರಣದಿಂದ (ಸರೋವರವನ್ನು ಸುತ್ತುವರೆದ ಬೆಟ್ಟಗಾಡಿನಲ್ಲಿ ಅರಳುವ ಹೂಗಳಿಂದ) ಅಲಂಕರಿಸಲ್ಪಡುತ್ತದೆ. ನನಗೆ ಅಕ್ಟೋಬರ್ ತಿಂಗಳಲ್ಲೇ ಬಣ್ಣಗಳ ರಾಶಿ ಕಂಡದ್ದಾಗಿದೆ… ಹಾಗಾದರೆ ಇಲ್ಲಿನ ವಸಂತ ಹೇಗಿರಬೇಡ?!!

ಈ ಸರೋವರವನ್ನು ಸಿಕ್ಕಿಂ ಪ್ರಾಂತದ ಜನ ಪವಿತ್ರವೆಂದು ಪರಿಗಣಿಸುತ್ತಾರೆ (ಮತ್ತು ಇದು ನಿಜಕ್ಕೂ ಪವಿತ್ರ, ಶುದ್ಧ…! ಗಂಗೆಯ ನೆನಪಾಗುತ್ತಿದೆ  :-( ) ಹಳೆಯ ಕಾಲದಲ್ಲಿ ಬೌದ್ಧ ಧರ್ಮದ ಗುರುಗಳು ಭವಿಷ್ಯವನ್ನು ಊಹಿಸಲು ಈ ಸರೋವರದ ಬಣ್ಣ ಬದಲಾವಣೆಯನ್ನು ಅಭ್ಯಸಿಸುತ್ತಿದ್ದರಂತೆ. ಇಂದಿಗೂ ಗುರು ಪೂರ್ಣಿಮೆಯ ದಿನ ಈ ಸರೋವರಕ್ಕೆ ಪ್ರಾರ್ಥನೆ ಸಲ್ಲಿಸಲು ರಾಜ್ಯದ ಜನತೆ ಒಟ್ಟುಗೂಡುತ್ತಾರಂತೆ.

ಇಂಥ ನಯನ ಮನೋಹರ ಸ್ಥಳದಲ್ಲಿ, ಸೈನಿಕರೊಂದಿಗೆ ಕೆಲವು ಮೌನ ನಿಮಿಷಗಳನ್ನು ಆಚರಿಸಿ ಹೊರಡಲು ಅನುವಾಗುತ್ತಿದ್ದಂತೆ ಒಂದು ನಾಚಿಕೆ ಸ್ವಭಾವದ ಯಾಕ್ ಒಂದೆರಡು ಫೋಟೊಗಳಿಗೆ ಪೋಸ್ ಕೊಟ್ಟು ಓಡಿ ಹೋಯಿತು. ಮತ್ತೆ ನಮ್ಮ ಕಾರ್ ಚಾಲಕನ ಕರೆ! ಹೆಜ್ಜೆ ಕಿತ್ತಿಡಲಾಗದೇ ಹೊರಟಿದ್ದಾಯಿತು. ವಾಪಸ್ ಹೊರಡುವಾಗ ಗ್ಯಾಂಗ್‍ಟಾಕ್ ಮತ್ತು ಚಂಗು ಸರೋವರದ ನಡುವಣ ಸನಿಹದ ಮಾರ್ಗ ತೆರೆದಿತ್ತು ಎಂದು ಮಾಹಿತಿ ದೊರೆಯಿತು. ನಿರಮ್ಮಳವಾಗಿ ಅಲ್ಲಿಂದ ಹೊರಟರೆ… ಆ ದಾರಿ ನೋಡಿ ನಾವೆಲ್ಲ ದಂಗು! ದುರ್ಗಮ ದಾರಿ, ಅಲ್ಲಲ್ಲಿ ಕಾಣುವ ಲ್ಯಾಂಡ್ ಸ್ಲೈಡ್, ರೊಜ್ಜು-ರೊಜ್ಜು ರಸ್ತೆ, ಜಿಟಿ-ಜಿಟಿ ಮಳೆ...

ಗಂಟೆಗಟ್ಟಲೇ ಹರ್ಷ, ಗೌರವ, ಆಶ್ಚರ್ಯ, ಭಕ್ತಿ ಇಂಥ ನವಿರು ಭಾವಗಳಲ್ಲೇ ಕಳೆದುಹೋಗಿದ್ದವರಿಗೆ, ಈ ಸಾಹಸಮಯ ಪಯಣ ಬೇರೆ ಬದಲಾವಣೆಯನ್ನೇ ತಂದಿತ್ತು.. ಹೆಜ್ಜೆ-ಹೆಜ್ಜೆಗೂ ನಾವು ಜಾಗೃತರಾಗಿಬಿಟ್ಟಿದ್ದೆವು… ಕಳೆದು ಹೋದರೆ ಖಾಯಂ ಆಗಿ ಕಳೆದು ಹೋಗೋ ಅಪಾಯ :-) ಅಂತೂ-ಇಂತೂ ಸುರಕ್ಷಿತವಾಗಿ ಗ್ಯಾಂಗ್‍ಟಾಕ್ ಸೇರಿಯಾಗಿತ್ತು. ನೆನಪಿನಂಗಳಕ್ಕೆ ಇನ್ನೊ(ನ್ನೆ)ಂ(ದೂ) ಮರೆಯದ ದಿನವೊಂದು ಸೇರ್ಪಡೆಯಾಗಿತ್ತು :-) ಮತ್ತೆ ಮಳೆ ಸುರಿಯತೊಡಗಿತ್ತು ...!

Wednesday, October 17, 2012

ಉತ್ತರಗಳು ಎತ್ತರಗಳು...

(ಅವಧಿಯಲ್ಲಿ 15/10/2012 ರಂದು ಪ್ರಕಟವಾದ ಪ್ರವಾಸ ಕಥನದ ಎರಡನೇ ಭಾಗ  - ಇಲ್ಲಿ ಹೆಚ್ಚಿನ ಚಿತ್ರಗಳಿವೆ ಅಷ್ಟೇ :-) ಮತ್ತೊಮ್ಮೆ ಓದಬೇಕು ಅನಿಸಿದರೆ ಓದಿ. ಅಥವಾ ಅವಧಿನಲ್ಲಿ ಓದಿಲ್ಲ ಅಂದ್ರೆ, ತಪ್ಪದೆ  ಓದಿ)

ಕತ್ತಲಾದಷ್ಟೇ ಬೇಗ ಬೆಳಕೂ ಆಗಿಬಿಟ್ಟಿತ್ತು... ೪:೪೫ ರ ಮುಂಜಾವಿನಲಿ ಕಣ್ಬಿಟ್ಟಿದ್ದು ತನ್ನಷ್ಟಕ್ಕೇ ತಾ ಹಾಡಿಕೊಳ್ಳುತ್ತಿದ್ದ ಹಕ್ಕಿಯ ಗಾನಕ್ಕೆ. ಯಾಂತ್ರಿಕ ದಿನಚರಿಯ ಹಂಗಿಲ್ಲದ ಆ ಬೆಳಗಿನಲ್ಲಿ, ಲಗು-ಬಗೆಯಿಂದ ತಯಾರಾಗಿ, ಕ್ಯಾಮೆರಾ ಜೋತು ಹಾಕಿಕೊಂಡು, ಬೆಳಗಿನ ವಾಯು ವಿಹಾರಕ್ಕೆ ಹೆಜ್ಜೆ ಕಿತ್ತಿಟ್ಟು ಹೊರ ನಡೆದಾಗ... ತಾಜಾ ಅನಿಸೋ ಮೌನ, ಚಿಲಿ-ಪಿಲಿ ಗಾನ, ರಾತ್ರಿ ಮಳೆಯ ನೆನಪು, ಎಲ್ಲ ತಳಕು ಹಾಕಿಕೊಂಡು ಆ ಮುಂಜಾವನ್ನು ಮತ್ತಷ್ಟು ಮಧುರವಾಗಿಸಿಬಿಟ್ಟಿದ್ದವು...ಈ ಥರ ಜಗದ ಚಿಂತೆ ಬಿಟ್ಟು ಪ್ರವಾಸಕ್ಕೆ ಹೊರಟಾಗೆಲ್ಲ ನಮ್ಮ ಮೂರನೇ ಕಣ್ಣು ತೆರೆದುಕೊಳ್ಳುತ್ತದೋ ಏನೋ.. ದಿನದ ಚೆಲುವನ್ನು ಆರಾಧಿಸುವ ಮನೋಭಾವ ತಾನೇ ತಾನಾಗಿ ಮೂಡಿಬಿಟ್ಟಿರುತ್ತದೆ! ದಾರಿಗುಂಟ ಅರಳಿದ ಹೂಗಳು, ಅವುಗಳ ಮೇಲಿನ ಮಂಜಿನ ಹನಿ, ಮಳೆಯಲ್ಲಿ ನೆಂದು ಬೆಳಗಿನ ಸೊಬಗಲ್ಲಿ ಮೈ ತೊಳೆದುಕೊಳ್ಳುತ್ತಿದ್ದ ಜೇಡರ ಬಲೆ, ಇದು ಬರಿ ಬೆಳಗಲ್ಲೋ ಅಣ್ಣಾ ಅಂತ ಗುನುಗುನಿಸುತ್ತಾ, ವಾಯು ವಿಹಾರ ಮುಗಿಸಿ ರಿಸಾರ್ಟ್‍ನ ಹುಲ್ಲು ಹಾಸಿಗೆ ಮರಳಿದ ನನ್ನನ್ನು ಮರಳು ಮಾಡಿದ್ದು...’ಹನಿ, ಹನಿ, ಹನಿ, ಹನಿ.... ತುಂತುರು ಮಳೆ ಹನಿ!’ 

