Wednesday, December 01, 2010

ಪ್ರಶ್ನೆ?

ನಿನ್ನ ಪ್ರೀತಿಗೇಕೆ ಅರ್ಥವಿಲ್ಲ?
ದಿಕ್ಕು-ದೆಸೆಗಳಿಲ್ಲ?
ಸರಾಗವಾಗಿ ಸಾಗಿ
ನನ್ನಂತರಾಳ ಕಲುಕಿ
ಪ್ರೀತಿ ಕುಲುಮೆ ಕುದಿಯುವಾಗ
ನೀನೇಕೆ ಮೆಲ್ಲ ಜಾರುವೆ?
ನಾನೇಕೆ ನೋವ ಮೇರೆ ಮೀರುವೆ?

ಕಣ್ಣಿನಲ್ಲಿ ನವಿಲ ಬಣ್ಣ ಕನಸು
ಮನಸಿನಲ್ಲಿ ಪ್ರೀತಿ ಹುಲುಸು ಹುಲುಸು
ನಾನು ಮನಸು, ನೀನು ಕನಸು
ಎಲ್ಲ ಈಗ ಇರುಸು-ಮುರುಸು
ಬೇಕೆ ಪ್ರೀತಿ ವೇದನೆ?
ಯಾತಕಾಗಿ ನನ್ನ ಪ್ರಾರ್ಥನೆ?

ಇತಿಗಳಿಲ್ಲ ಮಿತಿಗಳಿಲ್ಲ
ಎಲ್ಲೆಲ್ಲೂ ಪ್ರೀತಿ ಪಥಗಳೇ
ನಿದಿರೆಯಿಲ್ಲ, ಮಂಪರಿಲ್ಲ
ನಮ್ಮ ಪ್ರೀತಿ ಕಥೆಗಳೆಲ್ಲ ವ್ಯಥೆಗಳೇ?!

ನೋವ ನಲಿವ ಬೇಧ-ಭಾವ
ಇರದ ಮನದ ಮಂಥನ
ಪ್ರೀತಿ ಬರಲಿ ಬರದೆ ಇರಲಿ
ಪ್ರೀತಿ ಇರುವುದಂತೂ ದಿಟ
ನಲಿಯಬೇಕು ನೋವ ತಳ್ಳಿ
ಅದೇ ತಾನೇ ಬದುಕ ಹಟ?

Friday, June 18, 2010

ಇವತ್ತು ಶಾಲೆಲೀ...

ಇವತ್ತಿಗೆ ಒಂದು ವಾರ ಆಯ್ತು ನಾನು ಶಾಲೆಗೆ ಹೋಗೊಕೆ ಶುರು ಮಾಡಿ. 3-4 ದಿನದಿಂದ ಶಾಲೆ ಹೊರಗಡೆ ನಿಂತ್ಕೊಳ್ಳೋ punishment ಬೇರೆ. ಏನು ತಪ್ಪು ಮಾಡಿದ್ದು ನಾನು? ಗೊತ್ತಾ ನಿಮಗೆ? ನನ್ನ ಮಗ ನಂದನ್ ನ ಶಾಲೆಗೆ ಸೇರಿಸಿದ್ದು ;-) (ಪ್ಲೇ-ಸ್ಕೂಲ್). ದಿನ ಬೆಳಗಾದ್ರೆ ಶಾಲೆ ಹೊರಗಡೆ ನಿಂತ್ಕೊಳ್ಳೋ punishment ಇದ್ದಿದ್ರಿಂದ, ಇವತ್ತು ಹೇಗೆ ಕಾಲ-ಹರಣ ಮಾಡೋದು ಅಂತ ಸ್ಕೆಚ್ ಹಾಕ್ಕೊಂಡೆ ಶಾಲೆಗೆ ಹೊರಟಿದ್ದು. ಆದರೆ ಇವತ್ತು ಅಲ್ಲಿ ನಡೆದದ್ದೇ ಬೇರೆ. ನಂದನ್ ನ ಶಾಲೆಗೆ ಕಳಿಸಿ, ನಾನೊಂದೆರಡು ಫೋನ್ ಕರೆಗಳನ್ನು ಮಾಡಿ ಮುಗಿಸಿ, ಸುತ್ತ-ಮುತ್ತ ನೋಡ್ತಾ ಕುಳಿತಿದ್ದಾಗ ’ಹೋ...’ ಅಂತ ಎಂಟು-ಹತ್ತು ಮಕ್ಕಳು ಹೊರಗೆ ಬಂದ್ರು. ಎಲ್ಲರೂ ಬಣ್ಣ-ಬಣ್ಣ, ಸ್ಟೈಲ್ quotient ತುಂಬಾನೇ ಹೈ. Thank God ಮುಗ್ಧತೆನಲ್ಲಿ ಮಾತ್ರ ನೈಜವಾಗೇ ಇದ್ರು, ಗುಸು-ಗುಸು, ಪಿಸು-ಪಿಸು ಮಾತಾಡ್ತಾ.. ಜಿಗಿದಾಡ್ತಾ.. I know, ಈ ಕಾಲದಲ್ಲಿ ನೈಜತೆ ಕಾಣಿಸಿದ್ರೆ Thank God ಅಂತ ಹೇಳಬೇಕಾದ್ದೇ!

