Tuesday, October 31, 2006

ನಾನು ಮೌನಿಯಾದೆನೆ?

ಸರಿ ಸುಮಾರು ದಿನಗಳಿಂದ ಈ ಯೋಚನೆ ತಲೆಯಲ್ಲಿ ಸುಳಿದಾಡುತ್ತಿದೆ, ನೆಲೆಯಿರಲು ಸ್ಥಳವಿರದ ಅಲೆಮಾರಿಯಂತೆ!! ಅದಕ್ಕೇ ಈ ವಿಚಾರಕ್ಕೆ ಒಂದು ನೆಲೆ ಹುಡುಕುವ ಪ್ರಯತ್ನದಲ್ಲಿ, ಈ ವಿಚಾರದ ವೈಚಾರಿಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಈ ಲೇಖನ.
ಒಕ್ಕಣಿಕೆಯೂ ಆಯ್ತು, ಪೀಠಿಕೆಯೂ ಆಯ್ತು, ಮುಂದೇನು? ಈ 'ಮುಂದೇನು?' ಅನ್ನೋ ಪ್ರಶ್ನೆ ತುಂಬ ದಿಗಿಲು ಹುಟ್ಟಿಸುವಂತದು. ಅದಕ್ಕೇ ಸುಮ್ನೆ ಮುಂದುವರೀತಾ ಇರೋದೇ ಒಳ್ಳೇದು.. ಸರಿ ಸುಮಾರು ದಿನಗಳಿಂದ ಏಕೋ ಹೀಗೆ ಅನಿಸತೊಡಗಿದೆ..
ಹುಟ್ಟಿನಿಂದ ೨೩ ವಸಂತಗಳು ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದ ಜೀವಕ್ಕೆ ಕನ್ನಡಕ್ಕಾಗಿ ಹಪ ಹಪಿಸುವ ದಿನವೊಂದು ಬರಬಹುದು ಅಂತ ಊಹಿಸಲೂ ಸಾಧ್ಯವಿರಲಿಲ್ಲ. ಶಾಲಾ-ಕಾಲೇಜು ದಿನಗಳಲ್ಲಿ ಕುವೆಂಪುರವರ 'ಓ ನನ್ನ ಚೇತನ' ಗುನ ಗುನಿಸುತ್ತ ಬೇಂದ್ರೆ ಅಜ್ಜನ ಸಾಧನಕೇರಿಗೆ ಗಾಡಿಯಲ್ಲಿ ಸುತ್ತಾಡುತ್ತ ಮಜವಾಗಿದ್ದದ್ದು ನೆನಪಾದರೆ ಮುಗುಳ್ನಗೆ ತಾನಾಗೇ ಮೂಡುತ್ತೆ ತುಟಿಗಳ ಮೇಲೆ.
ಆ ದಿನಗಳನ್ನು ಈ ದಿನಗಳನ್ನು ಹೋಲಿಸಿದರೆ, ಅಬ್ಬಾ ಎಷ್ಟೊಂದು ಅಂತರ.. ಆ ದಿನಗಳಲ್ಲಿ ನನ್ನ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಲಿಲ್ಲ ಅಂತ ರಾದ್ಧಾಂತ ಮಾಡಿದ್ದೂ ಇತ್ತು.:) ಕನ್ನಡ ಇಂಗ್ಲೀಷಿಗಿಂತ ತುಸು ಕೆಳಗೇ ಅಂತ ತಲೆ ತುಂಬಿದವರೂ ಸುಮಾರು ಜನ. ಹತ್ತನೇ ತರಗತಿಯಲ್ಲಿ ಇಂಗ್ಲೀಷ್ ನಲ್ಲಿ ಅತೀ ಹೆಚ್ಚು ಅಂಕ ಗಳಿಸಿದಾಗಲಂತೂ ನನ್ನ ಸಂತೋಷಕ್ಕೆ ಎಣೆಯೇ ಇರಲಿಲ್ಲ..
