ಪ್ರಸವ..!

ಪ್ರಸವ..!

ಆ ದಿನ, ಆ ಕ್ಷಣ
ಬೆರೆತವು ನಮ್ಮಿಬ್ಬರ ತನು-ಮನ
ಅದೇನಾ.. ಅದೇನಾ..?
ನಮ್ಮ ಪ್ರೀತಿ ಕುಡಿಯೊಡೆದ
ಮಧುರ ಮೊದಲ ಕ್ಷಣ..?!

ಅಂದಿನಿಂದ ನನ್ನಲೊಂದು
ಹೊಸ ಜೀವದ ತುಡಿತ
ಅರಿತೋ ಅರಿಯದೆಯೋ
ಈಗ ಸದಾ ಅದರ ಮಿಡಿತ..

ಒಂದರೆ ಘಳಿಗೆ
ಬಯಕೆಗಳ ಮಹಾಪೂರ
ಮರು ಘಳಿಗೆ
ಮನಸೇಕೋ ಭಾರ, ಬಲು ಭಾರ..

ನನ್ನೀ ಭಾವ-ಸಂಧಿಗ್ಧಗಳಿಗೆ
ನಾನಾ ಕಾರಣ..? ನೀನಾ ಕಾರಣ..?
ಅಥವಾ ನನ್ನಲ್ಲೇ ಒಡಮೂಡಿದ
ನಮ್ಮ ಪ್ರೀತಿಯ ಭ್ರೂಣ..?!

ದಿನಗಳೆದಂತೆ
ಬಯಕೆಗಳ ಭಾರವಿಲ್ಲ..
ಬಯಕೆಗಳ ಭೋರ್ಗರೆತ ಬೇಡ
ಸದಾ ನಿನ್ನ ಸನಿಹದ ಸೋನೆ
ಜಿನುಗುತಿರಲಿ ಎಂಬ ಹಂಬಲ..!

ಬೆಳೆಯುತಿದೆ
ನಮ್ಮ ಪ್ರೀತಿಯ ಅಮೂರ್ತ ರೂಪ
ಮನದಲೇನೋ ಸವಿ ಕಳವಳ!

ಮೂಡುತಿವೆ ಪ್ರೀತಿಗೆ
ರೂಪು-ರೇಷೆ
ಆಡುತಿವೆ ಎಂದೂ ಕೇಳದ
ಹೊಸ ಭಾಷೆ..

ಸಂತಸ-ದುಗುಡಗಳೊಂದಿಗೆ
ಕಳೆಯುತಿವೆ ಕ್ಷಣ-ಕ್ಷಣ
ಪ್ರಸವ ವೇದನೆಯ ಕಲ್ಪನೆ..
ಕಂಡರಿಯದ ತಲ್ಲಣ.. ಕಂಪನ..!!

ಆ ದಿನ..
ಅಬ್ಬಾ! ಜೀವ ಹೋಗಿ
ಮರಳಿ ಬಂದ ಅನುಭಾವ..
ವಾತ್ಸಲ್ಯದ ಆರೈಕೆಗೆ
ಕೊನೆಗೂ ಜೀವಂತವಾಯಿತು
ಹೊಸದೊಂದು ಜೀವ..
ಅಂದು ನಮ್ಮ ಪ್ರೀತಿಯ ಪ್ರಸವ..!

ಪ್ರೀತಿ ಈಗ ಉಸಿರಾಡುತಿದೆ
ತನ್ನದೇ ಸ್ವಂತಿಕೆಯಿಂದ..

ಒಂದಾದ ಪ್ರೀತಿ, ಬೇರೆಯಾಯಿತೇ?
ಅಥವಾ..? ಬೇರೆಯಾದ ಪ್ರೀತಿ ಒಂದಾಯಿತೆ..?!!
ಬಿಡಿಸಲಾಗದ ಈ ಒಗಟು..
ಪ್ರೀತಿ ಇರುವವರೆಗೂ..
ಗೆಳೆಯ..
ಜನ ಮರುಳು.. ಜಾತ್ರೆ ಮರುಳು...!

Comments

MD said…
ಸುಂದರವಾಗಿ ಮೂಡಿಬಂದಿದೆ ಕವನ.
'ಒಂದಾದ ಪ್ರೀತಿ, ಬೇರೆಯಾಯಿತೇ?
ಅಥವಾ..? ಬೇರೆಯಾದ ಪ್ರೀತಿ ಒಂದಾಯಿತೆ..?!!
ಬಿಡಿಸಲಾಗದ ಈ ಒಗಟು..
ಪ್ರೀತಿ ಇರುವವರೆಗೂ..'
ಸಾಲುಗಳು ಇಷ್ಟವಾದವು.

ಹೀಗೆ ಕವನಗಳ ಪ್ರಸವ ನಡೆಯುತಿರಲಿ
dinesh said…
nice poem....
Manjula said…
ಧನ್ಯವಾದಗಳು @md. "ಕವನದ ಪ್ರಸವ" ಅಂತ ಸುಂದರವಾಗಿ ಹೇಳಿದ್ದೀರ.. :-)

ಧನ್ಯವಾದಗಳು @dinesh :-)

Keep visiting.
sunaath said…
ನಿಮ್ಮ ಕವನ ಓದಿ ಜಾನಪದ ತ್ರಿಪದಿಯೊಂದರ ಸಾಲು ನೆನಪಾಯಿತು:
"ಮಗ ನಿನ್ನ ಹಡೆವಾಗ ಮುಗಿಲಿಗೇರ್ಯಾವ ಜೀವ!"
ಮನಸು said…
kavana tumba chennagide
Swarna said…
ನೀವು ಬರೆದ ರೀತಿ ಇಷ್ಟವಾಯಿತು.
ಪ್ರೀತಿಯ ಮೂರ್ತ ರೂಪ ತನ್ನದೇ ಅಸ್ಥ್ಥಿಥ್ವವನ್ನ ಕಂಡುಕೊಳ್ಳುತ್ತದೆ.
ಸ್ವರ್ಣಾ

Popular Posts