ರಾತ್ರಿಯೆಲ್ಲಾ ಧಾರಾಕಾರವಾಗಿ ಮಳೆ ಸುರಿದಿದ್ದರೂ ಆಗಲೇ ಎಳೆ ಬಿಸಿಲು ಮುಗುಳು ನಗುತ್ತಿತ್ತು (ನಮ್ಮ ಪುಣ್ಯ! :-)) ಜೊತೆಗೇ ನನ್ನ ಮಗ ಮತ್ತು ಅವರಪ್ಪನೂ (ಅಷ್ಟೊತ್ತಿಗಾಗಲೇ ಅವರೂ ರಿಸಾರ್ಟ್ ಅಲ್ಲೇ ವಿಹಾರಿಸಲು ಬಂದು ಬಿಟ್ಟಿದ್ದರು). ಊಂಹೂಂ... ನನ್ನ ಮಗನ ಮುಗುಳುನಗೆಗಿಂತ ಕ್ಷಣಗಳ ಹಿಂದೆ ನನ್ನ ಮರಳು ಮಾಡಿದ್ದ ಇಬ್ಬನಿ ಹನಿಯೋ/ಮಳೆ ಹನಿಯೋ ಗೊತ್ತಿಲ್ಲ...ಅದರ ಆಕರ್ಷಣೆ ವಿಪರೀತ! ಪ್ರತಿ ಹುಲ್ಲು ಗರಿಕೆಯ ಮೇಲೆ ಅಣಿಗೊಳಿಸಿದಂತಿದ್ದ ಹನಿ ಮಾಲೆಗಳು.. ಮತ್ತೆ ಫೋಟೊ ತೆಗೆಯಲು ಮುಂದಾದೆ. ಒಂದೆರಡು ಫೋಟೊ ಕ್ಲಿಕ್ಕಿಸುವುದರಲ್ಲೇ ನನ್ನ ಕಣ್ಣು ಕಂಡಿದ್ದು ಅದ್ಭುತ...! 
ರೋಮಾಂಚನವೋ, ಜ್ಞಾನೋದಯವೋ, ಅಂಥದ್ದೇ ಏನೋ ಆಗಿತ್ತು ನನಗೆ ಆ ಕ್ಷಣದಲ್ಲಿ...’ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ!’ ಹುಲ್ಲು ಗರಿಕೆಯಿಂದ ಕಣ್ತೆಗೆದಾಗ ನನಗೆ ಕಂಡಿದ್ದು ಎರಡು ಪುಟ್ಟ ಹಸಿರೆಲೆಗಳ ನಡುವೆ ಸಂತೃಪ್ತಿಯಿಂದ ಮಿಂಚುತ್ತಿದ್ದ ಸೌಂದರ್ಯ, ಮುದ್ದು ಬೆಳಕಿನ ಮಣಿ, ಅದೇ ಆ ಇಬ್ಬನಿ ಹನಿ! ಹಸಿರೆಲೆಗಳ ಬೊಗಸೆಯಲ್ಲಿ ಹಿತವಾಗಿ ನಗುತಿದ್ದ ಆ ಹನಿಯಲ್ಲಿ ಜಗವೆಲ್ಲ ಕಾಣುತ್ತಿತ್ತು... ಎಳೆ ಬಿಸಿಲ ಬೆಳಕ ಸಾರವನ್ನು ಹೀರಿ, ಮಿರಿ-ಮಿರಿ ಮಿಂಚುತ್ತಿದ್ದ ಹನಿ, ಸಂಪೂರ್ಣ ಪಾರದರ್ಶಕ! ವಜ್ರವೂ ನಾಚಬೇಕು ಅಂಥ ಹೊಳಹು... ಆ ಪುಟ್ಟ ಹನಿಯಲ್ಲಿ ಅದರ ಸುತ್ತಲಿನ ಹಸಿರು, ಬೆಳಗಿನ ಆ ಮುಗಿಲು, ಅಷ್ಟೇ ಯಾಕೆ.. ಆ ರವಿಯೂ ಕೂಡ ಪ್ರತಿಫಲಿಸಿಬಿಟ್ಟಿದ್ದ... ಜಗವೊಂದು ಹನಿಯೊಳಗಂತೆ!

ಮನಸಿಲ್ಲದ ಮನಸಿನಿಂದ ಅಲ್ಲಿಂದ ಹೆಜ್ಜೆ ಕಿತ್ತು, ಮುಂದಿನ ಪ್ರವಾಸದೆಡೆಗೆ ಹೆಜ್ಜೆಯಿಡಬೇಕಾಯಿತು. ಆವತ್ತು ನಮ್ಮ ಪಯಣದ ಪಟ್ಟಿಯಲ್ಲಿದ್ದದ್ದು, ಕೇವಲ ಚಂಗು ಸರೋವರ, ಬಾಬಾ ಮಂದಿರ್ ಮತ್ತು ನಾಥುಲಾ ಪಾಸ್ (ಭಾರತ-ಚೀನಾ ಗಡಿ). ಗ್ಯಾಂಗ್‍ಟಾಕ್‍ನಿಂದ ಈ ಸ್ಥಳಗಳೆಲ್ಲ ಒಂದು ೪೦-೫೦ ಕಿ.ಮೀ. ದೂರ. ಈ ಎಲ್ಲ ಸ್ಥಳಗಳು ಮಿಲಿಟರಿ ಸರಹದ್ದಿನಲ್ಲಿ ಬರುವ ಜಾಗಗಳು. ಹೀಗಾಗಿ ಅಲ್ಲಿ ಹೋಗಲು ಮಿಲಿಟರಿ ಅನುಮತಿ ಪಡೆಯಬೇಕಾಗುತ್ತದೆ.. ಈ ಅನುಮತಿ ದೊರೆಯುವುದೂ ಒಂಥರ ಅದೃಷ್ಟದ ವಿಷಯವೇ! ನಮ್ಮ ಅದೃಷ್ಟಕ್ಕೆ, ನಮಗೆ ಚಂಗು ಸರೋವರ ಮತ್ತು ಬಾಬಾ ಮಂದಿರ್‌ಗೆ ಹೋಗಲು ಅನುಮತಿ ದೊರೆತಿತ್ತು..ನಾಥುಲಾ ಪಾಸ್‍ಗೆ ಹೋಗಲು ಅನುಮತಿ ದೊರೆಯಲಿಲ್ಲ. ಹಿಂದಿನ ದಿನದ ಮಳೆಯ ಪ್ರಭಾವದಿಂದಾಗಿ ಚಂಗು ಸರೋವರಕ್ಕೆ ಹೋಗಲು ಇದ್ದ ಸನಿಹದ ದಾರಿಯನ್ನು ಮುಚ್ಚಲಾಗಿತ್ತು (ಲ್ಯಾಂಡ್ ಸ್ಲೈಡ್ ಅಲ್ಲಿ ಸರ್ವೇ ಸಾಮಾನ್ಯ).. ಹೀಗಾಗಿ ನಮ್ಮ ಕಾರ್ ಚಾಲಕ ಹೇಳಿದ್ದು, ನಾವು ಚಂಗು ಸರೋವರ ತಲುಪಲು ಕನಿಷ್ಟ ಒಂದು ೪-೫ ಗಂಟೆ ಬೇಕಾಗಬಹುದು ಅಂತ. ಆದದ್ದಾಗಲಿ ಅಂತ ನಾವೂ ಹೊರಟೇ ಬಿಟ್ಟೆವು.

ಮರೆವು ನನಗೊಂದು ವರ! :-) ದಾರಿ ದೂರ ಅಂತ ಗೊತ್ತಾಗಿಯೂ ಯಾವುದೇ ಪುಸ್ತಕವಿಲ್ಲದೇ ನಾ ಕಾರ್ ಏರಿದ್ದೆ. ನಿಸರ್ಗವನ್ನು, ಪಯಣವನ್ನು ಆಸ್ವಾದಿಸುವುದು, ಸಂಗೀತವನ್ನು ಆಲಿಸುವುದು ನನ(ಮ)ಗೆ ಇದ್ದ ಎರಡೇ ಆಯ್ಕೆಗಳು. ಹೀಗಾಗಿ ಆ ಕ್ಷಣದಲ್ಲೇ ಬದುಕಬೇಕಾದ ಅದ್ಭುತ ಅವಕಾಶ ಅಲ್ಲಿತ್ತು. ದಾರಿಗುಂಟ ಹಸಿರು, ಹೆಜ್ಜೆ-ಹೆಜ್ಜೆಗೂ ಎದುರಾಗುವ ಝುಳು-ಝುಳು ಝರಿಗಳು, ಆ ಪ್ರದೇಶದ ಜನ, ಬಣ್ಣ-ಬಣ್ಣದ ಧ್ವಜಗಳು (ಸಿಕ್ಕಿಂನಲ್ಲಿ, ಹುಟ್ಟು, ಸಾವು, ಮತ್ತು ಇತರ ಪ್ರಮುಖ ಸಂದರ್ಭಗಳಲ್ಲಿ ದೇವರ ಮಂತ್ರಗಳನ್ನೊಳಗೊಂಡ ಧ್ವಜಗಳನ್ನು ನೆಡುವ ಪರಿಪಾಠವಿದೆ.. ಇಷ್ಟು ನಾ ಮಾಡಿದ ವಿಚಾರಣೆಯಿಂದ, ನನಗೆ ಅರ್ಥವಾಗಿದ್ದು) ಹೀಗೇ ದಾರಿ ಸಾಗುತ್ತಿತ್ತು. ಭತ್ತ ಹೇಗೆ ಬಿಡುತ್ತದೆ ಎಂದು ನೋಡಬೇಕೆಂದುಕೊಂಡಿದ್ದ ನನ್ನ ಬಹಳ ದಿನದ ಕುತೂಹಲಕ್ಕೂ ಅಂದು ನನಗೆ ಉತ್ತರ ಸಿಕ್ಕಿತ್ತು... 


