ಉತ್ತರಗಳು ಎತ್ತರಗಳು...
(ಅವಧಿಯಲ್ಲಿ 15/10/2012 ರಂದು ಪ್ರಕಟವಾದ ಪ್ರವಾಸ ಕಥನದ ಎರಡನೇ ಭಾಗ - ಇಲ್ಲಿ ಹೆಚ್ಚಿನ ಚಿತ್ರಗಳಿವೆ ಅಷ್ಟೇ :-) ಮತ್ತೊಮ್ಮೆ ಓದಬೇಕು ಅನಿಸಿದರೆ ಓದಿ. ಅಥವಾ ಅವಧಿನಲ್ಲಿ ಓದಿಲ್ಲ ಅಂದ್ರೆ, ತಪ್ಪದೆ ಓದಿ)
ಕತ್ತಲಾದಷ್ಟೇ
ಬೇಗ ಬೆಳಕೂ ಆಗಿಬಿಟ್ಟಿತ್ತು... ೪:೪೫ ರ ಮುಂಜಾವಿನಲಿ ಕಣ್ಬಿಟ್ಟಿದ್ದು ತನ್ನಷ್ಟಕ್ಕೇ ತಾ ಹಾಡಿಕೊಳ್ಳುತ್ತಿದ್ದ ಹಕ್ಕಿಯ ಗಾನಕ್ಕೆ. ಯಾಂತ್ರಿಕ ದಿನಚರಿಯ ಹಂಗಿಲ್ಲದ ಆ ಬೆಳಗಿನಲ್ಲಿ, ಲಗು-ಬಗೆಯಿಂದ ತಯಾರಾಗಿ, ಕ್ಯಾಮೆರಾ
ಜೋತು ಹಾಕಿಕೊಂಡು, ಬೆಳಗಿನ ವಾಯು ವಿಹಾರಕ್ಕೆ ಹೆಜ್ಜೆ ಕಿತ್ತಿಟ್ಟು ಹೊರ ನಡೆದಾಗ... ತಾಜಾ ಅನಿಸೋ
ಮೌನ, ಚಿಲಿ-ಪಿಲಿ ಗಾನ, ರಾತ್ರಿ ಮಳೆಯ ನೆನಪು, ಎಲ್ಲ ತಳಕು ಹಾಕಿಕೊಂಡು ಆ ಮುಂಜಾವನ್ನು ಮತ್ತಷ್ಟು
ಮಧುರವಾಗಿಸಿಬಿಟ್ಟಿದ್ದವು...ಈ ಥರ ಜಗದ ಚಿಂತೆ ಬಿಟ್ಟು ಪ್ರವಾಸಕ್ಕೆ ಹೊರಟಾಗೆಲ್ಲ ನಮ್ಮ ಮೂರನೇ ಕಣ್ಣು
ತೆರೆದುಕೊಳ್ಳುತ್ತದೋ ಏನೋ.. ದಿನದ ಚೆಲುವನ್ನು ಆರಾಧಿಸುವ ಮನೋಭಾವ ತಾನೇ ತಾನಾಗಿ ಮೂಡಿಬಿಟ್ಟಿರುತ್ತದೆ!
ದಾರಿಗುಂಟ ಅರಳಿದ ಹೂಗಳು, ಅವುಗಳ ಮೇಲಿನ ಮಂಜಿನ ಹನಿ, ಮಳೆಯಲ್ಲಿ ನೆಂದು ಬೆಳಗಿನ ಸೊಬಗಲ್ಲಿ ಮೈ ತೊಳೆದುಕೊಳ್ಳುತ್ತಿದ್ದ
ಜೇಡರ ಬಲೆ, ಇದು ಬರಿ ಬೆಳಗಲ್ಲೋ ಅಣ್ಣಾ ಅಂತ ಗುನುಗುನಿಸುತ್ತಾ, ವಾಯು ವಿಹಾರ ಮುಗಿಸಿ ರಿಸಾರ್ಟ್‍ನ
ಹುಲ್ಲು ಹಾಸಿಗೆ ಮರಳಿದ ನನ್ನನ್ನು ಮರಳು ಮಾಡಿದ್ದು...’ಹನಿ, ಹನಿ, ಹನಿ, ಹನಿ.... ತುಂತುರು ಮಳೆ
ಹನಿ!’
