Tuesday, August 07, 2007

ಪ್ರಸವ..!

ಪ್ರಸವ..!

ಆ ದಿನ, ಆ ಕ್ಷಣ
ಬೆರೆತವು ನಮ್ಮಿಬ್ಬರ ತನು-ಮನ
ಅದೇನಾ.. ಅದೇನಾ..?
ನಮ್ಮ ಪ್ರೀತಿ ಕುಡಿಯೊಡೆದ
ಮಧುರ ಮೊದಲ ಕ್ಷಣ..?!

ಅಂದಿನಿಂದ ನನ್ನಲೊಂದು
ಹೊಸ ಜೀವದ ತುಡಿತ
ಅರಿತೋ ಅರಿಯದೆಯೋ
ಈಗ ಸದಾ ಅದರ ಮಿಡಿತ..

ಒಂದರೆ ಘಳಿಗೆ
ಬಯಕೆಗಳ ಮಹಾಪೂರ
ಮರು ಘಳಿಗೆ
ಮನಸೇಕೋ ಭಾರ, ಬಲು ಭಾರ..

ನನ್ನೀ ಭಾವ-ಸಂಧಿಗ್ಧಗಳಿಗೆ
ನಾನಾ ಕಾರಣ..? ನೀನಾ ಕಾರಣ..?
ಅಥವಾ ನನ್ನಲ್ಲೇ ಒಡಮೂಡಿದ
ನಮ್ಮ ಪ್ರೀತಿಯ ಭ್ರೂಣ..?!

ದಿನಗಳೆದಂತೆ
ಬಯಕೆಗಳ ಭಾರವಿಲ್ಲ..
ಬಯಕೆಗಳ ಭೋರ್ಗರೆತ ಬೇಡ
ಸದಾ ನಿನ್ನ ಸನಿಹದ ಸೋನೆ
ಜಿನುಗುತಿರಲಿ ಎಂಬ ಹಂಬಲ..!

ಬೆಳೆಯುತಿದೆ
ನಮ್ಮ ಪ್ರೀತಿಯ ಅಮೂರ್ತ ರೂಪ
ಮನದಲೇನೋ ಸವಿ ಕಳವಳ!

ಮೂಡುತಿವೆ ಪ್ರೀತಿಗೆ
ರೂಪು-ರೇಷೆ
ಆಡುತಿವೆ ಎಂದೂ ಕೇಳದ
ಹೊಸ ಭಾಷೆ..

ಸಂತಸ-ದುಗುಡಗಳೊಂದಿಗೆ
ಕಳೆಯುತಿವೆ ಕ್ಷಣ-ಕ್ಷಣ
ಪ್ರಸವ ವೇದನೆಯ ಕಲ್ಪನೆ..
ಕಂಡರಿಯದ ತಲ್ಲಣ.. ಕಂಪನ..!!

ಆ ದಿನ..
ಅಬ್ಬಾ! ಜೀವ ಹೋಗಿ
ಮರಳಿ ಬಂದ ಅನುಭಾವ..
ವಾತ್ಸಲ್ಯದ ಆರೈಕೆಗೆ
ಕೊನೆಗೂ ಜೀವಂತವಾಯಿತು
ಹೊಸದೊಂದು ಜೀವ..
ಅಂದು ನಮ್ಮ ಪ್ರೀತಿಯ ಪ್ರಸವ..!

ಪ್ರೀತಿ ಈಗ ಉಸಿರಾಡುತಿದೆ
ತನ್ನದೇ ಸ್ವಂತಿಕೆಯಿಂದ..

ಒಂದಾದ ಪ್ರೀತಿ, ಬೇರೆಯಾಯಿತೇ?
ಅಥವಾ..? ಬೇರೆಯಾದ ಪ್ರೀತಿ ಒಂದಾಯಿತೆ..?!!
ಬಿಡಿಸಲಾಗದ ಈ ಒಗಟು..
ಪ್ರೀತಿ ಇರುವವರೆಗೂ..
ಗೆಳೆಯ..
ಜನ ಮರುಳು.. ಜಾತ್ರೆ ಮರುಳು...!

Friday, May 11, 2007

ಮಳೆ.. - ೧

ಪದೇ ಪದೇ ನೆನಪಾದೆ.. ಪದೇ ಪದೇ ನೆನೆದೆ ಅನ್ನೋ ಥರ.. ನಿನ್ನ ಬಗ್ಗೆ ಮತ್ತೆ ಬರೆಯೋಣ ಅನಿಸ್ತಾ ಇದೆ.. ಕಲ್ಪನೆಗಳಿಗೆ ಕೊನೆಯೆಲ್ಲಿ..? :) ಈಗ ನಿನ್ನ ಋತು.. ದಿನ-ಬೆಳಗಾದರೆ ಮತ್ತೆ ನಿನ್ನ ನೋಡುವ ಅವಕಾಶ ಸಿಗಬಹುದೇನೊ ಅನ್ನೋ ಭಾವನೆಯಲ್ಲೇ.. ದಿನಗಳು ಕಳೆದದ್ದು ಗೊತ್ತೇ ಆಗಲ್ಲ...

