Friday, May 11, 2007

ಮಳೆ.. - ೧

ಪದೇ ಪದೇ ನೆನಪಾದೆ.. ಪದೇ ಪದೇ ನೆನೆದೆ ಅನ್ನೋ ಥರ.. ನಿನ್ನ ಬಗ್ಗೆ ಮತ್ತೆ ಬರೆಯೋಣ ಅನಿಸ್ತಾ ಇದೆ.. ಕಲ್ಪನೆಗಳಿಗೆ ಕೊನೆಯೆಲ್ಲಿ..? :) ಈಗ ನಿನ್ನ ಋತು.. ದಿನ-ಬೆಳಗಾದರೆ ಮತ್ತೆ ನಿನ್ನ ನೋಡುವ ಅವಕಾಶ ಸಿಗಬಹುದೇನೊ ಅನ್ನೋ ಭಾವನೆಯಲ್ಲೇ.. ದಿನಗಳು ಕಳೆದದ್ದು ಗೊತ್ತೇ ಆಗಲ್ಲ...

ಸುಡು ಬಿಸಿಲ ದಿನಗಳಲ್ಲೂ ನಿನ್ನ ನಿರೀಕ್ಷೆಯಲ್ಲೇ ದಿನ ನೂಕ್ತೀನಿ ನಾನು.. ಆದರೆ ಒಮ್ಮೊಮ್ಮೆ ಅನಿಸುತ್ತೆ.. ಆ ಬಿಸಿಲ ಬಿಸಿ ತಾಕೋದಕ್ಕೇ ನಿನ್ನ ತಂಪು ಅಷ್ಟು ಹಿತ ಅನಿಸೋದು ಅಂತ..ಸದಾ ಕಾಲ ನೀನೇ ಇದ್ದಿದ್ರೆ ಹೇಗಿರೋದು...? ಚೆನ್ನಾಗಿರೋದು ಅಂತ ಅನಿಸುತ್ತೆ.. ಆದರೆ ಎಲ್ಲೋ ಅನುಮಾನ.. ಹಾಗಿದ್ದಿದ್ರೆ.. ನಾನು ನಿನ್ನ, ನಿನ್ನ ಬರುವನ್ನ, ನಿನ್ನೊಡನೆ ಕಳೆಯೋ ಪ್ರತಿ ಕ್ಷಣಗಳನ್ನ ಇಷ್ಟು ಗಾಢವಾಗಿ ಬಯಸುತ್ತಿದೆನಾ/ಪ್ರೀತಿಸುತ್ತಿದೆನಾ ಅಂತ.. ಅರ್ಥ ಆಗುತ್ತೆ ನಿಂಗೆ ಅನ್ಕೋತೀನಿ.. ಬೇರೆಯವರಿಗೆ ಖುಶಿ ತರುವವರಿಗೆ ಅರ್ಥ ಮಾಡ್ಕೋಳ್ಳೋ ಶಕ್ತಿನೂ ಇರತ್ತೆ ಅಂತ ನಂಗೊತ್ತು :) ಹಾಡು ನೆನಪಾಗ್ತಾ ಇದೆ.."ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ನಿಜ ಅನಿಸಲ್ವ ನಿನಗೆ..?

ಬೇಸಿಗೆಯ ವಿರಹದ ದಿನಗಳ ಬಳಿಕ.. ಬಹಳ ಕಾಯಿಸಿ ಸತಾಯಿಸಿ ಬರ್ತೀಯ.. ನನಗೆ ನಿನ್ನ ಮೇಲಿರೋ ಪ್ರೀತಿಗೆ.. ನೀನು ಬಂದರೆ ಬಣ್ಣಿಸಲಸದಳ ಸಂಭ್ರಮ.. ಯಾವ ಹಬ್ಬಕ್ಕೂ ನಾನಿಷ್ಟು ಸಡಗರ ಪಡಲ್ಲ.. ನಿನ್ನ ಜೊತೆ ಇರೋದೆ ಹಬ್ಬ ನನಗೆ :) ಇರುವಷ್ಟು ಹೊತ್ತು ಪ್ರೀತಿ ಮಳೆ.. (ಮತ್ತೆ ಬರೀತಿನಿ ಪ್ರೀತಿ ಮಳೆ ಬಗ್ಗೆ) ಆ ಮಳೆಯಲ್ಲಿ ನೆಂದು, ಮಿಂದು ಮೈ ಮರೆತು ಮನದಲ್ಲಿ ಸಂತಸದ ಹೊಳೆ ಹರೀತಾ ಇರುವಾಗಲೇ ಕಾಲನ ಗಂಟೆ.. 'ಈ ಟೈಮ್ ಅನ್ನೋದು ಪಕ್ಕಾ ೪೨೦' ಅಂತ 'ಮುಂಗಾರು ಮಳೆ' ಲಿ ಒಂದು ಸಂಭಾಷಣೆಯ ಸಾಲು.. ನಿನ್ನ ಬಗ್ಗೆ ಹೇಳ್ತಾ ಇಲ್ಲ ನಾನು.. 'ಮುಂಗಾರು ಮಳೆ' ಅನ್ನೋದು ಒಂದು ಸುಂದರ ಕನ್ನಡ ಚಿತ್ರದ ಹೆಸರು.. ಹೆಸರಿಗೆ ತಕ್ಕಂತೆ ಆ ಚಿತ್ರಕ್ಕೆ ನೀನೇ ಬಂಡವಾಳ.. ಅದರ ಮಾತು ಬೇಡ ಈಗ..