ಹಾಗೆ ನೋಡ್ತಾ ನೋಡ್ತಾ, 3-5 ವರ್ಷದ ಬಣ್ಣ-ಬಣ್ಣದ ಉಡುಪುಗಳ ಮಕ್ಕಳ ಸೈನ್ಯ ಹೊರಗೆ ಬಂತು. ಆವಾಗ ಅವರ PT hour. (ನೆನಪು ಮಾಡ್ಕೊಳ್ಳಿ PT hour.. ’ಸಾವಧಾನ್’, ’ವಿಶ್ರಾಮ್’, ’Attention’, ’Standitis’...) ನೆನಪಾಯ್ತಾ? ಹೂಂ ನನಗೂ ನೆನಪಾಯ್ತು, ಮಕ್ಕಳು ನೆನಪು ಮಾಡಿ ಕೊಟ್ಟರು. ಅವರ ವ್ಯಾಯಾಮಕ್ಕೆ ಸಾಥ್ ಕೊಡೋಕೆ ಡ್ರಮ್ ಬೇರೆ. ಆ ವಯಸ್ಸಿನ ಮಕ್ಕಳ PT hour ನೋಡೋಕೆ ತುಂಬಾನೆ ಮಜವಾಗಿತ್ತು. ಯಾರ್ ಯಾರಿಗೆ ಹೇಗೆ ಬೇಕೋ ಹಾಗೇ ಅವರ ವ್ಯಾಯಾಮ ಭಂಗಿಗಳು. ಒಂದೇ ಒಂದು ಅಂಶದಲ್ಲಿ ಎಲ್ಲರೂ ಒಗ್ಗಟ್ಟು ತೋರಿಸುತ್ತಿದ್ದರು, ಶಿಕ್ಷಕರು ’Standitis’ ಅಂದಾಗ, ’ಹೋ...’ ಅಂತ ಕಿರುಚೋದ್ರಲ್ಲಿ :-) ಅವರು ಹಕ್ಕಿ ಹಾಗೆ ಕೈ ಮಾಡಿ ಚಪ್ಪಾಳೆ ತಟ್ಟೋ ವ್ಯಾಯಾಮ ನನಗೆ ತುಂಬ ಇಷ್ಟವಾಯ್ತು.. (ತುಂಬಾ symbolic ಅನಿಸ್ತು..!) ಆಮೇಲೆ ಅವರು ’right about turn’ ಮಾಡ್ಕೊಂಡು , ರೈಲು ಕಟ್ಕೊಂಡು ಶಾಲೆ ಒಳಗೆ ಹೋಗಿಬಿಟ್ರು. ಅಷ್ಟೊತ್ತಿಗೆ ನನ್ನ ಮನಸ್ಸೂ ’about turn’ ಆಗಿಬಿಟ್ಟಿತ್ತು.. ಅವರ ಆ ಮುಗ್ಧ, ತುಂಟ ಚಟುವಟಿಕೆಗಳ ಉಲ್ಲಾಸ ನನ್ನ ಜೊತೆಗೆ ಉಳಿದುಬಿಟ್ಟಿತು.. ಇವತ್ತಿಗೆ ನನಗಿಷ್ಟು ಸಾಕು.. :-)