ಸುಡು ಬಿಸಿಲ ದಿನಗಳಲ್ಲೂ ನಿನ್ನ ನಿರೀಕ್ಷೆಯಲ್ಲೇ ದಿನ ನೂಕ್ತೀನಿ ನಾನು.. ಆದರೆ ಒಮ್ಮೊಮ್ಮೆ ಅನಿಸುತ್ತೆ.. ಆ ಬಿಸಿಲ ಬಿಸಿ ತಾಕೋದಕ್ಕೇ ನಿನ್ನ ತಂಪು ಅಷ್ಟು ಹಿತ ಅನಿಸೋದು ಅಂತ..ಸದಾ ಕಾಲ ನೀನೇ ಇದ್ದಿದ್ರೆ ಹೇಗಿರೋದು...? ಚೆನ್ನಾಗಿರೋದು ಅಂತ ಅನಿಸುತ್ತೆ.. ಆದರೆ ಎಲ್ಲೋ ಅನುಮಾನ.. ಹಾಗಿದ್ದಿದ್ರೆ.. ನಾನು ನಿನ್ನ, ನಿನ್ನ ಬರುವನ್ನ, ನಿನ್ನೊಡನೆ ಕಳೆಯೋ ಪ್ರತಿ ಕ್ಷಣಗಳನ್ನ ಇಷ್ಟು ಗಾಢವಾಗಿ ಬಯಸುತ್ತಿದೆನಾ/ಪ್ರೀತಿಸುತ್ತಿದೆನಾ ಅಂತ.. ಅರ್ಥ ಆಗುತ್ತೆ ನಿಂಗೆ ಅನ್ಕೋತೀನಿ.. ಬೇರೆಯವರಿಗೆ ಖುಶಿ ತರುವವರಿಗೆ ಅರ್ಥ ಮಾಡ್ಕೋಳ್ಳೋ ಶಕ್ತಿನೂ ಇರತ್ತೆ ಅಂತ ನಂಗೊತ್ತು :) ಹಾಡು ನೆನಪಾಗ್ತಾ ಇದೆ.."ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ನಿಜ ಅನಿಸಲ್ವ ನಿನಗೆ..?

ಬೇಸಿಗೆಯ ವಿರಹದ ದಿನಗಳ ಬಳಿಕ.. ಬಹಳ ಕಾಯಿಸಿ ಸತಾಯಿಸಿ ಬರ್ತೀಯ.. ನನಗೆ ನಿನ್ನ ಮೇಲಿರೋ ಪ್ರೀತಿಗೆ.. ನೀನು ಬಂದರೆ ಬಣ್ಣಿಸಲಸದಳ ಸಂಭ್ರಮ.. ಯಾವ ಹಬ್ಬಕ್ಕೂ ನಾನಿಷ್ಟು ಸಡಗರ ಪಡಲ್ಲ.. ನಿನ್ನ ಜೊತೆ ಇರೋದೆ ಹಬ್ಬ ನನಗೆ :) ಇರುವಷ್ಟು ಹೊತ್ತು ಪ್ರೀತಿ ಮಳೆ.. (ಮತ್ತೆ ಬರೀತಿನಿ ಪ್ರೀತಿ ಮಳೆ ಬಗ್ಗೆ) ಆ ಮಳೆಯಲ್ಲಿ ನೆಂದು, ಮಿಂದು ಮೈ ಮರೆತು ಮನದಲ್ಲಿ ಸಂತಸದ ಹೊಳೆ ಹರೀತಾ ಇರುವಾಗಲೇ ಕಾಲನ ಗಂಟೆ.. 'ಈ ಟೈಮ್ ಅನ್ನೋದು ಪಕ್ಕಾ ೪೨೦' ಅಂತ 'ಮುಂಗಾರು ಮಳೆ' ಲಿ ಒಂದು ಸಂಭಾಷಣೆಯ ಸಾಲು.. ನಿನ್ನ ಬಗ್ಗೆ ಹೇಳ್ತಾ ಇಲ್ಲ ನಾನು.. 'ಮುಂಗಾರು ಮಳೆ' ಅನ್ನೋದು ಒಂದು ಸುಂದರ ಕನ್ನಡ ಚಿತ್ರದ ಹೆಸರು.. ಹೆಸರಿಗೆ ತಕ್ಕಂತೆ ಆ ಚಿತ್ರಕ್ಕೆ ನೀನೇ ಬಂಡವಾಳ.. ಅದರ ಮಾತು ಬೇಡ ಈಗ..