ರಾತ್ರಿಯೆಲ್ಲಾ
ಧಾರಾಕಾರವಾಗಿ ಮಳೆ ಸುರಿದಿದ್ದರೂ ಆಗಲೇ ಎಳೆ ಬಿಸಿಲು ಮುಗುಳು ನಗುತ್ತಿತ್ತು (ನಮ್ಮ ಪುಣ್ಯ!
:-)) ಜೊತೆಗೇ ನನ್ನ ಮಗ ಮತ್ತು ಅವರಪ್ಪನೂ (ಅಷ್ಟೊತ್ತಿಗಾಗಲೇ ಅವರೂ ರಿಸಾರ್ಟ್ ಅಲ್ಲೇ ವಿಹಾರಿಸಲು
ಬಂದು ಬಿಟ್ಟಿದ್ದರು). ಊಂಹೂಂ... ನನ್ನ ಮಗನ ಮುಗುಳುನಗೆಗಿಂತ ಕ್ಷಣಗಳ ಹಿಂದೆ ನನ್ನ ಮರಳು ಮಾಡಿದ್ದ
ಇಬ್ಬನಿ ಹನಿಯೋ/ಮಳೆ ಹನಿಯೋ ಗೊತ್ತಿಲ್ಲ...ಅದರ ಆಕರ್ಷಣೆ ವಿಪರೀತ! ಪ್ರತಿ ಹುಲ್ಲು ಗರಿಕೆಯ ಮೇಲೆ
ಅಣಿಗೊಳಿಸಿದಂತಿದ್ದ ಹನಿ ಮಾಲೆಗಳು.. ಮತ್ತೆ ಫೋಟೊ ತೆಗೆಯಲು ಮುಂದಾದೆ. ಒಂದೆರಡು ಫೋಟೊ ಕ್ಲಿಕ್ಕಿಸುವುದರಲ್ಲೇ
ನನ್ನ ಕಣ್ಣು ಕಂಡಿದ್ದು ಅದ್ಭುತ...!
ರೋಮಾಂಚನವೋ, ಜ್ಞಾನೋದಯವೋ, ಅಂಥದ್ದೇ ಏನೋ ಆಗಿತ್ತು ನನಗೆ ಆ
ಕ್ಷಣದಲ್ಲಿ...’ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ!’ ಹುಲ್ಲು ಗರಿಕೆಯಿಂದ ಕಣ್ತೆಗೆದಾಗ ನನಗೆ ಕಂಡಿದ್ದು
ಎರಡು ಪುಟ್ಟ ಹಸಿರೆಲೆಗಳ ನಡುವೆ ಸಂತೃಪ್ತಿಯಿಂದ ಮಿಂಚುತ್ತಿದ್ದ ಸೌಂದರ್ಯ, ಮುದ್ದು ಬೆಳಕಿನ ಮಣಿ, ಅದೇ ಆ ಇಬ್ಬನಿ ಹನಿ!
ಹಸಿರೆಲೆಗಳ ಬೊಗಸೆಯಲ್ಲಿ ಹಿತವಾಗಿ ನಗುತಿದ್ದ ಆ ಹನಿಯಲ್ಲಿ ಜಗವೆಲ್ಲ ಕಾಣುತ್ತಿತ್ತು... ಎಳೆ ಬಿಸಿಲ
ಬೆಳಕ ಸಾರವನ್ನು ಹೀರಿ, ಮಿರಿ-ಮಿರಿ ಮಿಂಚುತ್ತಿದ್ದ ಹನಿ, ಸಂಪೂರ್ಣ ಪಾರದರ್ಶಕ! ವಜ್ರವೂ ನಾಚಬೇಕು
ಅಂಥ ಹೊಳಹು... ಆ ಪುಟ್ಟ ಹನಿಯಲ್ಲಿ ಅದರ ಸುತ್ತಲಿನ ಹಸಿರು, ಬೆಳಗಿನ ಆ ಮುಗಿಲು, ಅಷ್ಟೇ ಯಾಕೆ..
ಆ ರವಿಯೂ ಕೂಡ ಪ್ರತಿಫಲಿಸಿಬಿಟ್ಟಿದ್ದ... ಜಗವೊಂದು ಹನಿಯೊಳಗಂತೆ!