ದಾರಿಯಲ್ಲಿ ಒಂದು ಮರದ ಕೆಳಗೆ ಬಸ್‍ಗಾಗಿ ಕಾದಿದ್ದ ಅಜ್ಜಿಯೊಬ್ಬಳ ಫೋಟೊ ತೆಗೆಯಬೇಕೆಂದು ಬಹಳ ಮನಸಾಗಿತ್ತು.. ಆದರೆ ನಮ್ಮ ಕಾರ್‌ನ ಚಾಲಕ್ ನಾನ್-ಸ್ಟಾಪ್! ಅದ್ಯಾಕೋ ಗೊತ್ತಿಲ್ಲ ಸ್ವಲ್ಪ ದೂರದಲ್ಲಿ ಅವನು ಕಾರ್ ನಿಲ್ಲಿಸಿದ್ದ ಏನೋ ವಿಚಾರಿಸಲು! ನಾನು ಹೇಳದೇ-ಕೇಳದೇ ಪರಾರಿಯಾದೆ… ಆದರೆ ಆ ಅಜ್ಜಿ ಕೂತಿದ್ದು ಬಹಳ ದೂರವಿತ್ತು ಅನ್ಸತ್ತೆ.. ದಾರಿಯಲ್ಲಿ ಇನ್ನೊಬ್ಬ ಹೆಂಗಸು ಕಂಡಳು.. ’ನಿಮ್ಮ ಫೋಟೊ ತೆಗೀಲಾ?’ ನಾ ಕೇಳಿದೆ. ’ಮೊದಲು ದುಡ್ಡು ತೆಗಿ’ ಅವಳೆಂದಳು.. ನಾ ದಂಗು! ಕಾರ್‌ಗೆ ಮರಳಿದ್ದು ಇಂಗು ತಿಂದ ಮಂಗು...!

ಪ್ರಶ್ನೆ ಕೇಳದೇ ಉತ್ತರಿಸಿದ್ದು ಪ್ರಕೃತಿ.. ಪ್ರಶ್ನೆ ಕೇಳಿ ಉತ್ತರಿಸಿದ್ದು ಮಾನವಿ! ಕೆಲವು ಉತ್ತರಗಳೊಡನೆ, ಮತ್ತೆ ಕೆಲವು ಪ್ರಶ್ನೆಗಳೊಡನೆ ಎತ್ತರದೆಡೆಗೆ ಹೊರಟಿದ್ದ ನಾನು…

Monday, October 15, 2012

ಹೀಗೊಂದು ಪ್ರಕಟಣೆ...

ಪ್ರವಾಸ ಕಥನದ ಮುಂದಿನ ಕಂತುಗಳು ಅವಧಿಯಲ್ಲಿ ಇಂದಿನಿಂದ ಪ್ರಕಟವಾಗುತ್ತಿವೆ. ದಯವಿಟ್ಟು ಈ ಲಿಂಕ್ ವೀಕ್ಷಿಸಿ, ನಿಮ್ಮ ಸಹ-ಪಯಣ ಮುಂದುವರೆಸಿ....

http://avadhimag.com/ (ಇವತ್ತಿನ ಕಂತು: http://avadhimag.com/?p=66314)

ಧನ್ಯವಾದಗಳು
-ಮಂಜುಳಾ

Tuesday, October 09, 2012

ಗಗನ-ಅವನಿಯ ಪಯಣ...

(29-09-2012ರಂದು ನಮ್ಮ ಗ್ಯಾಂಗ್‍ಟಾಕ್  ಪ್ರವಾಸದ ಮೊದಲ ದಿನದ ಮರುಕಳಿಕೆ )

ಹಲವು ಕಲ್ಪನೆಗಳು, ಯೋಚನೆಗಳನ್ನು ಹೊದ್ದು ಮಲಗಿದಾಗ ಆಗಲೇ ರಾತ್ರಿ ೧೦ ಘಂಟೆ... ದಿನವೂ ತಡ ಮಾಡದೇ ಆವರಿಸಿಕೊಳ್ಳುವ ನಿದ್ದೆ ಅಂದ್ಯಾಕೋ ಹತ್ತಿರ ಸುಳಿಯಲೂ ಪರದಾಡುತ್ತಿತ್ತು.. ರಾತ್ರಿ ೩:೩೦ಕ್ಕೆ  ವಿಮಾನ ನಿಲ್ದಾಣಕ್ಕೆ ಹೊರಡಲು ಕಾರ್‌ನ ವ್ಯವಸ್ಥೆಯಾಗಲೇ ಆಗಿತ್ತು..ನಿದ್ದೆಯ ಶಾಸ್ತ್ರ ಮುಗಿಸಿ ೨:೩೦ಕ್ಕೆ  ಎದ್ದು ತಯಾರಾಗಿದ್ದಾಯಿತು. ಅನುಭವಗಳ ಸರಮಾಲೆಗೆ ಪೋಣಿಸಿದ ಮೊದಲ ಮಣಿ - ಟ್ರಾಫಿಕ್ ರಹಿತ ಬೆಂಗಳೂರು ರಸ್ತೆಗಳಲ್ಲಿ, ತಂಗಾಳಿಯಲ್ಲಿ ವಿಮಾನ ನಿಲ್ದಾಣ ಸೇರಿದ ಅನುಭವ :-) ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್‍ಗಿಂತಲೂ ಮೊದಲು ನನ್ನನ್ನು ಆಹ್ವಾನಿಸಿದ್ದು (ನಮ್ಮವರು ಇದನ್ನು ಗಮನಿಸಿರಲಿಕ್ಕಿಲ್ಲ ಅಂತ ನನ್ನ ಗುಮಾನಿ ;-)) ಚಿಂವ್ ಚಿಂವ್ ಗುಬ್ಬಿ...! ಅವರು ಚೆಕ್‍ಇನ್ ವಿವರಗಳನ್ನು ವಿಚಾರಿಸುತ್ತಿದ್ದರೆ ನನಗೆ ರೇಡಿಯೋ ಗಾನ! ಮುಂದುವರೆದಂತೆ ಕಂಡಿದ್ದು ಮತ್ತಷ್ಟು, ಮಗದಷ್ಟು ಗುಬ್ಬಿಗಳು... ವಿಮಾನ ನಿಲ್ದಾಣದ ದುಬಾರಿ ಛಾ ಅಂಗಡಿಗಳಲ್ಲಿ, ಜಾರಿ ಬೀಳುವಂತಹ ನೆಲಹಾಸುಗಳ ಮೇಲೆ ಜಿಗಿದಾಡುತ್ತ, ಚಿಂವ್‍ಗುಟ್ಟುತ್ತಿದ್ದ ಗುಬ್ಬಿಗಳನ್ನು ಕಂಡು ನನ್ನ ಮನಸಲಿ ಮೂಡಿದ ಫೇಸ್‍ಬುಕ್ ಸ್ಟೇಟಸ್ ’ಬೆಂಗಳೂರಿನ ಗುಬ್ಬಿಗಳೂ ಮಹತ್ವಾಕಾಂಕ್ಷಿಗಳು, ಊರು ಬಿಟ್ಟು ಸೇರಿವೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ!’  ಆದರೆ ಪೋಸ್ಟ್ ಮಾಡಲಿಲ್ಲ ಅಷ್ಟೇ ;-)
೬:೦೫ರ ಚುಮು-ಚುಮು ಮುಂಜಾವಿನಲ್ಲಿ, ರೆಕ್ಕೆಯಿಲ್ಲದೇ, ಪುಕ್ಕವಿಲ್ಲದೇ ಗಗನಕ್ಕೆ ಹಾರಿದ್ದಷ್ಟೇ! ಕೆಲವೇ ನಿಮಿಷಗಳಲ್ಲಿ ಬೇರೊಂದು ಲೋಕ...! ದೇವರ ಫೋಟೊಗಳೋ.., ’ನಾರಾಯಣ ನಾರಾಯಣ’ ನಾರದನ ಚಿತ್ರಣಗಳೋ… ಏನೋ ಗೊತ್ತಿಲ್ಲ, ತೇಲುವ ಮೋಡಗಳೊಡನೆ ತೇಲುವಾಗ ನನಗೆ ಯಾವಾಗಲೂ ಅನಿಸೋದು, ನಾವೆಲ್ಲ ಆ ಕ್ಷಣದಲ್ಲಿ ಕೈಲಾಸ ವಾಸಿಗಳು ಅಂತ! ;-) ನಿಮಿಷಗಳುರುಳಿದಂತೆ ಕಲ್ಪನೆಗಳು ಗರಿಗೆದರಿದ್ದವು...ಮೋಡಗಳು ಸಾಗರವಾಗಿ, ನದಿಯಾಗಿ, ಕಾಡಾಗಿ, ತೇಲುವ ಭಾವವಾಗಿ ಮನಸೂರೆಗೊಂಡಿದ್ದವು.. ಓಹ್...! ಆಗಲೇ ಕೋಲ್ಕತ್ತ ಬಂದಾಗಿತ್ತು.. ಕೈಲಾಸದಿಂದ ೨೯ ಡಿಗ್ರೀ ಸೆಲ್ಷಿಯಸ್^ನ  ಧಗೆಯ ಧರೆಗೆ ಮರಳಿಯಾಗಿತ್ತು!