ಸರಿ ಟೈಮ್ ಆಯ್ತು.. ನನಗೆ ನಂಬೋಕೇ ಆಗಿರಲ್ಲ.. ನಿನ್ನ ವಿದಾಯದ ಸಮಯ ಬಂತು ಅಂತ.. ಮನದಲ್ಲಿ ಎಷ್ಟೊಂದು ಆನಂದ.. ಅಷ್ಟೇ ಬೇಸರ..ನೆನಪುಗಳ ಹಸಿರನ್ನ ಮತ್ತೆ ಅಗಲಿಕೆಯ ಬೆಂಗಾವಲನ್ನ ಎರಡನ್ನೂ ಒಟ್ಟೊಟ್ಟಿಗೆ ಉಡುಗೊರೆ ಕೊಟ್ಟು ನಿಧಾನವಾಗಿ ಮರೆಯಾಗ್ತೀಯ ನೀನು.. ಆಗಷ್ಟೇ ಮೈ ತಾಕಲೋ ಬೇಡವೋ ಅನ್ನೋ ತಂಗಾಳಿಯ ಚಳಿನಲ್ಲಿ ನಾನು ಮೆಲ್ಲಗೆ ಗುನುಗ್ತೀನಿ.. "ಜೀವನ್ ಮೀಠೀ ಪ್ಯಾಸ್ ಯೆ ಕೆಹೆತೆ ಹೋ.." ಅಂತ.. :)

Thursday, May 10, 2007

ಮಳೆ..


ಇಂದು ನೆನ್ನೆಯದಲ್ಲ.. ನಮ್ಮಿಬ್ಬರ ಸಂಬಂಧ.. ಪ್ರೀತಿಯ ಋತು ನೀನು.. ವರ್ಷ ಧಾರೆ.. ಏನಿದು ಅಸಂಬದ್ಧವಾಗಿವೆ ಮಾತುಗಳು ಅನಿಸ್ತಾ ಇದೆಯಾ..? :) ಇರಬಹುದೇನೋ.. ತುಂಬಾ ಬ್ಲಾಗ್ ಗಳನ್ನ ಓದಿದೆ ಇತ್ತೀಚೆಗೆ ನಿನ್ನ ಬಗ್ಗೆ.. ನೀನು ತನು-ಮನದ ಭಾವನೆಗಳ ಕೆಣಕುವ ಮೋಡಿಗಾರ ಅಂತ ಗೊತ್ತು.. ಆದರೆ.. ಹಲವು ಮನಗಳಿಗೆ ಹುಚ್ಚು ಹಿಡಿಸುವ ನಿನ್ನ ಶಕ್ತಿ ನೋಡಿದರೆ ಆಶ್ಚರ್ಯವಾಗತ್ತೆ..ನಿನ್ನ ಬಗ್ಗೆ ಬರೆಯಲ್ಲ ಜನ.. ನಿನ್ನಲ್ಲಿ ತಮ್ಮನ್ನೇ ಮರೆಯುವ ಪರಿಯನ್ನ ಬರೀತಾರೆ..:) ನೀ ನೀಡುವ ತಲ್ಲಣಗಳ ಬಗ್ಗೆ ಬರೀತಾರೆ.. ಸುಮಾರು ದಿನಗಳಿಂದ.. ಅಲ್ಲಲ್ಲ ವರ್ಷಗಳಿಂದ ನಿನ್ನ ಬಗ್ಗೆ ಬರೆಯೋ ಆಸೆ ನಂಗೆ.. ಒಂದೆರಡು ಸಲ ಬರೆದದ್ದೂ ಇದೆ.. ಆದರೆ ಅದ್ಯಾಕೋ ಇವತ್ತು ನಿನ್ನನ್ನ ಜೀವಂತಗೊಳಿಸೋ ಕಲ್ಪನೆ ಬಂತು.. ನೀನೂ ಪ್ರೀತಿಯ ಥರ.. ಒಂದೇ ವ್ಯತ್ಯಾಸ ಅಂದ್ರೆ.. ನೀನು ಕಣ್ಣಿಗೆ ಕಾಣ್ತೀಯಾ ಪ್ರೀತಿ ಕಾಣಲ್ಲ.. ಅಷ್ಟೇ.. ಆದರೆ ನೀವಿಬ್ರೂ ನನ್ನಲ್ಲಿ ಹುಟ್ಟು ಹಾಕೋ ಭಾವನೆಗಳಲ್ಲಿ ಎಂಥ ಸಾಮ್ಯ ಅಂತೀಯ.. ಈಗ ಬೇಡ ಪ್ರೀತಿ ವಿಚಾರ.. ಮಾತಿಗೆ ಬಂತು ಹೇಳಿದೆ :)