Tuesday, May 25, 2010

ಜನುಮ ದಿನಮನಸೊಂದು ಕುಡಿಯೊಡೆದ
ಮಧುರ ದಿನ
ಕನಸೊಂದು ಕಣ್ಬಿಟ್ಟ
ಮಧುರ ಕ್ಷಣ
ತನುವಲ್ಲಿ ತನುವರಳಿ
ಭುವಿಗೆ ಮರಳಿದ ದಿನ...

ಆ ಮನಸು ಮಡಿಲಾಗಿ
ಈ ಮನಸು ಮಗುವಾಗಿ
ಮನಸೆಲ್ಲ ನಗುವಾಗಿ
ನಕ್ಕು-ನಗಿಸಿದ ದಿನ
ಅತ್ತು-ಅಳಿಸಿದ ದಿನ

ಒಡಲ ಒಗಟು ಜೀವವಾದ ದಿನ
ಜೀವ ನಂಟು ಉಸಿರು ಪಡೆದ ದಿನ
ಕತ್ತಲಿಂದ ಬೆಳಕಿಗೆ ಕಣ್ಬಿಟ್ಟ ದಿನ
ಹೊಚ್ಚ ಹೊಸ ಬದುಕ ತೆರೆದಿಟ್ಟ ದಿನ

ನವ ಜೀವಕೆ ನಾಂದಿಯಾದ
ಆ ಸೋಜಿಗದ ದಿನ
ಪ್ರತಿ ವರುಷ ಮರಳುವುದು
ನೆನಪುಗಳ ನಗೆ ಚೆಲ್ಲಿ
ಮತ್ತೆ ಮರೆಯಾಗುವುದು
ಈ ಜನುಮ ದಿನ!

Tuesday, May 11, 2010

ಕಥೆ ಅಲ್ಲ ಜೀವನ!

ನನ್ನ ಕಾಲಲ್ಲಿ ಚಕ್ರ ಇದೆ ಅನ್ನೋ ಮಾತನ್ನ ನಾನೂ ಒಪ್ಕೋತೀನಿ, ಆದರೆ ಕಾರ್ ಗೆ ಇರೋ ಚಕ್ರಗಳನ್ನ ಓಡಿಸೋಕೆ ನನಗೆ almost ಒಂದು ದಶಕನೇ ಬೇಕಾಯ್ತು...! ಏನು ಗಿನ್ನೀಸ್ ರೆಕಾರ್ಡ್ ಗೆ ಕೊಡು ಅಂತೀರಾ?! ಬೇಡಾರಿ, ನನಗೆ ನನ್ನ ಪುಟ್ಟ ಪ್ರಪಂಚ ನೇ ಇಷ್ಟ, ಅಷ್ಟೊಂದೇನೂ ಪ್ರಸಿಧ್ಧಿ ಬೇಕಿಲ್ಲ ನನಗೆ ;-) ನಮ್ಮ ಗಾದೆ ’ಮರಳಿ ಯತ್ನವ ಮಾಡು’ ನಿಜವಾಗ್ಲೂ work ಆಗತ್ತೆ ರೀ.. ನೀವೂ ಯಾವುದಾದ್ರೂ ಕೆಲಸನ ನನ್ನ ಕೈಲಾಗಲ್ಲ ಅಂತ ಬಿಟ್ಟುಬಿಟ್ಟಿದ್ರೆ ಇನ್ನೊಂದ್ ಸಲ ಟ್ರೈ ಮಾಡಿ ನೋಡಿ..