ಮನಸಿಲ್ಲದ
ಮನಸಿನಿಂದ ಅಲ್ಲಿಂದ ಹೆಜ್ಜೆ ಕಿತ್ತು, ಮುಂದಿನ ಪ್ರವಾಸದೆಡೆಗೆ ಹೆಜ್ಜೆಯಿಡಬೇಕಾಯಿತು. ಆವತ್ತು ನಮ್ಮ
ಪಯಣದ ಪಟ್ಟಿಯಲ್ಲಿದ್ದದ್ದು, ಕೇವಲ ಚಂಗು ಸರೋವರ, ಬಾಬಾ ಮಂದಿರ್ ಮತ್ತು ನಾಥುಲಾ ಪಾಸ್ (ಭಾರತ-ಚೀನಾ
ಗಡಿ). ಗ್ಯಾಂಗ್‍ಟಾಕ್‍ನಿಂದ ಈ ಸ್ಥಳಗಳೆಲ್ಲ ಒಂದು ೪೦-೫೦ ಕಿ.ಮೀ. ದೂರ. ಈ ಎಲ್ಲ ಸ್ಥಳಗಳು ಮಿಲಿಟರಿ
ಸರಹದ್ದಿನಲ್ಲಿ ಬರುವ ಜಾಗಗಳು. ಹೀಗಾಗಿ ಅಲ್ಲಿ ಹೋಗಲು ಮಿಲಿಟರಿ ಅನುಮತಿ ಪಡೆಯಬೇಕಾಗುತ್ತದೆ.. ಈ
ಅನುಮತಿ ದೊರೆಯುವುದೂ ಒಂಥರ ಅದೃಷ್ಟದ ವಿಷಯವೇ! ನಮ್ಮ ಅದೃಷ್ಟಕ್ಕೆ, ನಮಗೆ ಚಂಗು ಸರೋವರ ಮತ್ತು ಬಾಬಾ
ಮಂದಿರ್‌ಗೆ ಹೋಗಲು ಅನುಮತಿ ದೊರೆತಿತ್ತು..ನಾಥುಲಾ ಪಾಸ್‍ಗೆ ಹೋಗಲು ಅನುಮತಿ ದೊರೆಯಲಿಲ್ಲ. ಹಿಂದಿನ
ದಿನದ ಮಳೆಯ ಪ್ರಭಾವದಿಂದಾಗಿ ಚಂಗು ಸರೋವರಕ್ಕೆ ಹೋಗಲು ಇದ್ದ ಸನಿಹದ ದಾರಿಯನ್ನು ಮುಚ್ಚಲಾಗಿತ್ತು (ಲ್ಯಾಂಡ್ ಸ್ಲೈಡ್ ಅಲ್ಲಿ ಸರ್ವೇ ಸಾಮಾನ್ಯ).. ಹೀಗಾಗಿ ನಮ್ಮ ಕಾರ್ ಚಾಲಕ ಹೇಳಿದ್ದು, ನಾವು ಚಂಗು
ಸರೋವರ ತಲುಪಲು ಕನಿಷ್ಟ ಒಂದು ೪-೫ ಗಂಟೆ ಬೇಕಾಗಬಹುದು ಅಂತ. ಆದದ್ದಾಗಲಿ ಅಂತ ನಾವೂ ಹೊರಟೇ ಬಿಟ್ಟೆವು.