ನಿನ್ನ ಸ್ಪರ್ಶ.. ತನುವಿನ ಅಣು-ಅಣುವನ್ನೂ ಬಡಿದೆಬ್ಬಿಸುತ್ತೆ.. 'ರೋಮಾಂಚನ..' ಗೊತ್ತಲ್ಲ..? ನಿನಗೇನೂ ಹೊಸದಲ್ಲ ಬಿಡು..:) ನೆನಪುಗಳನ್ನ.. ಭಾವನೆಗಳನ್ನ ಕೆಣಕುತ್ತೆ.. ನಿನ್ನ ಶಬ್ದ, ಅಬ್ಬರ, ಭರಾಟೆ.. ಮಿಂಚು, ಸಿಡಿಲು.. ಎಲ್ಲವೂ ಅಭೂತಪೂರ್ವ.. ನಿನ್ನ ಮತ್ತು ನೀ ನೀಡುವ ಅನುಭವಗಳನ್ನ ಬಣ್ಣಿಸುವಾಗ..ನಾ ಬರೆಯುವ ಪದಗಳು ಅಶಕ್ತವಾಗುತ್ತೆ..ಆದರೂ ನಿನ್ನ ಪದಗಳ ಬೊಗಸೆಯಲ್ಲಿ ಹಿಡಿದಿಡೋ ಆಸೆ.. ನೀ ಬಂದಾಗಲೆಲ್ಲಾ ನಾನು ಹೋದ ಜನುಮದಲ್ಲಿ ನವಿಲಾಗಿದ್ದೆನಾ.. ಅಂತ ಎಷ್ಟೋ ಸಲ ಯೋಚಿಸಿ ಮುಗುಳು ನಗೆ ನಕ್ಕೀದಿನಿ ನಾನು.. ಹೃದಯ ತುಂಬುವಂಥ ಮುಗುಳು ನಗೆ ಕೊಡೋ ಶಕ್ತಿ.. ನಿನಗೆ ಮತ್ತೆ ಪ್ರೀತಿಗೆ ತಾನೆ ಇರೋದು.. :) ಮತ್ತೆ ಪ್ರೀತಿ.. ಕ್ಷಮೆಯಿರಲಿ.. ನಿಮ್ಮಿಬ್ಬರಲ್ಲಿ ನನಗೆ ಯಾರು ಬಹಳ ಇಷ್ಟ ಅಂತ ಹೇಳೋದು.. ಬಹಳ ಕಷ್ಟ.. ನಿಮ್ಮ ಸಾಮ್ಯ.. ನಿಮ್ಮ ಸನಿಹ.. ಬದುಕನ್ನು ಮರೆಸುತ್ತೆ..:)

ಇನ್ನೊಂದೇನು ಗೊತ್ತಾ..? ನಿನ್ನ ಬರುವು ಮನಕಷ್ಟೇ ಅಲ್ಲ.. ಇಡೀ ವಾತಾವರಣಕ್ಕೇ ತಾಜಾತನ ತುಂಬುತ್ತೆ.. ಏನೋ ಹೊಸತು.. ಏನೋ ಗೆಲುವು.. ಏನೋ ಸಂತಸ.. ನೋವ ಮರೆಸಿ ಕನಸು ಹೆಣೆಸೋ ಕಲೆಗಾರ ನೀನು..

ನನ್ನ ಬರಹ ಅಷ್ಟು ಹತ್ತಿರವಾಯ್ತೇ ನಿಂಗೆ..? :) ಯಾಕೆ ಹೇಳು ಈ ನಗು.. ನೀ ಬರೋ ಮುನ್ಸೂಚನೆ ಕೊಡ್ತಾ ಇದೀಯ ನೀನು ನನಗೀಗ.. ಆ ಕಾರ್ಮೋಡಗಳು ಹೆಪ್ಪುಗಟ್ತಾ ಇವೆ... ಮತ್ತೆ ನಿನ್ನ ಆಗಮನದ ನಿರೀಕ್ಷೆ..ಓಹ್.. ಸಾಕು ಇನ್ನು ಬರೆಯೋಕಾಗಲ್ಲ.. ನೀನು ನನ್ನ್ಹತ್ರ ಬಂದಾಗ.. ನಿನ್ನಲ್ಲೇ ನನ್ನ ತೋಯಿಸಿ.. ನನ್ನನ್ನೇ ಮರೆಯೋದು ಬಿಟ್ಟು ಬರೀತ ಕೂತ್ಕೋತೀನಾ ನಾನು..?:) ನೀನೇ ತಾನೇ ಸ್ಪೂರ್ಥಿ ನಾ ಬರೆಯೋದಕ್ಕೆ.. ಮತ್ತೆ ಬರೀತಿನಿ ಬಿಡು.. ಸದ್ಯಕ್ಕೆ ನೀನು-ನಾನು.. ಬೇರೆ ಎಲ್ಲ ಆಮೇಲೆ.. :)

Wednesday, April 18, 2007

ವಾಚಾಳಿ..