ಕೆಲ ಗಂಟೆಗಳ ಕಾಲ ಹರಣ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ… ಆ ಸಮಯದಲ್ಲಿ ಮನವನಾಳಿದ್ದು Paulo Coelhoರ The Witch of Portobello ಪುಸ್ತಕ... ಆಗ ಓದಿದ ಕೆಲವು ಅದ್ಭುತ ಸಾಲುಗಳು.. " I watched you dancing. Well, I do the same thing, except that it’s the letters, not my body, that dance". ನಂತರ ಕೋಲ್ಕತ್ತದಿಂದ ಭಾಗ್‍ಡೊಗ್ರ ವಿಮಾನ ನಿಲ್ದಾಣ ಚಿಟಿಕೆ ಹೊಡೆಯುವುದರಲ್ಲಿ ಬಂದು ಬಿಟ್ಟಿತ್ತು!

ಇಲ್ಲಿ ನನ್ನ ಪತಿರಾಯರಿಗೊಂದು ದೊಡ್ಡ ಧನ್ಯವಾದ ಅರ್ಪಿಸಲೇಬೇಕು! ನನ್ನೆಲ್ಲ ಅನುಭಗಳಿಗೆ ಅನುವು ಮಾಡಿ ಕೊಡುವವರೇ ಅವರು! ಮೊದಲೇ ಕಾದಿರಿಸಿದ ಆರಾಮದಾಯಕ Xyloನಲ್ಲಿ ಗ್ಯಾಂಗ್‍ಟಾಕ್ ಕಡೆಗೆ ಪಯಣ... ಕಣ್ಣರಳಿಸಿ ನೋಡುವುದೂ ಒಂದು ಕಲೆ! ನೋಡಿದಾಗ ಕಂಡಿದ್ದು... ಸಮತಟ್ಟು ನೆಲದಲ್ಲಿ ಬೆಳೆದ ಚಹಾ ಗಿಡಗಳು, ಸೀರೆಯುಟ್ಟು ಹೀರೊ ಸೈಕಲ್ ಏರಿದ ನೀರೆ, ಮೂರು ಗಾಲಿ ಸೈಕಲ್ ರಿಕ್ಷಾಗಳು, ಒಂದು ರಿಕ್ಷಾದ ಚಾಲಕನ ಆಸನಕ್ಕೆ ಅಂಟಿಸಿದ್ದ ಛತ್ರಿ (ಕೆಲಸ ಮುಖ್ಯ, ಸ್ವಯಂ ಕಾಳಜಿಯೂ ಅಷ್ಟೇ ಮುಖ್ಯ!)... ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ದಾರಿಗುಂಟ ನದಿ... ಆಹಾ! ನದಿಯೊಡನೆ ಓಡುವ ವಾಹನ.. (ದಿಕ್ಕು ಬೇರೆ, ಶೈಲಿ ಬೇರೆಯಾದರೂ!), ಹೆಜ್ಜೆಗೊಂದು River View ಹೋಟೆಲ್‍ಗಳು!

೬ ಗಂಟೆಗೆಲ್ಲ ದಟ್ಟ ಕತ್ತಲು, ಕತ್ತಲಾವರಿಸುತ್ತಿದ್ದಂತೆ ಭೇಟಿಯಾದ ನದಿ ತೀಸ್ತಾ.. ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದೊಡ್ಡ, ಪವಿತ್ರ ನದಿ. ಹುಣ್ಣಿಮೆ ಹಿಂದೋ ಮುಂದೋ ಇತ್ತು ಅನ್ಸತ್ತೆ, ಬೆಳದಿಂಗಳ ಮಾಯೆ ನದಿಯ ಕಲರವದೊಡನೆ ಹರಿಯುತ್ತಿತ್ತು... ಕಪ್ಪು-ಕಪ್ಪು, ಎತ್ತರದ ಬೆಟ್ಟಗಳು, ಹಾಲು ಬೆಳದಿಂಗಳು, ಬೆಳದಿಂಗಳ ಕುಡಿದು ಜುಳು, ಜುಳು ಹರಿಯುತ್ತಿದ್ದ ತೀಸ್ತಾ! ಕವಿ ಮನಸಿಗೆ ಇನ್ನೊಂದು ಲೋಕ... ಅಬ್ಬಾ! ಒಂದೇ ಲೋಕದಲ್ಲಿ ಮತ್ತೆ ಅದೆಷ್ಟು ಲೋಕಗಳು...!!


ಕಳೆದು ಹೋಗಿ ಮತ್ತೆ ಮರಳಿ, ಕಳೆದು ಹೋಗಿ ಮತ್ತೆ ಮರಳಿ, ಗ್ಯಾಂಗ್‍ಟಾಕ್ ತಲುಪಿದಾಗ ಗಂಟೆ ೮:೨೦, ಧೋ ಮಳೆಯ ಸ್ವಾಗತ! ಮಳೆಗೆ ಮನ ಹಿಗ್ಗಿದರೂ ಪ್ರವಾಸದ ಕಥೆಯೇನು ಅನ್ನೋ ಅಳುಕು ಹೀಗೆ ಬಂದು ಹಾಗೆ ಹೊಯ್ತು.. ಮಳೆ ಸ್ವಾಗತ ಕೋರಿದ ಪ್ರವಾಸಗಳೆಲ್ಲ ನನ್ನ ಅನುಭವದಲ್ಲಿ ಅದ್ಭುತವಾಗಿರುತ್ತವೆ... ಅದೇ ನಂಬಿಕೆಯೊಡನೆಯೇ ಕೋಣೆ ಸೇರಿ, ಬಿಸಿ-ಬಿಸಿ ಊಟವುಂಡು, ಬೆಚ್ಚಗೆ ಮಲಗಿದ್ದು.. ಮಳೆ ಸದ್ದಿಗೆ ಕಿವಿಯಾಗಿ!


Thursday, September 27, 2012

ಕ್ಷಮಿಸಿ. ಬಾಡಿಗೆಗೆ/ಭೋಗ್ಯಕ್ಕೆ ಅಲ್ಲವೇ ಅಲ್ಲ!ನೀನಿನ್ನು ಮರಳೋದಿಲ್ಲ ಅಂತ ತಿಳಿದ ಕೂಡಲೇ, ಹಿಂದೆ-ಮುಂದೆ ಯೋಚಿಸದೇ ನನ್ನ ಮನಸಿಗೊಂದು ದೊಡ್ಡ ಬೀಗ ಜಡಿದುಬಿಟ್ಟೆ. ಅದರ ಕೀಲಿ ಕೈ ನಿನಗೇ ಒಪ್ಪಿಸಿಬಿಡಬೇಕು ಅನ್ನೋ ಭಾವ ಬಹಳ ಕಾಡಿಬಿಟ್ಟಿತು ಆ ಕ್ಷಣದಲ್ಲಿ! ಬಡ್ಡೀ ಮಗಂದು ಕಣ್ಣೀರು ಬೀಗ ಜಡಿದ ಮನಸನ್ನೂ ಬಿಡಲ್ಲ... ತಿರುಗಿ ನೋಡಿದೆ, ನೀನಿರಲಿಲ್ಲ, ಬೀಗ ಬಧ್ರವಾಗಿತ್ತು,ಕಣ್ಣೀರೊರೆಸಿಕೊಂಡೆ!

ಬೇರೆ ಅವರಿಗೆ ಪ್ರೌಢ ಸಲಹೆಗಳನ್ನು ನೀಡುತ್ತಾ ತಿರುಗೋ ನನಗೆ ನಿನ್ನ ವಿಚಾರದಲ್ಲಿ ಅದೇನು ಬಾಲಿಶತನವೋ ಕೊನೆವರೆಗೂ  ಅರ್ಥ ಆಗಲೇ ಇಲ್ಲ! ’ನಾನು ಮಾರು ಹೋಗಿದ್ದು ನಿನ್ನ ಬಾಹ್ಯ ಸೌಂದರ್ಯಕ್ಕೆ ಅಲ್ಲವೇ ಅಲ್ಲ ಕಣೆ!’ ಅಂತ ನಾನಂದಾಗ, ನನಗೆ ಮುಂದೆ ಮಾತಾಡೋಕೆ ಅವಕಾಶವೇ ಕೊಡದಂತೆ ನೀನು ಕಿಲ-ಕಿಲನೆ ನಕ್ಕಿದ್ದೆ... ಆ ನಗುವಿನಲ್ಲಿದ್ದದ್ದು ನಿಷ್ಕಲ್ಮಶತೆ ಅಂತ ಈಗಲೂ ಮನಸು ನಂಬಿಕೊಂಡಿದೆ! ನಿನ್ನ ನಗೆ ನಿಂತಾಗ, ನನ್ನ ಪ್ರಶ್ನಾರ್ಥಕ ಮುಖ ನೋಡಿ, ನನ್ನನ್ನು ನೀ ಮೃದುವಾಗಿ ತಬ್ಬಿಕೊಂಡಾಗ, ಅಲ್ಲಿ ನುಸುಳಿದ್ದೂ ಇದೇ.. ಇದೇ ಬಡ್ಡೀ ಮಗ ಕಣ್ಣೀರು...! ಆ ಪುಟ್ಟ ಹನಿ ನೋಡಿ, ನೀ ಮತ್ತೆ ನಗುವಾಗಿದ್ದೆ.. ನನ್ನ ಪೌರುಷತ್ವ ಆಗ ಜಾಗೃತವಾಗಿಬಿಟ್ಟಿತ್ತು ... ಕಣ್ಣೀರು ಆವಿಯಾಗಿಬಿಟ್ಟಿತ್ತು.