ಸರಿ ಟೈಮ್ ಆಯ್ತು.. ನನಗೆ ನಂಬೋಕೇ ಆಗಿರಲ್ಲ.. ನಿನ್ನ ವಿದಾಯದ ಸಮಯ ಬಂತು ಅಂತ.. ಮನದಲ್ಲಿ ಎಷ್ಟೊಂದು ಆನಂದ.. ಅಷ್ಟೇ ಬೇಸರ..ನೆನಪುಗಳ ಹಸಿರನ್ನ ಮತ್ತೆ ಅಗಲಿಕೆಯ ಬೆಂಗಾವಲನ್ನ ಎರಡನ್ನೂ ಒಟ್ಟೊಟ್ಟಿಗೆ ಉಡುಗೊರೆ ಕೊಟ್ಟು ನಿಧಾನವಾಗಿ ಮರೆಯಾಗ್ತೀಯ ನೀನು.. ಆಗಷ್ಟೇ ಮೈ ತಾಕಲೋ ಬೇಡವೋ ಅನ್ನೋ ತಂಗಾಳಿಯ ಚಳಿನಲ್ಲಿ ನಾನು ಮೆಲ್ಲಗೆ ಗುನುಗ್ತೀನಿ.. "ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ಅಂತ.. :)

Thursday, May 10, 2007

ಮಳೆ..


ಇಂದು ನೆನ್ನೆಯದಲ್ಲ.. ನಮ್ಮಿಬ್ಬರ ಸಂಬಂಧ.. ಪ್ರೀತಿಯ ಋತು ನೀನು.. ವರ್ಷ ಧಾರೆ.. ಏನಿದು ಅಸಂಬದ್ಧವಾಗಿವೆ ಮಾತುಗಳು ಅನಿಸ್ತಾ ಇದೆಯಾ..? :) ಇರಬಹುದೇನೋ.. ತುಂಬಾ ಬ್ಲಾಗ್ ಗಳನ್ನ ಓದಿದೆ ಇತ್ತೀಚೆಗೆ ನಿನ್ನ ಬಗ್ಗೆ.. ನೀನು ತನು-ಮನದ ಭಾವನೆಗಳ ಕೆಣಕುವ ಮೋಡಿಗಾರ ಅಂತ ಗೊತ್ತು.. ಆದರೆ.. ಹಲವು ಮನಗಳಿಗೆ ಹುಚ್ಚು ಹಿಡಿಸುವ ನಿನ್ನ ಶಕ್ತಿ ನೋಡಿದರೆ ಆಶ್ಚರ್ಯವಾಗತ್ತೆ..ನಿನ್ನ ಬಗ್ಗೆ ಬರೆಯಲ್ಲ ಜನ.. ನಿನ್ನಲ್ಲಿ ತಮ್ಮನ್ನೇ ಮರೆಯುವ ಪರಿಯನ್ನ ಬರೀತಾರೆ..:) ನೀ ನೀಡುವ ತಲ್ಲಣಗಳ ಬಗ್ಗೆ ಬರೀತಾರೆ.. ಸುಮಾರು ದಿನಗಳಿಂದ.. ಅಲ್ಲಲ್ಲ ವರ್ಷಗಳಿಂದ ನಿನ್ನ ಬಗ್ಗೆ ಬರೆಯೋ ಆಸೆ ನಂಗೆ.. ಒಂದೆರಡು ಸಲ ಬರೆದದ್ದೂ ಇದೆ.. ಆದರೆ ಅದ್ಯಾಕೋ ಇವತ್ತು ನಿನ್ನನ್ನ ಜೀವಂತಗೊಳಿಸೋ ಕಲ್ಪನೆ ಬಂತು.. ನೀನೂ ಪ್ರೀತಿಯ ಥರ.. ಒಂದೇ ವ್ಯತ್ಯಾಸ ಅಂದ್ರೆ.. ನೀನು ಕಣ್ಣಿಗೆ ಕಾಣ್ತೀಯಾ ಪ್ರೀತಿ ಕಾಣಲ್ಲ.. ಅಷ್ಟೇ.. ಆದರೆ ನೀವಿಬ್ರೂ ನನ್ನಲ್ಲಿ ಹುಟ್ಟು ಹಾಕೋ ಭಾವನೆಗಳಲ್ಲಿ ಎಂಥ ಸಾಮ್ಯ ಅಂತೀಯ.. ಈಗ ಬೇಡ ಪ್ರೀತಿ ವಿಚಾರ.. ಮಾತಿಗೆ ಬಂತು ಹೇಳಿದೆ :)