ದಿನ ಬೆಳಗಾದ್ರೆ ಏನೇ ನಿನ್ನ ಕಾಟ ಅಂತಿಯಾ? ಅಲ್ಲಾ ಸೂರ್ಯ ನೂ ದಿನ ಬೆಳಗದ್ರೆ ಬರ್‍ತಾನೆ.. ಯಾರಿಗಾದ್ರೂ ಬೇಜಾರಾಗುತ್ತಾ ಅವನು ಬಂದ್ರೆ.. ನಿಜ ಅಂದ್ರೆ ಅವನು ಮರಳಿ ಬಂದ್ರೇನೆ ಮತ್ತೊಂದು ದಿನ ಅಂತ ಶುರು ಆಗೋದು ಅಲ್ವಾ? ಅವನು ಬಂದ್ರೇನೆ ಬೆಳಗು ಅವನು ಬಂದ್ರೇನೆ ಬದುಕು...

ಹಾಗೆ ನಾನೂ ಕೂಡ.. ಜೀವನದಲ್ಲಿ ಆಸಕ್ತಿನೇ ಇಲ್ದೇ ಬದುಕೋ ಜನಕ್ಕಿಂತ ನಾನು ವಾಸಿ ಅಂತ ನಿನಗನಿಸಲ್ವ.. ನಕ್ಕೋ,ಅತ್ತೋ, ಕೋಪ ಮಾಡ್ಕೊಂಡೋ, ವಟ ವಟ ಅಂತ ಮಾತಾಡ್ಕೊಂಡೋ.. ಹೇಗೋ.. ಒಟ್ಟಿನಲ್ಲಿ..ಜೀವನದ ಫೀಲ್ ನ ನಾನು ನಿಂಗೆ ಕೊಡ್ತೀನಿ ಅಂತ ನಿನಗನಿಸಲ್ವಾ? ಯೋಚನೆ ಮಾಡು.. ನಾನಿಲ್ದಿದ್ರೆ.. ಬಿಕೋ ಅನಿಸಲ್ಲ..?

ಏನು ಜಂಭದ ಕೋಳಿ ಬಡಾಯಿ ಕೊಚ್ಕೊಂತೀಯ ಅಂತ ಬೇಕಾದ್ರೂ ಅನ್ಕೋ.. ನಾನು ಸುಮಾರು ದಿನಗಳವೆರೆಗೆ ನಿನ್ನ ಜೀವನದಲ್ಲಿ ಇರಲ್ಲ ಅಲ್ಲ.. ಆವಾಗ ಇದನ್ನ ಓದು (ಆ ದಿನ ಬರದೇ ಇರಲಿ ಅಂತಾನೇ ಪ್ರಾರ್ಥನೆ.. ಆದ್ರೂ..) ನಿಂಗೆ ನಿಜ ರಿಯಲೈಜ್ ಆಗತ್ತೆ..