ಮರೆವು
ನನಗೊಂದು ವರ! :-) ದಾರಿ ದೂರ ಅಂತ ಗೊತ್ತಾಗಿಯೂ ಯಾವುದೇ ಪುಸ್ತಕವಿಲ್ಲದೇ ನಾ ಕಾರ್ ಏರಿದ್ದೆ. ನಿಸರ್ಗವನ್ನು,
ಪಯಣವನ್ನು ಆಸ್ವಾದಿಸುವುದು, ಸಂಗೀತವನ್ನು ಆಲಿಸುವುದು ನನ(ಮ)ಗೆ ಇದ್ದ ಎರಡೇ ಆಯ್ಕೆಗಳು. ಹೀಗಾಗಿ
ಆ ಕ್ಷಣದಲ್ಲೇ ಬದುಕಬೇಕಾದ ಅದ್ಭುತ ಅವಕಾಶ ಅಲ್ಲಿತ್ತು. ದಾರಿಗುಂಟ ಹಸಿರು, ಹೆಜ್ಜೆ-ಹೆಜ್ಜೆಗೂ ಎದುರಾಗುವ
ಝುಳು-ಝುಳು ಝರಿಗಳು, ಆ ಪ್ರದೇಶದ ಜನ, ಬಣ್ಣ-ಬಣ್ಣದ ಧ್ವಜಗಳು (ಸಿಕ್ಕಿಂನಲ್ಲಿ, ಹುಟ್ಟು, ಸಾವು,
ಮತ್ತು ಇತರ ಪ್ರಮುಖ ಸಂದರ್ಭಗಳಲ್ಲಿ ದೇವರ ಮಂತ್ರಗಳನ್ನೊಳಗೊಂಡ ಧ್ವಜಗಳನ್ನು ನೆಡುವ ಪರಿಪಾಠವಿದೆ..
ಇಷ್ಟು ನಾ ಮಾಡಿದ ವಿಚಾರಣೆಯಿಂದ, ನನಗೆ ಅರ್ಥವಾಗಿದ್ದು) ಹೀಗೇ ದಾರಿ ಸಾಗುತ್ತಿತ್ತು. ಭತ್ತ ಹೇಗೆ
ಬಿಡುತ್ತದೆ ಎಂದು ನೋಡಬೇಕೆಂದುಕೊಂಡಿದ್ದ ನನ್ನ ಬಹಳ ದಿನದ ಕುತೂಹಲಕ್ಕೂ ಅಂದು ನನಗೆ ಉತ್ತರ ಸಿಕ್ಕಿತ್ತು...
ದಾರಿಯಲ್ಲಿ ಒಂದು ಮರದ ಕೆಳಗೆ ಬಸ್‍ಗಾಗಿ ಕಾದಿದ್ದ ಅಜ್ಜಿಯೊಬ್ಬಳ ಫೋಟೊ ತೆಗೆಯಬೇಕೆಂದು ಬಹಳ ಮನಸಾಗಿತ್ತು..
ಆದರೆ ನಮ್ಮ ಕಾರ್‌ನ ಚಾಲಕ್ ನಾನ್-ಸ್ಟಾಪ್! ಅದ್ಯಾಕೋ ಗೊತ್ತಿಲ್ಲ ಸ್ವಲ್ಪ ದೂರದಲ್ಲಿ ಅವನು ಕಾರ್
ನಿಲ್ಲಿಸಿದ್ದ ಏನೋ ವಿಚಾರಿಸಲು! ನಾನು ಹೇಳದೇ-ಕೇಳದೇ ಪರಾರಿಯಾದೆ… ಆದರೆ ಆ ಅಜ್ಜಿ ಕೂತಿದ್ದು ಬಹಳ
ದೂರವಿತ್ತು ಅನ್ಸತ್ತೆ.. ದಾರಿಯಲ್ಲಿ ಇನ್ನೊಬ್ಬ ಹೆಂಗಸು ಕಂಡಳು.. ’ನಿಮ್ಮ ಫೋಟೊ ತೆಗೀಲಾ?’ ನಾ ಕೇಳಿದೆ.
’ಮೊದಲು ದುಡ್ಡು ತೆಗಿ’ ಅವಳೆಂದಳು.. ನಾ ದಂಗು! ಕಾರ್‌ಗೆ ಮರಳಿದ್ದು ಇಂಗು ತಿಂದ ಮಂಗು...!
ಪ್ರಶ್ನೆ
ಕೇಳದೇ ಉತ್ತರಿಸಿದ್ದು ಪ್ರಕೃತಿ.. ಪ್ರಶ್ನೆ ಕೇಳಿ ಉತ್ತರಿಸಿದ್ದು ಮಾನವಿ! ಕೆಲವು ಉತ್ತರಗಳೊಡನೆ,
ಮತ್ತೆ ಕೆಲವು ಪ್ರಶ್ನೆಗಳೊಡನೆ ಎತ್ತರದೆಡೆಗೆ ಹೊರಟಿದ್ದ ನಾನು…
Comments