ಈಗ..? ಈಗ ಎನೂ ಮೊದಲಿನಂತಿಲ್ಲ.. ನೀನೆಷ್ಟು ನನ್ನ ಲವಲವಿಕೆಯ ಹಿಂದಿನ ಸಾಮರ್ಥ್ಯವಾಗಿದ್ದೆಯೋ ಅಷ್ಟೇ ನನ್ನ ಅತಿ ದೊಡ್ಡ ದೌರ್ಬಲ್ಯವೂ ಆಗಿದ್ದೆ… ಈ ವಿಚಾರ ಇಬ್ಬರಿಗೂ ತಿಳಿದಿತ್ತು. ನೀನಿರುವಾಗ ಆ ದೌಬರ್ಲ್ಯಕ್ಕೂ ಒಂದು ಮುಗ್ಧತೆಯಿತ್ತು, ಸೆಳೆತವಿತ್ತು... ಅಂತಹ ದೌರ್ಬಲ್ಯ ಮತ್ತೆ-ಮತ್ತೆ ಬೇಕು ಎಂದೆನಿಸುತ್ತಿತ್ತು. ಆದರೆ ನೀನಿಲ್ಲದಾಗ ಅದೇ ದೌರ್ಬಲ್ಯ ನನ್ನನ್ನ ನಿರ್ಬಲನನ್ನಾಗಿಸಿದೆ...ಭಾವಗಳಿಗೆ ಜೀವವಿಲ್ಲ.. ನೋವುಗಳಿಗೆ...? ಬೇಡ ಬಿಡು...!

ನೀ ಬಂದಾದ ಮೇಲೆ ಹಲವಾರು ಹುಡುಗಿಯರು ನನ್ನ ಮನದ ಕದವನ್ನು ತಟ್ಟಿದಾರೆ. ಇಲ್ಲ ಅನ್ನೋದಿಲ್ಲ. ಆದರೆ ಅವರಿಗ್ಯಾರಿಗೂ ಅಲ್ಲಿ ಜಡಿದಿರೋ ಬೀಗ ಕಂಡಿದ್ದೇ ಇಲ್ಲ! ಸುಂದರ ಕಂಗಳ ಕುರುಡಿಯರು ಅವರು...! ಕಾಲನ ಆಟವೂ ಎಷ್ಟು ವಿಚಿತ್ರ ಅಲ್ವ? ನೀನು ಮೊದಲು ಸಿಕ್ಕೆ ಅನ್ನೋ ಒಂದೇ ಒಂದು ಕಾರಣಕ್ಕೆ ನಿನಗಿಂತ ಒಳ್ಳೆಯ (?) ಹುಡುಗಿಯರನ್ನೂ ನಾನೀಗ ನಿರ್ಲಕ್ಷಿಸುವಂತೆ ಆಗಿಬಿಟ್ಟಿದೆ. ಆದರೇನಂತೆ? ನಾನೊಬ್ಬ ಹಠವಾದಿ-ಆಶಾವಾದಿ…! ಬೀಗ ಜಡಿದ ಮನಸನ್ನು ಕಂಡೂ, ಅದು ಬಾಡಿಗೆಗೋ-ಭೋಗ್ಯಕ್ಕೋ ಅಷ್ಟೇ ಇರುವ ಸೊತ್ತಲ್ಲ ಅಂತ ತಿಳಿದೂ, ಯಾರಾದ್ರೂ ಚೆಲುವೆ(?) ನನ್ನ ಹಟಮಾರಿ ಮನಸಿನ ಬಾಗಿಲಿಗೆ ಎಡೆ ಬಿಡದೇ ಗುದ್ದಿದಳೋ… ಕೀಲಿ ಕೈ ಅವಳಿಗೆ ಒಪ್ಪಿಸಿ, ನಿರಮ್ಮಳವಾಗಿಬಿಡ್ತೀನಿ.. ಆದರೆ ಈ ಸಲ ಷರತ್ತುಗಳು ಅನ್ವಯ..! (ಮರೆಯಲಾರದ ಪಾಠಗಳನ್ನು ಕಲಿಸಿದ ಚೆಲುವೆಯೇ ನಿನಗೊಂದು ನಮಸ್ಕಾರ! ಈ ಷರತ್ತುಗಳು ಕೆಲಸಕ್ಕೆ ಬರಲ್ಲ ಅಂತ ಗೊತ್ತಮ್ಮ ತಾಯಿ.. ಆದರೆ ಈಗ ಮನಸು ರಕ್ಷಣಾತ್ಮಕವಾಗಿಬಿಟ್ಟಿದೆ.. ಅದು ಹೀಗಂತ ಕೂಗಿಸ್ತಿದೆ, ಅಷ್ಟೇ…) ಅಂದ ಹಾಗೆ ಆ ಮೊಂಡು ಚೆಲುವೆ ನೀನೂ ಆಗಿರಬಹುದು..! ಯಾಕಾಗಬಾರದು..??

ಚಿತ್ರ ಕೃಪೆ: ಅಂತರ್ಜಾಲ Friday, September 21, 2012

ಮೊದಲ ಮಳೆಬಿಸಿಲ ಬೇಗೆಯಿಂದ
ಬಹು ಬಳಲಿಹಳು ಇಳೆ
ಕಳೆದುಕೊಂಡಿಹಳು ಲವಲವಿಕೆಯ ಸೆಲೆ
ಬಯಸಿಹಳು ಪ್ರಫುಲ್ಲತೆಯ ಹೊಸದೊಂದು ಕಳೆ
ತನ್ನಲಿ ಹೊಸ ಜೀವ ತುಂಬುವ
ನಲ್ಲನ ಸವಿ ಸ್ಪರ್ಶಕೆ...
ಬಲು ಕಾತರದಿ ಕಾದಿದ್ದಾಳೆ...

ಆದರೆ ನಲ್ಲನೋ ಬಲು ತುಂಟ
ಇಳೆಯ ಒಡಲಿಂದಲೇ  ಪನ್ನೀರ ಕದಿಯುವ ಬಂಟ
ಕಾರ್ಮೋಡಗಳ ಜೊತೆಗೂಡಿ ಆಡುವ
ಇಳೆಯೊಂದಿಗೆ ಕಣ್ಣಾ ಮುಚ್ಚಾಲೆಯಾಟ...
ಹೆಚ್ಚಿಸುವ ಅವಳ ಮನದ
ವಿರಹ ಸಂಕಟ...

ಅಮೃತ ಘಳಿಗೆಯಲಿ
ಧರೆ- ಗಗನಗಳ ಮಿಲನ...
ಆತ್ಮೀಯ ಆಲಿಂಗನ
ನೀಡುತ್ತ ದಣಿದ ಧರಣಿಗೆ ಸಾಂತ್ವನ
ಗಗನರಾಯ ನೀಡುವನು ನಲ್ಲೆಗೆ...
ಸವಿ-ಸ್ಪರ್ಶದ ಸಿಂಚನ...

ಧರಣಿಯಲ್ಲಿ ರೋಮಾಂಚನ..
ಸಾಂಕೇತಿಕವಾಗಿ,
ಭುವಿಯಿಂದ ಹೊರ ಹೊಮ್ಮುವುದು ಸುವಾಸನ...
ಎಲ್ಲೆಲ್ಲೂ  ಎದ್ದು ಕಾಣುವುದು ಹೊಸದೊಂದು ಚೈತನ್ಯ..
ಹಸಿರಿನಿಂದ ನಳ-ನಳಿಸುವವು ಗಿರಿ- ಕಾನನ!

ಆರಂಭವಿನ್ನು ನವ-ಜೀವನ..
ಮೊದಲ ಮಳೆಯು
ಒಂದು ಸವಿ ಪ್ರೇಮ ಕಥನ!!..

ಚಿತ್ರ ಕೃಪೆ: ಅಂತರ್ಜಾಲ 

Sunday, September 16, 2012

ಮೂಕರು


"ಅಪ್ಪಾ ಭಗವಂತ.. ಇಷ್ಟು ನೋಡಿದ್ದೇ ಸಾಕು.. ಇನ್ನೂ ಯಾಕಪ್ಪ ನನ್ನ ಕಣ್ಣು ಮುಚ್ಚಲಿಲ್ಲ ನೀನು..?" ಯಮುನಕ್ಕಜ್ಜಿ ಗೊಣಗ್ತಾ ತನ್ನ ಕೋಣೆ ಸೇರಿಕೊಂಡ್ತು.. ದೀಪ್ತಿ ಎಲ್ಲಾ ತಿಳಿದೂ ಏನೂ ಅರಿಯದ ಮುಗ್ಧೆಯಂತೆ ಅಜ್ಜಿ ಹೋಗೋದನ್ನೇ ನೋಡ್ತಾ ನಿಂತಳು.. ಏನೋ ಯೋಚನೆ ಮನಸಲ್ಲಿ ಮೂಡ್ತಾ ಇತ್ತು.. ಅಷ್ಟರಲ್ಲೇ ಅಮ್ಮನ ಕೂಗು..ದೀಪ್ತಿ.. ಎಲ್ಲೀದಿಯೇ ಬಾ ಇಲ್ಲಿ ಒಂದಿಷ್ಟು ತರಕಾರಿ ಹೆಚ್ಚೋದಿದೆ... ನಿಟ್ಟುಸಿರಿನ ಗೆಳತಿಯೊಡನೆ ಅಡುಗೆ ಮನೆ ಸೇರಿದಳು ದೀಪ್ತಿ.