ಸುಮ್ನೆ ಕೂತು.. (ಐ ಮೀನ್.. ಮಾತಾಡ್ದೆ ಸುಮ್ನೆ ಕೂತು :) ) ರೂಢಿ ಇಲ್ಲ ನಂಗೆ.. ಮಾತಾಡ್ಬೇಕು ಆಂತ ಅನಿಸಿದಾಗ ಮಾತಾಡ್ಬೇಕು.. ಮಾತಾಡೋಕೆ ಟಾಪಿಕ್ ಬೇಕು ಅಂತಾನೂ ಏನೂ ಇಲ್ಲ.. ಈಗ ಕುಟ್ತಾ ಇದೀನಲ್ಲ ತೌಡು.. ಇದೇ ಥರ ಮಾತಾದ್ರೂ ಸಾಕು.. :) ಅಲ್ಲ ಅಷ್ಟಕ್ಕೂ ಭಾಷೆ ಅಂತ ಇರೋದು ಯಾಕೆ ಅಂತಾ..? ಮನಸಿಗೆ ಬಂದದ್ದನ್ನ ವ್ಯಕ್ತ ಪಡಿಸೋಕೆ ಅಂತ ತಾನೆ..? ಸೊ.. ಮಾತಾಡ್ಬೇಕು.. ಮಾತಾಡ್ತಾನೇ ಇರಬೇಕು.. ಅದೂ ನಿನ್ನ ಜೊತೆ ಮಾತಾಡೊ ಮಜಾ ನೇ ಬೇರೆ (ಕಾಟ ಅಂತ ನೀನು ಅನ್ಕೋಬಹುದೇನೋ.. ಆವಾಗಾವಾಗ.. ಎನೂ ಮಾಡಕಾಗಲ್ಲ ಸಾರ್.. ಸ್ವಲ್ಪ ಅಡ್ಜಸ್ಟ್ ಮಾಡಿ.. :) ) ಈಗ ಅಂತೂ ಬ್ಲಾಗ್ ಕೈಗೆ ಸಿಕ್ಬಿಟ್ಟಿದೆ..ಮಂಗನ ಕೈಗೆ ಮಾಣಿಕ್ಯ ಸಿಕ್ಕ ಹಾಗೆ (ನಾನು ಬ್ಲಾಗ್ ಬಗ್ಗೆ ಹೇಳ್ತಾ ಇರೋದು.. ನಿನ್ನ ಬಗ್ಗೆ ಅಲ್ಲ..;-) ) ಒಂದೊಂದ್ ಸಲ ನೀನಿಲ್ದೆ ಇದ್ರೂ ಪರವಾಗಿಲ್ಲ.. ಬ್ಲಾಗ್ ಇದೆಯಲ್ಲ.. ನೀನು ಅನ್ಕೊಂಡು ಮಾತಾಡೋಕೆ.. ಈಗ ಮಾಡ್ತಾ ಇದೀನಲ್ಲ ಹಾಗೆ.. :)

ಅದೇನೇ ಇರಲಿ ನೀನು ನೀನೇ.. ಬ್ಲಾಗ್ ನಿನ್ಮುಂದೆ ಏನೂ ಇಲ್ಲ :)

ಸಾಕು ಅನ್ಸುತ್ತೆ.. ಉಫ್.. ಸುಸ್ತಾಯ್ತು.. :)

ನಿನ್ನ ನೆನಪು


ನಿನ್ನ ನೆನಪು

ನಗೆ ಗೊಂಚಲು


ನಿನ್ನ ನೆನಪು

ಕಂಬನಿ ಹೊನಲು


ನಿನ್ನ ನೆನಪು

ಕಲ್ಪನೆಗಳ ತವರೂರು


ನಿನ್ನ ನೆನಪು

ಹೊಸ ಭಾವಗಳ ಚಿಗುರು


ನಿನ್ನ ನೆನಪು

ನನ್ನ ಪ್ರತಿ ಉಸಿರು


ನಿನ್ನ ನೆನಪು

ಮಿನುಗುವ ಕಣ್ಮಿಂಚು


ನಿನ್ನ ನೆನಪು

ಲಘು ಕಂಪನದ ಕೋಲ್ಮಿಂಚು


ನಿನ್ನ ನೆನಪು

ಬದುಕಿನಾಸರೆ


ನಿನ್ನ ನೆನಪು

ಪ್ರೀತಿಯ ಸೆಲೆ


ನೀನು..

ಪ್ರೀತಿ..

ನನ್ನ ಬಾಳ ಸಂಗಾತಿ..

Friday, April 13, 2007

ಅಳುಕು..ಇಂದು ಸಂಜೆ ಏನೋ ಅಳುಕು ಮನದಲ್ಲಿ.. ಏನು ಅಂತ ಗೊತ್ತಿಲ್ಲ.. ಅರ್ಥಾನೂ ಆಗ್ತಿಲ್ಲ.. ಯಾವುದೋ ನೋವಿನ ಎಳೆ.. ಏನೋ ತಳಮಳ..
ಕತ್ತಲಲ್ಲಿ ಏನೋ ತಡಕಾಡುತ್ತಿರೋ ಅನುಭವ..ಒಂದೊಂದು ಸಲ ಬದುಕೇ ಕತ್ತಲಲ್ಲಿ ಗೊತ್ತಿರದ ವಸ್ತುವಿಗಾಗಿ ತಡಕಾಡುವುದೇನೊ ಅನ್ನೋ ಭಾವನೆ.. :) ಈ ಮನಸು, ಅದರ ಅಸ್ತಿತ್ವ ಅದರ ಆಳ.. ಅದರ ನಿರೀಕ್ಷೆ.. ಅದರ ತಳಮಳ ಎಲ್ಲ ನೋಡಿದರೆ.. ನನಗೆ ನಾನೇ ಅಪರಿಚಿತಳು ಅನಿಸುತ್ತೆ..ಅಂಥದರಲ್ಲಿ ಇನ್ನೊಂದು ಮನಸು ನನ್ನನ್ನು ಅರ್ಥ ಮಾಡಿಕೊಳ್ಳಲಿ ಅನ್ನುತ್ತೆ ಈ ಮುಗ್ಢ ಮೂರ್ಖ ಮನಸು..ಎಷ್ಟು ಗೊಂದಲಮಯ ಅಲ್ವಾ?? :)