ಈಗ ತಾನೆ ನಡೆಯೋಕೆ ಕಲಿತ ಮಗು ಎಷ್ಟು ನಡೆದ್ರೂ ಇನ್ನೂ ನಡೀಬೇಕು ಅನ್ನತ್ತಲ್ಲ, ಹಾಗೇ ಆಗ್ತಿದೆ ನನಗೂ. ಎಷ್ಟು ಕಾರ್ ಓಡಿಸಿದ್ರೂ ಇನ್ನೂ ಓಡಿಸಬೇಕು ಅನ್ನೋ ಹಂಬಲ. ಹೊಸದಾಗಿರೋವಾಗ ಹುಮ್ಮಸ್ಸು ಜಾಸ್ತಿ ಅಂತೆ.. ಹಾಗಾಗಿ ಕಳೆದ ವಾರ, ನಮ್ಮ ಮನೆ ಮಂದಿಗೆಲ್ಲ ನನ್ನ ಜೊತೆ ಲಾಂಗ್ ಡ್ರೈವ್ ಗೆ ಹೋಗೊ ಸೌಭಾ(ದೌರ್ಭಾ)ಗ್ಯ ಬಂದೇ ಬಿಡ್ತು (ಮನೆ ಮಂದಿ ಅಂದ್ರೆ ನಮ್ಮೆಜಮಾನ್ರಷ್ಟೇ, ನನ್ನ ಮಗ ನನ್ನನ್ನು ಇನ್ನೂ ಅಪಾರವಾಗಿ ನಂಬ್ತಾನೆ!). ನಾನಂತೂ ಖುಷಿ-ಖುಷಿಯಾಗೇ ಬೆಳಿಗ್ಗೆ-ಬೆಳಿಗ್ಗೆನೇ ರೆಡಿ ಆಗಿಬಿಟ್ಟೆ. ಹೆಚ್ಚು-ಕಮ್ಮಿ ೬೦-೬೫ KM ನಷ್ಟು ದೂರ ಮೊದಲ ಬಾರಿಗೆ ಡ್ರೈವ್ ಮಾಡೋ ಅವಕಾಶ ಮಾಡಿಕೊಟ್ಟಿದ್ದು ನಮ್ಮೆಜಮಾನ್ರು, ಅವರ ಔದಾರ್ಯವನ್ನು ಗೌರವಿಸೋದು ನನ್ನ ಧರ್ಮ ಅಲ್ವಾ? ;-)

ಒಂದೇ ಒಂದು ಚಕ್ರ (ಸ್ಟೀರಿಂಗ್ ವ್ಹೀಲ್), ಹಾಗೂ ಒಂದೆರಡು ಕ್ಲಚ್-ಗೇರ್ ಗಳಿಂದ ನಾಲ್ಕು ಚಕ್ರಗಳನ್ನು ನಿರ್ವಹಿಸೋ ಕಲೆ ಬಹಳನೇ ಅಡ್ರೆನಾಲಿನ್ ರಷ್ ಕೊಡತ್ತೆ.. ಟ್ರಾಫಿಕ್ ಕಮ್ಮಿ ಇರೋ, ಜಾಸ್ತಿ ಹಸಿರು-ಹಸಿರಾಗಿರೋ ರಸ್ತೆಗಳಲ್ಲಿ ನಮ್ಮ ಪಯಣ ಶುರುವಾಯಿತು. ಜೊತೆಯಲ್ಲಿ ಅರ್ಥವಾಗದಿರೋ ಆದರೆ ಒಳ್ಳೇ ಸಂಗೀತವಿರೋ ತಮಿಳು ’ಬಾಯ್ಸ್’ ಫಿಲ್ಮಿನ ಹಾಡುಗಳು (ಒಂದೂಂದು ಸಲ ಅರ್ಥವಾಗ್ದಿರೋದು ಬಹಳ ಇಷ್ಟ ಆಗತ್ತೆ ಅಲ್ವಾ? ಯಾಕೆ ಹೀಗೆ..?!), ನನ್ನ ಅಡ್ರೆನಾಲಿನ್ ರಷ್ ನ ಇನ್ನೂ ಜಾಸ್ತಿ ಮಾಡಿದವು. ಈ ಲೌಡ್ ಮ್ಯೂಸಿಕ್ ಇಂದ ನನ್ನ ಕಾರ್ ಚಾಲನೆಗೆ (ಹೂಂ, ನನಗೂ ತಕ್ಕ ಮಟ್ಟಿಗೆ ಕನ್ನಡ ಬರತ್ತೆ, ಹಾಗೂ ಅದನ್ನ ನಾನು ಬಳಸ್ತೀನಿ ಕೂಡ!) ಒಂದು ಲಾಭ ಆಯ್ತು, ನಾನು ತಪ್ಪು-ತಪ್ಪಾಗಿ ಗೇರ್ ಬದಲಾಯಿಸಿದಾಗಲೆಲ್ಲ ಗೋಳಾಡುವ ಕಾರ್ ನ ಆರ್ತ ನಾದ ಯಾರಿಗೂ ಕೇಳಿಸಲೇ ಇಲ್ಲ! ಹೀಗಾಗಿ ನಮ್ಮ ಪ್ರಯಾಣ, ತಕ್ಕ ಮಟ್ಟಿಗೆ ಸುಖಕರವಾಗೇ ಇತ್ತು..

