ಗಗನ-ಅವನಿಯ ಪಯಣ...

(29-09-2012ರಂದು ನಮ್ಮ ಗ್ಯಾಂಗ್‍ಟಾಕ್  ಪ್ರವಾಸದ ಮೊದಲ ದಿನದ ಮರುಕಳಿಕೆ )

ಹಲವು ಕಲ್ಪನೆಗಳು, ಯೋಚನೆಗಳನ್ನು ಹೊದ್ದು ಮಲಗಿದಾಗ ಆಗಲೇ ರಾತ್ರಿ ೧೦ ಘಂಟೆ... ದಿನವೂ ತಡ ಮಾಡದೇ ಆವರಿಸಿಕೊಳ್ಳುವ ನಿದ್ದೆ ಅಂದ್ಯಾಕೋ ಹತ್ತಿರ ಸುಳಿಯಲೂ ಪರದಾಡುತ್ತಿತ್ತು.. ರಾತ್ರಿ ೩:೩೦ಕ್ಕೆ  ವಿಮಾನ ನಿಲ್ದಾಣಕ್ಕೆ ಹೊರಡಲು ಕಾರ್‌ನ ವ್ಯವಸ್ಥೆಯಾಗಲೇ ಆಗಿತ್ತು..ನಿದ್ದೆಯ ಶಾಸ್ತ್ರ ಮುಗಿಸಿ ೨:೩೦ಕ್ಕೆ  ಎದ್ದು ತಯಾರಾಗಿದ್ದಾಯಿತು. ಅನುಭವಗಳ ಸರಮಾಲೆಗೆ ಪೋಣಿಸಿದ ಮೊದಲ ಮಣಿ - ಟ್ರಾಫಿಕ್ ರಹಿತ ಬೆಂಗಳೂರು ರಸ್ತೆಗಳಲ್ಲಿ, ತಂಗಾಳಿಯಲ್ಲಿ ವಿಮಾನ ನಿಲ್ದಾಣ ಸೇರಿದ ಅನುಭವ :-) ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್‍ಗಿಂತಲೂ ಮೊದಲು ನನ್ನನ್ನು ಆಹ್ವಾನಿಸಿದ್ದು (ನಮ್ಮವರು ಇದನ್ನು ಗಮನಿಸಿರಲಿಕ್ಕಿಲ್ಲ ಅಂತ ನನ್ನ ಗುಮಾನಿ ;-)) ಚಿಂವ್ ಚಿಂವ್ ಗುಬ್ಬಿ...! ಅವರು ಚೆಕ್‍ಇನ್ ವಿವರಗಳನ್ನು ವಿಚಾರಿಸುತ್ತಿದ್ದರೆ ನನಗೆ ರೇಡಿಯೋ ಗಾನ! ಮುಂದುವರೆದಂತೆ ಕಂಡಿದ್ದು ಮತ್ತಷ್ಟು, ಮಗದಷ್ಟು ಗುಬ್ಬಿಗಳು... ವಿಮಾನ ನಿಲ್ದಾಣದ ದುಬಾರಿ ಛಾ ಅಂಗಡಿಗಳಲ್ಲಿ, ಜಾರಿ ಬೀಳುವಂತಹ ನೆಲಹಾಸುಗಳ ಮೇಲೆ ಜಿಗಿದಾಡುತ್ತ, ಚಿಂವ್‍ಗುಟ್ಟುತ್ತಿದ್ದ ಗುಬ್ಬಿಗಳನ್ನು ಕಂಡು ನನ್ನ ಮನಸಲಿ ಮೂಡಿದ ಫೇಸ್‍ಬುಕ್ ಸ್ಟೇಟಸ್ ’ಬೆಂಗಳೂರಿನ ಗುಬ್ಬಿಗಳೂ ಮಹತ್ವಾಕಾಂಕ್ಷಿಗಳು, ಊರು ಬಿಟ್ಟು ಸೇರಿವೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ!’  ಆದರೆ ಪೋಸ್ಟ್ ಮಾಡಲಿಲ್ಲ ಅಷ್ಟೇ ;-)