ದಿನದ ರಭಸದ ಜಂಜಾಟಗಳಲಿ.. ಹೊರ-ಪ್ರಪಂಚದ ಸೊಗಸು ಸವಿಯುವ ಗದ್ದಲದಲ್ಲಿ.. ದಿನ-ನಿತ್ಯದ ಕೆಲಸದ ಭರಾಟೆಯಲ್ಲಿ.. ಮೆಲ್ಲನೆ ಇಣುಕಿ ನೋಡುತ್ತೆ ಮನ.. ಇದ್ದರೂ ಇಲ್ಲದಂತಿರೋ ಇದು.. ಒಂದೊದು ಸಲ ಇಲ್ಲದ ತಲ್ಲಣ ಹುಟ್ಟಿಸುತ್ತೆ..
ಮನಸು ಅನ್ನೊದೇ ಇಲ್ಲ್ದಿದ್ರೆ..?! ಅದರಿಂದಾಗೋ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆನೇ ಪುಟಗಟ್ಟಲೇ ಬರೀಬಹುದೇನೋ.. ಈ ಮನಸು ಮತ್ತೆ ಬುಧ್ಧಿ ಒಟ್ಟಿಗೆ ಕೆಲಸ ಮಾಡೊ ರೀತಿ ಮಾತ್ರ ನನಗೆ ಅಚ್ಚರಿ ಹುಟ್ಟಿಸುತ್ತೆ.. ಒಂದು ಸಲ ಮನಸಿಗೆ ಬುದ್ಧಿ ಇಷ್ಟ ಆಗಲ್ಲ ಇನ್ನೊಂದು ಸಲ ಬುದ್ಧಿಗೆ ಮನಸು ಇಷ್ಟ ಆಗಲ್ಲ.. ಮತ್ತೊಮ್ಮೆ ಎರಡೂ ಗೆಳೆಯರು.. ಈಗ ಬರೀತಿದಿನಲ್ಲ.. ಇದು ಮನಸು ಅನ್ಲಾ? ಅಥವ ಬುದ್ಧಿ ನಾ?

ಮನಸೆ ಓ ಮನಸೆ ಎಂಥಾ ಮನಸೆ..ಮನಸೆ ಒಳ ಮನಸೆ.. ಕೇಳಿದೀರ ಈ ಹಾಡು..? :)

ಏನೇ ಇರಲಿ ಮನಸಿಗೆ ಅನಿಸಿದ್ದನ್ನು ವ್ಯಕ್ತ ಪಡಿಸೋಕೆ ಇರೋ ಈ ಮುದ್ದಾದ ಭಾಷೆಗೆ.. ಈ ಹಾಳೆಗೆ.. ಈ ಲೇಖನಿಗೆ ನಾನು ಚಿರ-ಋಣಿ.. ಇವಿರಲಿಲ್ಲ ಅಂದರೆ.. ನನ್ನ ಆಂತರಿಕ ಬದುಕನ್ನು ಊಹಿಸಿಕೊಳ್ಳೋದೇ ಅಸಾಧ್ಯ...

Tuesday, March 06, 2007

ನೀನು- ನಿನ್ನ ನೆನಪು..

ನಿನ್ನ ಪ್ರೀತಿಯ ನೆನಪುಗಳೂ ಸಹ, ಥೇಟ್ ನಿನ್ನ ಥರಾನೆ.. ನನ್ನ ಜೊತೆ ತುಂಟಾಟ ಆಡುತ್ವೆ.. ನನ್ನ ಸತಾಯಿಸಿ, ನಗಿಸಿ, ಅಳಿಸಿ.. ಒಮ್ಮೆ ಕೆನ್ನೆ ಕೆಂಪಗಾಗಿಸಿದ್ರೆ ಮತ್ತೊಮ್ಮೆ ಕಣ್ಣು.. ಒಮ್ಮೊಮ್ಮೆ ಸುಮ್-ಸುಮ್ನೆ ಸ್ಮೈಲ್ ಮಾಡಿ ಮಾಡಿ ನನ್ನ ಕೆನ್ನೆಯೆಲ್ಲ ನೋಯುತ್ತೆ.. ಆದರೂ ಬೆನ್ನು ಬಿಡಲ್ಲ ನಿನ್ನ ನೆನಪುಗಳು..