ಪಂಚಾಯತ್ ಚುನಾವಣೆಯ ದಿನ ಆವತ್ತು.. ದಾರೀಲಿ ಬಂದ ಹಳ್ಳಿಯ ಜನರೆಲ್ಲ ಅವಾಕ್ಕಾಗಿ ನಮ್ಮ ಕಾರ್ ನ ನೋಡ್ತಿದ್ರು, ಊಂಹು, ನಾನು ಕಾರ್ ನ ಅಷ್ಟು ಚೆನ್ನಾಗಿ ಓಡಿಸ್ತಿದ್ದೆ ಅಂತ ಅಲ್ಲ, ಅಥವಾ ನಾನು ಕಣ್ಣು ಕುಕ್ಕೋ ಥರ ಅಲಂಕಾರ ಮಾಡ್ಕೊಂಡಿದ್ದೆ ಅಂತಾನೂ ಅಲ್ಲ.. ಬಹುಶಃ ಅವರಿಗೆ ನನ್ನ ಕಾರ್ ಓಡಿಸುವ ಶೈಲಿ ದಿಗಿಲು ಹುಟ್ಟಿಸಿತ್ತೋ ಏನೋ, ನಾನಂತೂ ಒಂದೇ ಸಮನೆ ಹಾರ್ನ್ ಮಾಡಿ ನನ್ನ ಕರ್ತವ್ಯ ನಿರ್ವಹಿಸ್ತಾ ಇದ್ದೆ. ಇಷ್ಟಾದರೂ, ಮಂದಹಾಸ ಬೀರುತ್ತಿದ್ದ ನನ್ನ ಪತಿ ರಾಯರ ತಾಳ್ಮೆಯನ್ನು ಮೆಚ್ಚಲೇ ಬೇಕು!

ಹಾಗೂ-ಹೀಗೂ ಕುಂಟುತ್ತ, ತೆವಳುತ್ತ, ಓಡುತ್ತ, ರಭಸವಾಗಿ ಬೀಸಿ ಬರೋ ಗಾಳಿ, ಒಳ್ಳೇ ಸಂಗೀತ, ಅಲ್ಲಿ-ಇಲ್ಲಿ ಅಕಸ್ಮಾತ್ತಾಗಿ ಬರುವ ಹಂಪ್ ಗಳಲ್ಲಿ ಆಗೋ ಕಾರ್ ನ ಕರಡಿ-ಕುಣಿತ ಇವುಗಳನೆಲ್ಲ ಆಸ್ವಾದಿಸುತ್ತ.. ಎಲ್ಲರೂ ಸುರಕ್ಷಿತವಾಗಿ ಗುರಿ ತಲುಪಿದಾಗ ನನ್ನಲ್ಲೊಂದು ಸಂತೃಪ್ತಿಯ ನಗು ಮೂಡಿತ್ತು.. ಅಲ್ಲಿದ್ದ ಹಕ್ಕಿಗಳ ಚಿಲಿ-ಪಿಲಿ ನನಗೇಕೋ ಕರತಾಡನದಂತೆ ಕೇಳಿಸಿತು! :-) ನೀವೇನಂತೀರ?!

Friday, March 12, 2010

ಮತ್ತೆ ಮರಳಿದೆ ಪ್ರೀತಿ..