ಕಾಲೇಜು ದಿನಗಳಿಂದ ಆರಂಭವಾಯ್ತು ನೋಡಿ ನಮ್ಮ ಬಾಳಲ್ಲಿ ಆಂಗ್ಲರ ಆಕ್ರಮಣ..:) ಇಂಗ್ಲೀಷ್ ಅರ್ಥ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ.. ಇಂಗ್ಲೀಷ್ ಬರ ಬರುತ್ತ ಅಷ್ಟೇನೂ ಕಷ್ಟ ಅಂತ ಅನಿಸಲಿಲ್ಲ. ಈಗಂತೂ ಬಿಡಿ ಮಾತೄ ಭಾಷೆ ಕನ್ನಡವೋ ಇಂಗ್ಲೀಷೋ ಯೋಚಿಸಿ-ಆಲೋಚಿಸಿ ಹೇಳುವ ದಿನಗಳು ಬಂದು ಬಿಟ್ಟಿವೆ.. ಅಷ್ಟರ ಮಟ್ಟಿಗೆ ಆಂಗ್ಲ ಭಾಷೆ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ.
ಹಾಗಂತ ಇಂಗ್ಲೀಷ್ ಬಗ್ಗೆ ನನಗೆ ಬೇಜಾರಿಲ್ಲ. ಅದು ಇರೋದ್ರಿಂದಾನೇ ನಾವು ಜಗತ್ತಿನ ಯಾವ ಮೂಲೆಯಲ್ಲಾದ್ರೂ ಯಾವುದೇ ತೊಂದರೆಯಿಲ್ಲದೇ ಬದುಕಬಹುದಾದ ದಿನಗಳನ್ನು ನಾವು ನೋಡುತ್ತ ಇರುವುದು. ಬೇಜಾರು ಆ ವಿಷಯಕ್ಕೆ ಅಲ್ಲ..
ಮೊದಲ ಮಾತು ಕಲಿತದ್ದು ಕನ್ನಡದಲ್ಲಿ, ಶಾಲೆಯಲ್ಲಿ ಕಲಿತದ್ದು ಕನ್ನಡದಲ್ಲಿ, ಗೆಳೆಯ-ಗೆಳತಿಯರೊಂದಿಗೆ, ಬಳಗದವರೊಂದಿಗೆ ಗಂಟೆಗಟ್ಟಲೇ ಹರಟಿದ್ದು ಕನ್ನಡದಲ್ಲಿ. ಇಷ್ಟರ ಮಟ್ಟಿಗೆ ಕನ್ನಡ ನಮ್ಮ ಜೀವನದಲ್ಲಿ ಬೆರೆತು ಹೋದ ಮೇಲೆ, ಬೇರೆ ಭಾಷೆಯಲ್ಲಿ ಉಸಿರಾಡು ಅಂದ್ರೆ ಕಷ್ಟ ಆಗೋಲ್ವೇನ್ರೀ?
ವಾರದ ಐದು ದಿನಗಳು ೮-೧೦ ಗಂಟೆಯಂತೆ ಕಚೇರಿಯಲ್ಲಿ ಕೆಲಸ. ಹೋಗಿ ಬರೋಕೆ 'ನಮ್ಮ ಬೆಂಗಳೂರು' ನಲ್ಲಿ ಕಡಿಮೆ ಎಂದರೆ
ದಿನಕ್ಕೆ ಎರಡು ಗಂಟೆ. ಉಳಿದ ಹನ್ನೆರಡು ಗಂಟೆಗಳಲ್ಲಿ ೮ ಗಂಟೆ ಕುಂಭಕರ್ಣನ ವಂಶದವಳಂತೆ ನಿದ್ರಾ ದೇವತೆಗೆ ಶರಣಾದರೆ ಉಳಿಯೋದು ೪ ಗಂಟೆಗಳು ಮಾತ್ರ.ಅದ್ರಲ್ಲಿ ಅಡುಗೆ, ಊಟ, ಮನೆ, ಮಕ್ಕಳು, ದೂರದರ್ಶನ.. ಒಂದಾ ಎರಡಾ.. ಎಲ್ಲ್ರೀ ನನ್ನ ಕನ್ನಡ?
ಆ ಕಚೇರಿಯಲ್ಲಿ ಪಕ್ಕಾ ಆಂಗ್ಲ ವಂಶದವರಂತೆ ಇಂಗ್ಲೀಷ್ ಸುರಿಮಳೆ.. ಬೇರೆ ದಾರೀನೂ ಇಲ್ಲಾರೀ ಅಲ್ಲಿ ಎಲ್ಲರಿಗೂ ಕನ್ನಡ ಬರೋದಿಲ್ವೇ.. ಇಂಗ್ಲೀಷಲ್ಲಿ ಮಾತಾಡೋದು ಚಂದಾನೇ.. ಆದರೆ ಅದಕ್ಕೆಲ್ಲಿ ಬರಬೇಕ್ರೀ ನಮ್ಮ ಕನ್ನಡದ ಆತ್ಮೀಯತೆ? ಮೊದಲೇ ಕಚೇರಿಯ ನೂರಾರು "ಇಷ್ಯೂ" ಗಳು.. ಅವುಗಳ ಮಧ್ಯ ಇಂಗ್ಲೀಷ್ ಮಾತಾಡಿದರೂ ಕೆಲಸಕ್ಕೋಸ್ಕರ ಮಾತ್ರ..