"ತರಕಾರಿ ಹೆಚ್ಚೋವಾಗ ಸಿಗೋ ಅಷ್ಟು ಯೋಚನಾ ಸ್ವಾತಂತ್ರ್ಯ.. ಬೇರೆ ಹೊತ್ತಲ್ಲಿ ಯಾಕಿಲ್ಲ ನಂಗೆ..? ಇಷ್ಟು ಸ್ವಾತಂತ್ರ್ಯ ಸಿಗೋದಾದ್ರೇ ಜೀವನ ಪರ್ಯಂತ ತರಕಾರಿ ಹೆಚ್ಕೊಂಡೇ ಇದ್ದು ಬಿಡೋಣ.." ಹೀಗೆ ಎನೇನೋ ಹುಚ್ಚು ಆಲೋಚನೆಗಳು.. ಮತ್ತೆ ಅಮ್ಮ.. "ಲೇ ದೀಪ್ತಿ ಬೇಗ ಬೇಗ ಮುಗಿಸೆ, ಒಗ್ಗರಣೆ ಹೊತ್ತೋಗತ್ತೆ." "ಒಗ್ಗರಣೆ.. ಎಷ್ಟು ಚಿಕ್ಕ ಪಾತ್ರ ಅದರದ್ದು, ಪಲ್ಯದಲ್ಲಿ.. ಆದರೂ ಅದು ಹೊತ್ತಿ ಹೋದರೆ ಪಲ್ಯದ ರುಚಿನೇ ಕೆಟ್ಟು ಹೋಗತ್ತೆ.." ತನ್ನ ಯೋಚನೆಗೆ ತಾನೇ ನಕ್ಕಳು ದೀಪ್ತಿ.. ಹೆಚ್ಚಿದ ತರಕಾರಿನ ಅಮ್ಮನಿಗೆ ಕೊಟ್ಟು.. ಅಮ್ಮ ಸ್ವಲ್ಪ ತಲೆ ನೋಯ್ತಾ ಇದೆ.. ಅರ್ಧ ಗಂಟೆ ರೂಮ್ ಅಲ್ಲಿ ಮಲ್ಕೋತೀನಮ್ಮ.. ಸುಳ್ಳು ನೆಪ ಹೇಳಿ ಅಡುಗೆ ಮನೆಯಿಂದ ಜಾಗ ಖಾಲಿ ಮಾಡಿದಳು..

ಆವತ್ತು ದೀಪ್ತಿಗೆ ಬದುಕು ಇಷ್ಟೇನಾ? ನಮ್ಮವರ ಪ್ರೀತಿ ಅಂದ್ರೇ ಇಷ್ಟೇನಾ? ಏನೇನೋ ಪ್ರಶ್ನೆಗಳು.. ಗೊಂದಲಗಳು.. ತಲೆ ನೋವತ್ತೆ ಅಂದ್ರೆ ಕೇರ್ ಮಾಡೋ ಅಮ್ಮ.. ಮನಸಿಗೆ ನೋವಾಗೋದನ್ನ ಲೆಕ್ಕಕ್ಕೇ ಇಲ್ಲ ಅನ್ನೋದು ಯಾಕೆ..? ರಘುನಾ ನಾನು ಪ್ರೀತಿಸಿದ್ದೇ ತಪ್ಪಾ? ಪ್ರೀತಿಲಿ ಅವನನ್ನ ನಂಬಿದ್ದು ತಪ್ಪಾ..? ಎಲ್ಲಿ ತಪ್ಪಾಗಿದ್ದು..?? ಪ್ರೀತಿ ವಿಷಯದಲ್ಲಿ ತಪ್ಪು-ಸರಿ ಅಂತ ಯೋಚನೆ ಮಾಡೋದೇ ತಪ್ಪು ಅಲ್ವಾ? ನಮ್ಮ ಮನೆನಲ್ಲಿ ನಿಜವಾಗಲೂ ಯಾರಾದ್ರೂ ಒಬ್ಬರನ್ನೊಬ್ಬರು ಪ್ರೀತ್ಸಿದಾರಾ..?? ಪ್ರೀತಿ ಇದ್ರೆ ಒಂಟಿತನ ಕಾಡಬಾರದು ಅಲ್ವಾ..? ಮಾತಿದ್ದೂ ಮೂಕಳಾಗಿದ್ದಳು ದೀಪ್ತಿ.. ಛೇ ಬೇಡ ಪ್ರೀತಿ ವಿಚಾರ.. ಪ್ರೀತಿ ಎಷ್ಟು ನೋವು ಕೊಟ್ರೂ..ಭಂಡ ಮನಸ್ಸು ಮತ್ತೆ ಪ್ರೀತಿ ಬಗ್ಗೇನೆ ಯೋಚಿಸತ್ತೆ..ಹಾಗೇ ಕಣ್ಮುಚ್ಚಿದವು..

ಕಣ್ಣು ಬಿಟ್ಟಾಗ..ಟಪ-ಟಪ ಮಳೆ ಸದ್ದು.. ರೂಮ್ ತುಂಬ ಸ್ನಿಗ್ಧ ಬೆಳಕು.. ಹಿತವೆನಿಸುವಷ್ಟು ಚಳಿ.. ಮತ್ತೆ ರಘು ನೆನಪಾದ.. ಒಂದು ಮುದ್ದಾದ ಕಿರುನಗೆ ಮೂಡಿ, ಬಂದಷ್ಟೇ ವೇಗದಲ್ಲಿ ಮಾಯವಾಯ್ತು.. ಮತ್ತೆ ಮುತ್ತಿಕೊಳ್ಳೋ ಆಲೋಚನೆಗಳನ್ನ ಕೊಡವೋ ಪ್ರಯತ್ನದಲ್ಲೇ ಕಣ್ಣು ಗಡಿಯಾರ ನೋಡಿತು.. ಗಂಟೆ 5.. ಅರೆ.. ಹೊಟ್ಟೆನೂ ಹಸೀತಾ ಇದೆ.. ಮನೇಲಿ ಎಲ್ರೂ ಇದಾರಾ..? ಕೋಣೆ ಬಾಗಿಲು ತೆರೆದು ಆಚೆ ಬಂದಳು ದೀಪ್ತಿ.

ಅಜ್ಜಿ ತನ್ನ ಫೇವರಿಟ್ ಸೀರಿಯಲ್ ನೋಡ್ತಾ ಇತ್ತು.. ಮತ್ತೆ ಮನಸು ಅಂತು.. "ಆ ಸೀರಿಯಲ್ ಪಾತ್ರಗಳಿಗೆ ಇರೋ ಅಷ್ಟು ಸಹಾನೂಭೂತಿ..ನನ್ನ ಮೇಲೆ ಯಾಕಿಲ್ಲ ಅಜ್ಜಿಗೆ..?" ಅಮ್ಮ ಕಾಫಿ ಮಾಡ್ತಾ ಇದ್ರು.. ದೀಪ್ತಿ ನ ಕಂಡವರೇ.. "ಊಟಾನೂ ಮಾಡದೇ ಮಲಗಿದಿಯ.. ಕಾಫಿ ಕೊಡ್ಲಾ?" ಅಂದರು.. ಆ ಹನಿ ಪ್ರೀತಿಗೇ ದೀಪ್ತಿ ಕಣ್ಣು ಮಂಜಾದವು.. "ಕುಡಿತೀನಮ್ಮ.. ಬಂದೆ ಇರು" ಬೆರಳಂಚಿನಿಂದ ಕಣ್ಣೀರೊರಿಸಿ ಮುಖ ತೊಳೆಯೋಕೆ ಅಂತ ಸರಸರ ನಡೆದಳು..

ಮತ್ತೆ ಸಂಜೆ ಆಗಿತ್ತು.. ಮತ್ತೆ ಮಳೆ ಬಂದಿತ್ತು.. ಮತ್ತೆ ನೋವು ಕಾಡಿತ್ತು.. ದೀಪ್ತಿ ಕಾಫಿ ಹೀರುತ್ತಾ "ಅಮ್ಮ ಕಾಫಿ ಚೆನ್ನಾಗಿದೆ..ಥ್ಯಾಂಕ್ಸ್ "ಅಂದಳು.. ಅಮ್ಮ ಪ್ರೀತಿ ಇಂದ ಕಿರು ನಗೆ ನಕ್ಕಳು.. “ಬೆಂಕಿ ಮುಟ್ಟಿದ್ರೆ ಕೈ ಸುಡುತ್ತೆ ಅಂತ ಬುದ್ಧಿ ಹೇಳಿದ್ರೆ ರಂಪ ಮಾಡ್ತಿದ್ದ ಎರಡು ವರ್ಷದ ದೀಪ್ತಿ.. ಇವತ್ತು ನನಗೆ ಥ್ಯಾಂಕ್ಸ್ ಹೇಳೋ ಅಷ್ಟು ಬೆಳೆದು ಬಿಟ್ಟಳಲ್ಲಾ..? ಇಷ್ಟು ಮುದ್ದಾದ ಹಟಮಾರಿ ದೀಪ್ತಿ ಗೆ ಈ ನೋವು..ಪಾಪ ಹೇಗೆ ಸುಮ್ನಿದೆಯೋ ಕೂಸು.. ಯಾರೇನು ಮಾಡೋಕಾಗುತ್ತೆ.. ತಾನೇ ಮಾಡ್ಕೊಂಡಿದ್ದು.. ನನ್ನ ಕೈಲೇನಿದೆ.. ದೇವರೇ ನೀನೇ ದಾರಿ ತೋರಿಸಬೇಕಪ್ಪ.. ಈ ಮಗು ನೋವು ನೋಡೋಕಾಗಲ್ಲ.. ಎಲ್ರಿಗೂ ಎನಾದ್ರೂ ನೋವು ಕೊಡದೇ ಇದ್ರೆ ನಿಂಗೆ ಸಮಾಧಾನಾನೇ ಇಲ್ವ..?”