ನೀನು ನನ್ನ ಹತ್ತಿರಾನೆ ಇದ್ರೂ.. ನಿನ್ನ ನೆನಪುಗಳು ನನಗೆ ಇನ್ನೂ ಹತ್ತಿರ.. ನೀನು ನನಗೆಷ್ಟು ಹತ್ತಿರಾನೋ ಅದಕ್ಕಿಂತ ಜಾಸ್ತಿ
ಹತ್ತಿರ ನಿನ್ನ ನೆನಪುಗಳು.. ಯಾಕಂದ್ರೆ ನೆನಪುಗಳು ಬೇಕು ಅನಿಸಿದಾಗಲೆಲ್ಲ ನನ್ನ ಹತ್ರ ಓಡಿ ಬರುತ್ವೆ.. ಒಂದೊಂದು ಸಲ ನೀನೂ ಕೂಡ ಹಾಗೆ ಮಾಡಕಾಗಲ್ಲ.. ನೀನು ನನ್ನವನಾದ್ರೂ.. ನಿನ್ನ ನೆನಪುಗಳು ಎಕ್ಸ್ಲೂಸಿವ್ಲಿ ನನ್ನವು.. ನೀನು ನನ್ನಿಂದ ಒಂದಿನ ಒಂದು ಕ್ಷಣ ದೂರ ಆಗಬಹುದು.. ಆದರೆ ನಿನ್ನ ನೆನಪುಗಳು ಹಾಗಲ್ಲ.. ಅವು ಎಂದೆಂದೂ ನನ್ನವು.. ಮತ್ತೆ ಎಂದೂ ನನ್ನಿಂದ ದೂರ ಆಗೋಲ್ಲ ಅವು..

ಆದರೆ ಏನು ಗೊತ್ತಾ? ನನ್ನ ಮನಸ್ಸು ನಿನಗೆ ತುಂಬ ಅಡಿಕ್ಟ್ ಆಗಿ ಬಿಟ್ಟಿದೆ.. ಅದಕ್ಕೆ ಹಳೆ ನೆನಪುಗಳು ಖುಷಿ ಕೊಟ್ಟರೂ.. ನಿನ್ನೊಂದಿಗೆ ಸೇರಿ ಇನ್ನೂ ಮಧುರವಾದ ಮಹಲುಗಳನ್ನು ಮಜಲುಗಳನ್ನು ಕಟ್ಟೋ ಆಸೆ.. ಹೊಸ-ಹೊಸ ಕಲ್ಪನೆಗಳನ್ನು ಹೆಣೆಯೋ ಆಸೆ.. ಇವತ್ತಿನ ಕಲ್ಪನೆಗಳು ನಾಳೆ ಸತ್ಯ.. ನಾಡಿದ್ದು ಮತ್ತೊಂದು ಸವಿ-ನೆನಪು..

ನಿನ್ನೊಂದಿಗೆ ಕಳೆಯೋ ಮಧುರ ಕ್ಷಣಗಳಲ್ಲೇನೋ ಒಂಥರ ಉಲ್ಲಾಸ ತುಂಬಿರುತ್ತೆ.. ಅದಕ್ಕೇ ಏನೋ ಆ ಕ್ಷಣಗಳ ನೆನಪು ಕೂಡ ನನ್ನಲ್ಲಿ ಹೊಸ ತಾಜಾತನ ತುಂಬುತ್ತವೆ.. ಬದುಕಿನ ಚಿಂತೆಗಳಿಂದ ಬಲು ದೂರ ಕರೆದೊಯ್ಯುತ್ತೆ ನನ್ನ.. ನಿನ್ನ ಆ ನೆನಪುಗಳು..

ನೀನೂ ಹುಡುಗ.. ತುಂಬ ತುಂಟ ಕಣೋ ನೀನು.. ನನ್ನ ಮನಸಿನ ಬೇಲಿಯನ್ನು ಸರಾಗವಾಗಿ ದಾಟಿ ಬಿಡ್ತೀಯ ನೀನು.. ನೆನಪುಗಳನ್ನು ಕೆಣಕಿ ಕೆರಳಿಸೋ ನಿನ್ನ ಚಾಲಾಕುತನ ನಂಗಿಷ್ಟ.. :-)

ಇದೇ ಪ್ರೀತಿನಾ ..? ಬದುಕನ್ನೇ ಮರೆಸೋದೇ ಪ್ರೀತಿನಾ ಹುಡುಗ..?