ಈ ಸಾಲುಗಳನ್ನ ಬರೀತಿರೋ ಹಾಗೆ ನಿಟ್ಟುಸಿರು ತಾನೇ ತಾನಾಗೆ ಬರ್‍ತಾ ಇದೆ.. ನಮ್ಮ ಸಹಜ ಭಾವನೆಗಳಿಗೂ ಕನ್ನಡದ ಅಗತ್ಯ ಇದೆ ಅಂತ ನಿಮಗನಿಸಲ್ವಾ?
ಹೀಗಾಗಿ ತುಂಬಾ ಸಲ ಅನ್ನಿಸ್ತಾ ಇರತ್ತೆ, ಹೃದಯ ಬಿಚ್ಚಿ ಮಾತಾಡಿ, ಹರಟಿ ಯುಗಗಳಾದವೇನೋ ಅಂತ.. ಈ ಎಸ್ ಎಮ್ ಎಸ್, ಮೊಬೈಲ್ ಯುಗಗಳಲ್ಲಿ ಒಂದು ವಾಕ್ಯನೇ ಮೊಟಕುಗೊಳಿಸುವ ಹುನ್ನಾರದಲ್ಲಿದೆ ಜಗತ್ತು.. ಇನ್ನು ಹರಟೆ..? ಒಂದೊಮ್ಮೆ ಮಾತು ಬೆಳ್ಳಿ ಮೌನ ಬಂಗಾರ ಅಂತ ಬರೆದಿದ್ದ ನನಗೆ.. ಈಗ ಕನ್ನಡ ಮಾತಾಡೋರು ಸಿಕ್ರೆ ಸಾಕಪ್ಪ ಅಂತ ಅನಿಸೋಕೆ ಶುರು ಆಗಿದೆ. ಒಂದೊಮ್ಮೆ ಇಂಗ್ಲೀಷ್ ಸರ್‍ಆಗವಾಗಿ ಬಂದ್ರೆ ಎಷ್ಟು ಚಂದ ಅಂತಿದ್ದವಳು ಈಗ "ಚಂದಕಿಂತ ಚಂದ ನೀನೇ ಸುಂದರ' ಅಂತ ಕನ್ನಡವನ್ನು ಮನ ಬಿಚ್ಚಿ ಕೊಂಡಾಡುವಂತೆ ಅನಿಸ್ತಾ ಇದೆ.
ಹೀಗೆಲ್ಲ ವಿಚಾರ ಮಾಡ್ತಾ ಇರೋವಾಗ..'ನಾನು ಮೌನಿಯದೆನೇ?' ಅಂತ ಸಂದೇಹ ಬಂದಿದ್ದೂ ಇದೆ. ನಿಟ್ಟುಸಿರು ಬಿಟ್ಟಿದ್ದೂ ಇದೆ. ಏನೇ ಅನ್ನಿ ನಮ್ಮತನವನ್ನು ಉಳಿಸಿ ಬೆಳೆಸೊಕೊಂಡರೇ ಚಂದ..
ಅಂದ ಹಾಗೆ ಇಂಗ್ಲೀಷ್ ಗೂ ಧನ್ಯವಾದಗಳು.. ಬದುಕಲು ದಾರಿ ಕಲ್ಪಿಸಿದ್ದಕ್ಕೆ ಮತ್ತು ಅತಿ ಮುಖ್ಯವಾಗಿ, ನಮ್ಮಲ್ಲೇ ಒಂದಾಗಿ ಬೆರೆತು ಹೋಗಿರುವ ಕನ್ನಡವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಅಂತ ಅರಿವು ಮೂಡಿಸಿದ್ದಕ್ಕೆ..
ನಿಮಗೂ ಎಂದಾದರೂ ಹೀಗೆ ಅನಿಸಿದ್ದುಂಟಾ? ಹಾಗಾದರೆ ನನ್ನ ಪ್ರಯತ್ನ ಸಫಲ.. ಸರಿ ಹಾಗಾದರೆ ಯಾವಾಗಲಾದ್ರೂ ಭೇಟಿ ಆದಾಗ ಹರಟೋಣ.. :)

Friday, October 06, 2006

ಅರ್ಪಣೆ

ಮನಸೆಂಬ ಕೂಸಿಗೆ
ಕನಸುಗಳ ತುತ್ತನುಣಿಸಿ
ಭಾವನೆಗಳ ಮುತ್ತನಿಟ್ಟು
ಕಲ್ಪನೆಗಳ ಆಟಿಕೆ ನೀಡಿ
ಪ್ರೀತಿಯ ಅಕ್ಕರೆಗರೆದು
ಮಂದಹಾಸವ ಉಡುಗೊರೆ
ನೀಡಿದ ನಿನಗೆ
ನನ್ನ ಹೃತ್ಪೂರ್ವಕ ನಮನ
ನಿನಗಾಗಿ ನನ್ನ ಈ ಪುಟ್ಟ ಕವನ