“ಅಯ್ಯೋ.. ಪಾಪ.. ಆ ರಾಧಂದು ಏನೂ ತಪ್ಪಿಲ್ಲ.. ಛೇ ಪಾಪ ನೋಡ ಶೈಲು..” ಯಮುನಕ್ಕಜ್ಜಿ ಮಾತು ಶೈಲನ್ನ ಮತ್ತೆ ವಾಸ್ತವಿಕತೆಗೆ ಎಳೆದಿತ್ತು.. ಟಿವಿ ಅವ್ರಿಗೂ ಕೆಲಸಿಲ್ಲ.. ನಿನಗೂ ಇಲ್ಲ.. ಸರಿ ರಾಧನ್ನ ನೀ ನೋಡು.. ಊಟಕ್ಕೆ ಗಂಜಿನಾ, ರೊಟ್ಟಿನಾ ಹೇಳು.. ಸ್ವಲ್ಪ ಖಾರವಾಗೇ ಕೇಳಿದಳು ಶೈಲ.. ಗಂಜಿ ಸಾಕು.. ಹಸಿವಿಲ್ಲ ನಂಗೆ..ಟಿವಿಲಿ ಮುಳುಗಿದ ಅಜ್ಜಿ ಹೇಳ್ತು.. ಆದರೂ ಮಗಳ ಅಸಡ್ಡೆ ಅಜ್ಜಿಗೆ ತಟ್ಟದೇ ಇರಲಿಲ್ಲ.. ಭಗವಂತ..ಕಣ್ಮುಚ್ಚೋ.. ಮತ್ತೆ ಹೇಳಿಕೊಂಡಿತು ಅಜ್ಜಿ.. ಸೀರಿಯಲ್ ಮುಗಿದು ಮತ್ತೆ ಹಾಡು ಬಂತು ಟಿವೀಲಿ.. ಅಜ್ಜಿಯ ಮಬ್ಬುಗಣ್ಣು ದೀಪ್ತಿ ಕಡೆ ಹರಿಯಿತು.. ನಾನು ಎತ್ತಾಡಿದ ನನ್ನ ಮುದ್ದು ಮೊಮ್ಮಗು ಅಂತ ಒಂದರೆ ಕ್ಷಣ ಅನಿಸಿದ್ರೂ ಮರು ಕ್ಷಣ ರಘು ನೆನಪಾಗಿ.. ಮುಂಡೇದ್ದು ದೊಡ್ಡವರು, ಹಿರಿಯರು-ಕಿರಿಯರು ಅನ್ನೋದ್ನ ಕಡೆಗಣಿಸಿ ಏನೋ ಮಾಡೋಕೆ ಹೋಯ್ತು.. ಮಾಡಿದ್ದುಣ್ಣೋ ಮಹಾರಾಯ.. ಅನುಭವಿಸಲಿ ಬುಧ್ಧಿ ಬರಲಿ ಒಂಚೂರು.. ಯೋಚಿಸ್ತಾ ದೀಪದ ಬತ್ತಿ ಮಾಡೊದು ನೆನಪಾಗಿ ಒಳ ನಡೆಯಿತು..

ಮಳೆ ನಿಂತಿತ್ತು.. ದೀಪ್ತಿ ಏನೋ ಸಮಾಧಾನ ಮಾಡ್ಕೊಂಡು, ಏನೋ ನಿರ್ಧಾರ ಮಾಡ್ಕೊಂಡು.. ಅಮ್ಮಾ ರಾತ್ರಿ ಅಡಿಗೆ ನಾ ಮಾಡ್ತೀನಿ.. ಅಪ್ಪನ ಹುಟ್ಟಿದಬ್ಬ ಅಲ್ವ..? ಅವರಿಗೆ ನನ್ನಡಿಗೆ ಇಷ್ಟ.. ಅಂತ ಅಡಿಗೆ ಮನೆಗೆ ಹೊರಟಳು..

ಮರು ದಿನ ಎದ್ದವಳೇ ಗಾಡ್ಸ್ ಹೋಮ್ ಗೆ ಹೊರಟಳು ದೀಪ್ತಿ.. ಮನೇಲಿ ಯಾರಿಗೂ ಏನು ಹೇಳಲಿಲ್ಲ.. ಫ಼ರ್ಲಾಂಗ್ ದೂರ ಕಾರ್ ಓಡಿಸೋವಾಗ.. ಮತ್ತೆ ಇಣುಕಿದ ರಘು.. ಯಾಕೋ ನೋವಾಗಲಿಲ್ಲ ದೀಪ್ತಿಗೆ.. ಅವಳಿಗೇ ಆಶ್ಚರ್ಯ..!! ರಘುನ ಹುಚ್ಚಿ ಥರ ಪ್ರೀತಿಸ್ತಿದ್ದೆ.. ನಮ್ಮ ಋಣ ಇಷ್ಟೇ ದಿನಕ್ಕೇ ಇತ್ತೇನೋ.. ಪ್ರೀತಿ ಮಾಡೋಕೂ ಮಾಡಿಸಿಕೊಳ್ಳೋಕೂ ಅದೃಷ್ಟ ಬೇಕು.. ದೇವರ ದಯ ಕೈ ತುಂಬ ದುಡಿಯೋ ಅಷ್ಟು ಅಪ್ಪ-ಅಮ್ಮ ಓದ್ಸಿದಾರೆ.. ರಘು.. ನಿನ್ನ ನೆನಪಿಗಾಗೋ, ನನ್ನ ಸ್ತ್ರೀತ್ವವನ್ನ ಪೂರ್ಣಗೊಳಿಸೋಕೋ ಒಂದು ಮಗು ನಂಗೆ ಬೇಕು ಅಂತ ನಿಂಗನಿಸಿಲಿಲ್ವ..?? ನಂಗೇನು ಬೇಕು ಅಂತ ನೀನು ಯೋಚಿಸಿದ್ದು ಕಮ್ಮೀನೇ ಅನ್ಸುತ್ತೆ.. ಆದರೆ ನಿನಗೇನು ಬೇಕು ಅಂತ ಸರಿಯಾಗಿ ಗೊತ್ತಿತ್ತು ನಿಂಗೆ.. ನಾನೂ ನಿನ್ನ ಬೇಕುಗಳಲ್ಲಿ ಒಂದಾಗಿದ್ದೆ, ಆಮೇಲೆ ನಿನ್ನ ಬೇಕುಗಳು ಬದಲಾದವು.. ನಿನ್ನ ದೂರಕ್ಕಾಗಲ್ಲ ರಘು.. ಟ್ರಾಫಿಕ್ ಸಿಗ್ನಲ್ ದೀಪ್ತಿ ಆಲೋಚನೆಗಳಿಗೂ ಬ್ರೇಕ್ ಹಾಕಿತ್ತು..

ಗಾಡ್ಸ್ ಹೋಮ್ ಅಲ್ಲಿ ಸೂರಜ್ ಕಾದಿದ್ದ.. ಸೂರಜ್ ಎರಡು ತಿಂಗಳ ಹಸುಳೆ.. ತುಂಬಾ ಮುದ್ದಾದ ಮಗು.. ಆಗಿನ್ನೂ ನಗು ಕಲೀತ ಇರೋ ಕಂದ..ಗಾಡ್ಸ್ ಹೋಮ್ ಅಲ್ಲಿ ಫಾರ್ಮ್ಯಾಲಿಟಿ ಗೆ ಎಲ್ಲ ಡಾಕ್ಯುಮೆಂಟ್ಸ್ ರೆಡಿ ಇತ್ತು.. ಫಾರ್ಮ್ಯಾಲಿಟಿ ಎಲ್ಲಾ ಮುಗಿಸಿ.. ಕಕ್ಕುಲತೆಯಿಂದ ಸೂರಜ್ ನ ಮುತ್ತಿಟ್ಟಳು ದೀಪ್ತಿ..

ಮಗು ಜೊತೆ ಮನೆಗೆ ಬಂದಾಗ ಮಧ್ಯಾನ್ಹ 3.00. ಎಲ್ಲರ ದೃಷ್ಟಿ ಎದುರಿಸಲು ಸಿದ್ಧಳಾಗೇ ಮನೆಯಿಂದ ಹೊರಟಿದ್ದು ದೀಪ್ತಿ.. ಮನೆ ಸೇರಿದಾಗ.. ಮನೆ ಮಂದಿಯೆಲ್ಲ ದಂಗು.. ಯಾರೂ ಮಾತಾಡಲಿಲ್ಲ.. ಒಳ್ಳೆಯದೇ ಆಯ್ತು ಅಂತ ಒಳ ನಡೆದಳು ದೀಪ್ತಿ..

ಸೂರಜ್ ನ ಅಳು-ನಗು, ಆಟ ಮನೆ ತುಂಬಿತ್ತು.. ದೀಪ್ತಿ ಖುಷಿಯಾಗಿದ್ದಳು.. ಅಷ್ಟು ಮುದ್ದಾದ ಮಗುನ ಅಮ್ಮ, ಅಜ್ಜಿ, ಅಪ್ಪ ಯಾರೂ ಗಮನಿಸದೇ ಇರಲು ಸಾಧ್ಯವೇ ಇರಲಿಲ್ಲ.. ಲಾಲಿ-ಜೋಗುಳ, ಆಟ ಮನೆ ತುಂಬ ಸದ್ದು.. ಮನೆ ಮಂದಿಯೆಲ್ಲ ಮೂಕರಾಗಿ ಸ್ತಬ್ಧವಾಗಿದ್ದ ಮನೆ..ಈಗ ಹಬ್ಬದ ಸಂಭ್ರಮದಂತೆ ನಳ-ನಳಿಸುತ್ತಿತ್ತು.. ಸೂರಜ್ ನ ನಗುವಿನಲ್ಲಿ ರಘುನ ನೋವು ಮರೆತಿದ್ದರು ಮನೆ ಮಂದಿಯೆಲ್ಲ..