೬:೦೫ರ ಚುಮು-ಚುಮು ಮುಂಜಾವಿನಲ್ಲಿ, ರೆಕ್ಕೆಯಿಲ್ಲದೇ, ಪುಕ್ಕವಿಲ್ಲದೇ ಗಗನಕ್ಕೆ ಹಾರಿದ್ದಷ್ಟೇ! ಕೆಲವೇ ನಿಮಿಷಗಳಲ್ಲಿ ಬೇರೊಂದು ಲೋಕ...! ದೇವರ ಫೋಟೊಗಳೋ.., ’ನಾರಾಯಣ ನಾರಾಯಣ’ ನಾರದನ ಚಿತ್ರಣಗಳೋ… ಏನೋ ಗೊತ್ತಿಲ್ಲ, ತೇಲುವ ಮೋಡಗಳೊಡನೆ ತೇಲುವಾಗ ನನಗೆ ಯಾವಾಗಲೂ ಅನಿಸೋದು, ನಾವೆಲ್ಲ ಆ ಕ್ಷಣದಲ್ಲಿ ಕೈಲಾಸ ವಾಸಿಗಳು ಅಂತ! ;-) ನಿಮಿಷಗಳುರುಳಿದಂತೆ ಕಲ್ಪನೆಗಳು ಗರಿಗೆದರಿದ್ದವು...ಮೋಡಗಳು ಸಾಗರವಾಗಿ, ನದಿಯಾಗಿ, ಕಾಡಾಗಿ, ತೇಲುವ ಭಾವವಾಗಿ ಮನಸೂರೆಗೊಂಡಿದ್ದವು.. ಓಹ್...! ಆಗಲೇ ಕೋಲ್ಕತ್ತ ಬಂದಾಗಿತ್ತು.. ಕೈಲಾಸದಿಂದ ೨೯ ಡಿಗ್ರೀ ಸೆಲ್ಷಿಯಸ್^ನ  ಧಗೆಯ ಧರೆಗೆ ಮರಳಿಯಾಗಿತ್ತು!





ಕೆಲ ಗಂಟೆಗಳ ಕಾಲ ಹರಣ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ… ಆ ಸಮಯದಲ್ಲಿ ಮನವನಾಳಿದ್ದು Paulo Coelhoರ The Witch of Portobello ಪುಸ್ತಕ... ಆಗ ಓದಿದ ಕೆಲವು ಅದ್ಭುತ ಸಾಲುಗಳು.. " I watched you dancing. Well, I do the same thing, except that it’s the letters, not my body, that dance". ನಂತರ ಕೋಲ್ಕತ್ತದಿಂದ ಭಾಗ್‍ಡೊಗ್ರ ವಿಮಾನ ನಿಲ್ದಾಣ ಚಿಟಿಕೆ ಹೊಡೆಯುವುದರಲ್ಲಿ ಬಂದು ಬಿಟ್ಟಿತ್ತು!

ಇಲ್ಲಿ ನನ್ನ ಪತಿರಾಯರಿಗೊಂದು ದೊಡ್ಡ ಧನ್ಯವಾದ ಅರ್ಪಿಸಲೇಬೇಕು! ನನ್ನೆಲ್ಲ ಅನುಭಗಳಿಗೆ ಅನುವು ಮಾಡಿ ಕೊಡುವವರೇ ಅವರು! ಮೊದಲೇ ಕಾದಿರಿಸಿದ ಆರಾಮದಾಯಕ Xyloನಲ್ಲಿ ಗ್ಯಾಂಗ್‍ಟಾಕ್ ಕಡೆಗೆ ಪಯಣ... ಕಣ್ಣರಳಿಸಿ ನೋಡುವುದೂ ಒಂದು ಕಲೆ! ನೋಡಿದಾಗ ಕಂಡಿದ್ದು... ಸಮತಟ್ಟು ನೆಲದಲ್ಲಿ ಬೆಳೆದ ಚಹಾ ಗಿಡಗಳು, ಸೀರೆಯುಟ್ಟು ಹೀರೊ ಸೈಕಲ್ ಏರಿದ ನೀರೆ, ಮೂರು ಗಾಲಿ ಸೈಕಲ್ ರಿಕ್ಷಾಗಳು, ಒಂದು ರಿಕ್ಷಾದ ಚಾಲಕನ ಆಸನಕ್ಕೆ ಅಂಟಿಸಿದ್ದ ಛತ್ರಿ (ಕೆಲಸ ಮುಖ್ಯ, ಸ್ವಯಂ ಕಾಳಜಿಯೂ ಅಷ್ಟೇ ಮುಖ್ಯ!)... ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ದಾರಿಗುಂಟ ನದಿ... ಆಹಾ! ನದಿಯೊಡನೆ ಓಡುವ ವಾಹನ.. (ದಿಕ್ಕು ಬೇರೆ, ಶೈಲಿ ಬೇರೆಯಾದರೂ!), ಹೆಜ್ಜೆಗೊಂದು River View ಹೋಟೆಲ್‍ಗಳು!