ನೀ ಮರೆತ ಪ್ರೀತಿಯ ಹಾಡು
ಒಣಗಿದೆಲೆಗಳಾಗಿ ಉದುರಿವೆ ಇಂದು
ಕಾಣುತಿಲ್ಲವಲ್ಲ ಎಲ್ಲೂ
ನಿನ್ನೊಲವ ಹಸಿರಿನ ಬಿಂದು

ಪ್ರೀತಿ ಅರುಹಿದ್ದೆ ನೀನು
ಅಂದು ಕನಸ ಬಿತ್ತಿದ್ದೆ
ಬೆಚ್ಚನೆಯ ಆ ಕನಸಿನ ಕಾವಿಗೆ
ನಾ ಹಸಿರಾಗಿ ಚಿಗುರೊಡೆದಿದ್ದೆ
ಪ್ರೀತಿಯಂತೇ ನಳನಳಿಸಿದ್ದೆ..

ನಗುವ ಕಲಿತಿದ್ದೆ ನಾನು
ಅಂದು ಪ್ರೀತಿ ಹಾಡ ಗುನುಗಿದ್ದೆ
ಜೇನು ಜಿನುಗಿದ್ದೆ ನೀನು
ನನ್ನೇ ಮರೆಸಿದ್ದೆ..

ಖುಷಿಯ ಮಂಪರಲ್ಲೇ
ಪ್ರೀತಿ ಋತುವು ಜಾರಿತ್ತು
ನೋಡು-ನೋಡುತಿದ್ದಂತೆ
ಹಸಿರ ರಂಗು ಮಾಸಿತ್ತು
ನಿನ್ನ ನೆನಪ ಸೂಸಿತ್ತು..

ಅರರೆ! ನಿನ್ನ ನೆನಪಿನ ಘಮ
ಮತ್ತೆ ನಿನ್ನೇ ತಲುಪಿದೆ ಇಂದು
ಮತ್ತೆ ಮರಳಲಿದೆ ನಮ್ಮ
ಪ್ರೀತಿ ಚಿಗುರು ಸಂಭ್ರಮವಿಂದು..

ಕಾಲ-ಕಾಲಕೆ ಮರಳಿ
ಹೊಸ ಜೀವ ನೀ ತುಂಬಿಸುವೆ
ಮತ್ತೊಮ್ಮೆ ಕಣ್ಮರೆಯಾಗಿ
ನನ್ನ ಕಂಗಾಲಾಗಿಸುವೆ..!!

ಈ ನಿನ್ನ ಪ್ರೀತಿಯ ಪರಿಯ
ಅರಿಯಲಾರೆ ನಾ ಗೆಳೆಯ
ಕೊನೆ ತನಕ ಜೊತೆ ಇರು ನೀನು
ಇರಲಾರೆಯಾ ನೀ ಸನಿಹ..?!

(ಈ ವಸಂತ ಋತುವಿನಲ್ಲಿ ಮೂಡಿದ ಸಾಲುಗಳು..)

Monday, February 22, 2010

ಸ್ವಗತ
ಖಾಲಿ ಹಾಳೆಯ ಮೇಲೆ
ಕಸಿವಿಸಿಯ ಮಸಿಯ ಹಸಿ
ಭಾವಗಳ ವಿಶ್ರಾಮಕೆ
ಬಿಳಿ ಹಾಳೆಯ ಹಾಸಿಗೆ

ಆಂತರ್ಯದ ತೊಟ್ಟಿಲು
ಲೇಖನಿಯ ಮಸಿಯ ಬಟ್ಟಲು
ಅದ್ದಿ-ಬಸಿದು ಬರೆಯುತಿರುವೆ
ಅಂತರಾಳ ಮುಟ್ಟಲು..

ಮನದ ಮೊನಚು
ಅದರ ಮುನಿಸು
ಅದರ ಸೊಗಸು
ಅದರ ಬಿರುಸು
ಎಲ್ಲ ಬೆರಳ ತುದಿ

ಬೆರಳುಗಳಿಗೆರಡು ಮುತ್ತು
ಲೇಖನಿಗೆ ನೀವೆ ಜೀವ-ತಂತು
ಖಾಲಿ ಹಾಳೆ ಬಾಳ ಗೆಳತಿ
ಸ್ವಗತಕೆ ಸಂಗಾತಿ!