ಸೂರಜ್ ಗೆ ಆರೇಳು ತಿಂಗಳು..ಹಾಲು ಹಲ್ಲು ಇನ್ನೇನು ಮೂಡಬೇಕು.. ದೀಪ್ತಿ ಅಮ್ಮನಿಗೆ ಹೇಳಿದಳು.. "ಅಮ್ಮ ನಾನು ಬೇರೆ ಮನೆ ಮಾಡ್ತಾ ಇದೀನಿ.. ಸೂರಜ್ ನ ನಾನು ಆಫೀಸ್ ಇಂದ ಬರೋ ವರೆಗೂ ನೀವು ನೋಡ್ಕೊಳ್ಳಿ.. ಸಂಜೆ ನಾನು ಅವನನ್ನ ಮನೆಗೆ ಕರ್‍ಕೊಂಡು ಹೋಗ್ತೀನಿ ಇಲ್ಲೇ ಪಕ್ಕದ ಓಣೀಲೆ ಮನೆ.." ಶೈಲ ಒಂದು ಅರ್ಥಪೂರ್ಣ ನೋಟ ನೋಡಿದಳು ಮಗಳ ಕಡೆ..

ದೀಪ್ತಿ ಹೇಳಿದಳು.. ಅಮ್ಮ ನಮಗೆಲ್ರಿಗೂ ಪ್ರೀತಿ ಬೇಕಮ್ಮ.. ಮತ್ತೆ ಪ್ರೀತಿ ಮಾತಾಡ್ಬೇಕು.. ಅದಿಕ್ಕೆ ಸೂರಜ್ ಬೇಕಿತ್ತಮ್ಮ.. ಇಬ್ಬರ ಕಣ್ಣಲ್ಲೂ ಕಂಬನಿ.. ಪ್ರೀತಿ ಮಾತಾಡಿತ್ತು.. ಮೌನ ಅರ್ಥವಾಗಿತ್ತು.. ಹಿತವಾಗಿತ್ತು.. ದೀಪ್ತಿಯ ಕೆನ್ನೆಗೊಂದು ಸಿಹಿ-ಮುತ್ತು ಕೊಟ್ಟಳು ಶೈಲ.. ಮನಸು ಮತ್ತೆ ಮಾತಾಡಿತ್ತು.. “ದೀಪ್ತಿ ಮುದ್ದಾದ ಹಟಮಾರಿ ಹುಡುಗಿ.. ಪ್ರೀತಿ ಮಾಡೋ ಹಟ ಅದಿಕ್ಕೆ..ಒಳ್ಳೇ ಮಗಳಿಗೇ ಜನ್ಮ ಕೊಟ್ಟೆ...”

(ವರ್ಷಗಳ ಹಿಂದೆ ಕನ್ನಡ ಒನ್ ಇಂಡಿಯನಲ್ಲಿ ಪ್ರಕಟವಾದ ಕಥೆ)

Thursday, September 06, 2012

ಹನಿಗಳು


ಜೀವನ
ಕಹಿ ಸತ್ಯಗಳ ಸುಳ್ಳಾಗಿಸುವ
ಸಿಹಿ ಸುಳ್ಳುಗಳ ನಿಜವಾಗಿಸುವ
ಅವಿರತ ಪ್ರಯತ್ನ!

ಪ್ರೀತಿ
ನಿನ್ನ ಕನವರಿಕೆಗಳಲಿ
ಮನವರಿಕೆಯಾಗಿದ್ದು...

Thursday, August 30, 2012

ಕಣ್ಮಿಂಚು...

ಕಣ್ಣು ಮಿಟುಕಿಸಿಯಾಗಿದೆ
ಗೆಳೆಯ, ಮಾಡುವುದೇನು ನಾನಿನ್ನು?
ಕೇಳಿತೊಂದು ನಕ್ಷತ್ರ ಇನ್ನೊಂದನ್ನು

ಅವಳ ದೃಷ್ಟಿಯ ಜ್ವಾಲೆ
ಕೆಣಕುತಿದೆ ನನ್ನೊಳಹನ್ನು
ತಾಳದಾಗಿಹೆ ನಾ
ಆ ನೋಟದ ಬಿಸುಪನ್ನು..!

ಹೆದರಬೇಡ ಮಿತ್ರ
ಏನೇ ಆದರೂ
ನೀನವಳಿಗೆ ನಿಲುಕದ ನಕ್ಷತ್ರ!
ಎಷ್ಟೇ ತೀಕ್ಷ್ಣವಾಗಿದ್ದರೂ
ಅವಳ ಆ ನೋಟ
ತಲುಪಲಾರದದು
ಈ ತಾರೆಗಳ ತೋಟ
ಹೇಳಿತಿನ್ನೊಂದು ತಾರೆ
ತನ್ನ ಗೆಳೆಯನ ಸಂತೈಸುತ್ತ...

ಮಿರ-ಮಿರನೆ ಮಿಂಚುತ್ತ
ಮಿಂಚಿ ಹಿಂಜರಿಯುತ್ತ
ನೆಟ್ಟಿತಾ ನಕ್ಷತ್ರ
ತನ್ನ ನೋಟವ, ಆ ಚೆಲುವ ಕಂಗಳತ್ತ

ಕ್ಷಣಗಳುದುರಿದಂತೆ
ಗಾಢವಾಯಿತು ಆಕರ್ಷಣೆ
ಅವಳ ಸೆಳೆತಕೆ ಆಯ ತಪ್ಪಿ
ಜಾರಿಯೇ ಬಿಟ್ಟಿತದು ಭುವಿಗೆ ಮೆಲ್ಲನೆ!

ಜಾರಿದ ನಕ್ಷತ್ರವ
ತನ್ನ ಕಣ್ಮಿಂಚಲಿ ಸೆರೆ ಹಿಡಿದು
ಆ ಬೆಳದಿಂಗಳ ಬಾಲೆ ನಗುತಿರಲು
ಆ ತಾರಾ ಮಿತ್ರನಿಗೆ ಇನ್ನಿಲ್ಲದ ದಿಗಿಲು!

ಕರಗುವ ಮುನ್ನ ತಾನಿನ್ನು
ಆ ಮಾಯಾಂಗನೆಯ ನೋಟಕೆ
ಸರಿಯಿತದು ಬೆಳಕ ಪರದೆಯ ಹಿಂದೆ
ತನ್ನ ವಿಶ್ರಾಂತಿಯ ತಾಣಕೆ

ಹೋಗುವ ಮುನ್ನ
ಸೂರ್ಯನಿಗೂ ಎಚ್ಚರಿಸಿತದು
ನೂರು ನಕ್ಷತ್ರಗಳ ಸೆಳೆದಾಗಿದೆ ಆ ಕಂಗಳು
ನೋಟ ಬೆರೆಸೀಯ ಅವಳೊಂದಿಗೆ ಜೋಕೆ!Friday, January 13, 2012

ನಾನಲ್ಲದ ನಾನು... ಏನಾದರೇನು...?!

ನಾನಿರದ ನನಗಾಗಿ

ನನ್ನಿಂದ ದೂರಾಗಿ

ಅಲೆದಾಡಿ ಸಾಕಾಗಿ

ಮತ್ತೆ ಮನದ ಮನೆಯ

ಸೂಜಿಗಲ್ಲಿನ ಸೆಳೆತ...


ನನ್ನೊಡನೆ ನಾನಿರಲು ಬೇಸರವೋ?

ನಾನಲ್ಲದ ನನ್ನನು ಹುಡುಕುವ ಕಾತರವೋ?

ನನ್ನತನವನು ಪರೀಕ್ಷಿಸುವ ಕುತೂಹಲವೋ?

ಅಥವಾ ಇವೆಲ್ಲವುಗಳ ಕಲಸು ಮೇಲೋಗರವೋ?

ಒಟ್ಟಿನಲಿ, ನನ್ನಲಿ ನಾನಿಲ್ಲ

ಆಗಸದ ಏಕಾಂತ

ಮನದ ಮೂಲೆಗಳಲೆಲ್ಲ...!


ನನ್ನೊಡನೆ ನನ್ನ ಆಪ್ತ ಅಪ್ಪುಗೆಯಲ್ಲೂ

ದೂರದಲಿ ಹೊಳೆವ ಮಿಂಚು ಹುಳುವಿನ

ಆಕರ್ಷ...

ಕನಸಿನ ಮಾರು-ವೇಷದಲಿ ಕರೆಯುತಿವೆ

ಸಾಧನೆ, ಸಂತೃಪ್ತಿಗಳೆಂಬ ಮರೀಚಿಕೆಗಳು...

ಎಂದು ನನ್ನೊಡನೆ ನನ್ನ ಪರಾಗಸ್ಪರ್ಶ...?!


ದಿನದ ಜಾತ್ರೆಗಳಲಿ

ಕಳೆದು ಹೋಗುತಿರುವೆ ನಾನು

ಎಲ್ಲೊ ದೂರದಲೆಲ್ಲೋ ಕೇಳುತಿದೆ

ನನಗಾಗಿ ಕಾದಿರುವ ನನ್ನಯ ಇನಿದನಿ

ಹಿಂದಿರುಗಿ ಹೋಗುವ

ಹಾದಿಯನೂ ನಾ ಮರೆತಂತಿದೆ

ಕಣ್ಣಂಚಲಿ ಕುಡಿಯೊಡೆದಿದೆ

ಮತ್ತೊಂದು ಕಂಬನಿ ಹನಿ...


ನನ್ನೊಡನೆ ನಾನಾಗಿ

ಬದುಕಿಗೂ ಬೇಕಾಗಿ

ಮತ್ತೆ ನೆಮ್ಮದಿಯಾಗಿ

ಬಾಳಬೇಕಿದೆ ನಾನು...

ಇದಕೆ ಹೊರತಾದರೆ...

ನಾನಲ್ಲದ ನಾನು... ಏನಾದರೇನು...?!