ನಿನ್ನ ಸ್ಪರ್ಶ.. ತನುವಿನ ಅಣು-ಅಣುವನ್ನೂ ಬಡಿದೆಬ್ಬಿಸುತ್ತೆ.. 'ರೋಮಾಂಚನ..' ಗೊತ್ತಲ್ಲ..? ನಿನಗೇನೂ ಹೊಸದಲ್ಲ ಬಿಡು..:) ನೆನಪುಗಳನ್ನ.. ಭಾವನೆಗಳನ್ನ ಕೆಣಕುತ್ತೆ.. ನಿನ್ನ ಶಬ್ದ, ಅಬ್ಬರ, ಭರಾಟೆ.. ಮಿಂಚು, ಸಿಡಿಲು.. ಎಲ್ಲವೂ ಅಭೂತಪೂರ್ವ.. ನಿನ್ನ ಮತ್ತು ನೀ ನೀಡುವ ಅನುಭವಗಳನ್ನ ಬಣ್ಣಿಸುವಾಗ..ನಾ ಬರೆಯುವ ಪದಗಳು ಅಶಕ್ತವಾಗುತ್ತೆ..ಆದರೂ ನಿನ್ನ ಪದಗಳ ಬೊಗಸೆಯಲ್ಲಿ ಹಿಡಿದಿಡೋ ಆಸೆ.. ನೀ ಬಂದಾಗಲೆಲ್ಲಾ ನಾನು ಹೋದ ಜನುಮದಲ್ಲಿ ನವಿಲಾಗಿದ್ದೆನಾ.. ಅಂತ ಎಷ್ಟೋ ಸಲ ಯೋಚಿಸಿ ಮುಗುಳು ನಗೆ ನಕ್ಕೀದಿನಿ ನಾನು.. ಹೃದಯ ತುಂಬುವಂಥ ಮುಗುಳು ನಗೆ ಕೊಡೋ ಶಕ್ತಿ.. ನಿನಗೆ ಮತ್ತೆ ಪ್ರೀತಿಗೆ ತಾನೆ ಇರೋದು.. :) ಮತ್ತೆ ಪ್ರೀತಿ.. ಕ್ಷಮೆಯಿರಲಿ.. ನಿಮ್ಮಿಬ್ಬರಲ್ಲಿ ನನಗೆ ಯಾರು ಬಹಳ ಇಷ್ಟ ಅಂತ ಹೇಳೋದು.. ಬಹಳ ಕಷ್ಟ.. ನಿಮ್ಮ ಸಾಮ್ಯ.. ನಿಮ್ಮ ಸನಿಹ.. ಬದುಕನ್ನು ಮರೆಸುತ್ತೆ..:)

ಇನ್ನೊಂದೇನು ಗೊತ್ತಾ..? ನಿನ್ನ ಬರುವು ಮನಕಷ್ಟೇ ಅಲ್ಲ.. ಇಡೀ ವಾತಾವರಣಕ್ಕೇ ತಾಜಾತನ ತುಂಬುತ್ತೆ.. ಏನೋ ಹೊಸತು.. ಏನೋ ಗೆಲುವು.. ಏನೋ ಸಂತಸ.. ನೋವ ಮರೆಸಿ ಕನಸು ಹೆಣೆಸೋ ಕಲೆಗಾರ ನೀನು..

ನನ್ನ ಬರಹ ಅಷ್ಟು ಹತ್ತಿರವಾಯ್ತೇ ನಿಂಗೆ..? :) ಯಾಕೆ ಹೇಳು ಈ ನಗು.. ನೀ ಬರೋ ಮುನ್ಸೂಚನೆ ಕೊಡ್ತಾ ಇದೀಯ ನೀನು ನನಗೀಗ.. ಆ ಕಾರ್ಮೋಡಗಳು ಹೆಪ್ಪುಗಟ್ತಾ ಇವೆ... ಮತ್ತೆ ನಿನ್ನ ಆಗಮನದ ನಿರೀಕ್ಷೆ..ಓಹ್.. ಸಾಕು ಇನ್ನು ಬರೆಯೋಕಾಗಲ್ಲ.. ನೀನು ನನ್ನ್ಹತ್ರ ಬಂದಾಗ.. ನಿನ್ನಲ್ಲೇ ನನ್ನ ತೋಯಿಸಿ.. ನನ್ನನ್ನೇ ಮರೆಯೋದು ಬಿಟ್ಟು ಬರೀತ ಕೂತ್ಕೋತೀನಾ ನಾನು..?:) ನೀನೇ ತಾನೇ ಸ್ಪೂರ್ಥಿ ನಾ ಬರೆಯೋದಕ್ಕೆ.. ಮತ್ತೆ ಬರೀತಿನಿ ಬಿಡು.. ಸದ್ಯಕ್ಕೆ ನೀನು-ನಾನು.. ಬೇರೆ ಎಲ್ಲ ಆಮೇಲೆ.. :)