೬ ಗಂಟೆಗೆಲ್ಲ ದಟ್ಟ ಕತ್ತಲು, ಕತ್ತಲಾವರಿಸುತ್ತಿದ್ದಂತೆ ಭೇಟಿಯಾದ ನದಿ ತೀಸ್ತಾ.. ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದೊಡ್ಡ, ಪವಿತ್ರ ನದಿ. ಹುಣ್ಣಿಮೆ ಹಿಂದೋ ಮುಂದೋ ಇತ್ತು ಅನ್ಸತ್ತೆ, ಬೆಳದಿಂಗಳ ಮಾಯೆ ನದಿಯ ಕಲರವದೊಡನೆ ಹರಿಯುತ್ತಿತ್ತು... ಕಪ್ಪು-ಕಪ್ಪು, ಎತ್ತರದ ಬೆಟ್ಟಗಳು, ಹಾಲು ಬೆಳದಿಂಗಳು, ಬೆಳದಿಂಗಳ ಕುಡಿದು ಜುಳು, ಜುಳು ಹರಿಯುತ್ತಿದ್ದ ತೀಸ್ತಾ! ಕವಿ ಮನಸಿಗೆ ಇನ್ನೊಂದು ಲೋಕ... ಅಬ್ಬಾ! ಒಂದೇ ಲೋಕದಲ್ಲಿ ಮತ್ತೆ ಅದೆಷ್ಟು ಲೋಕಗಳು...!!


ಕಳೆದು ಹೋಗಿ ಮತ್ತೆ ಮರಳಿ, ಕಳೆದು ಹೋಗಿ ಮತ್ತೆ ಮರಳಿ, ಗ್ಯಾಂಗ್‍ಟಾಕ್ ತಲುಪಿದಾಗ ಗಂಟೆ ೮:೨೦, ಧೋ ಮಳೆಯ ಸ್ವಾಗತ! ಮಳೆಗೆ ಮನ ಹಿಗ್ಗಿದರೂ ಪ್ರವಾಸದ ಕಥೆಯೇನು ಅನ್ನೋ ಅಳುಕು ಹೀಗೆ ಬಂದು ಹಾಗೆ ಹೊಯ್ತು.. ಮಳೆ ಸ್ವಾಗತ ಕೋರಿದ ಪ್ರವಾಸಗಳೆಲ್ಲ ನನ್ನ ಅನುಭವದಲ್ಲಿ ಅದ್ಭುತವಾಗಿರುತ್ತವೆ... ಅದೇ ನಂಬಿಕೆಯೊಡನೆಯೇ ಕೋಣೆ ಸೇರಿ, ಬಿಸಿ-ಬಿಸಿ ಊಟವುಂಡು, ಬೆಚ್ಚಗೆ ಮಲಗಿದ್ದು.. ಮಳೆ ಸದ್ದಿಗೆ ಕಿವಿಯಾಗಿ!






Comments

ಗ್ಯಾಂಗ್ಟಕ್ ಪ್ರವಾಸದ ವಿವರಗಳು ನನಗೆ ಖುಷಿ ಕೊಟ್ಟವು. ಒಳ್ಳೆಯ ಚಿತ್ರಗಳು ಹಾಕಿದ್ದೀರ.

ನಿಮ್ಮಿಬ್ಬರದೂ ಒಂದು ಚಿತ್ರ ಬೇಕಿತ್ತು.

"ಫೇಸ್‍ಬುಕ್ ಸ್ಟೇಟಸ್ ’ಬೆಂಗಳೂರಿನ ಗುಬ್ಬಿಗಳೂ ಮಹತ್ವಾಕಾಂಕ್ಷಿಗಳು, ಊರು ಬಿಟ್ಟು ಸೇರಿವೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ!’"

ನೀವು ಹಾಕದಿದ್ದರೇನಂತೆ ನಿಮ್ಮ ಹೆಸರಿನಲ್ಲಿ ನಾವೇ ಹಾಕುತ್ತೇವೆ ಬಿಡಿ!
ಮನಸು said…
ವಾಹ್..!! ಒಳ್ಳೆ ಮಸ್ತ್ ಟ್ರಿಫ್ ಮಾಡಿದ್ದೀರಿ.. ಮುಂದಿನ ಸ್ಥಳ ಪರಿಚಯವೂ ಮಾಡಿ..:) ಗುಬ್ಬಿಗಳಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖುಷಿಕೊಟ್ಟಿವೆ ಅದಕ್ಕೆ ಅಲ್ಲಿ ಹೋಗಿವೆ ಎಂದೆನಿಸುತ್ತೆ.
Unknown said…
ಮುಂದಿನ ಕಂತಿಗೆ ಕಾಯುವ ಹಾಗೆ ಮಾಡಿದ್ದೀರಿ...ಬೆಂಗಳೂರಿನಲ್ಲಿ ಗುಬ್ಬಿಗಳಿರುವುದು ಖುಷಿ ಎನಿಸಿತು,ಒಂದೇ ಲೋಕದಲ್ಲಿ ಅದೆಷ್ಟು ಲೋಕಗಳನ್ನು ಕಾಣುವ ನಿಮ್ಮ ಕಣ್ಣಿನೊಳಗೆ ಇಣುಕಬೇಕು ಅನ್ನಿಸ್ತಿದೆ
sunaath said…
ಪಯಣದ ಅನುಭವಗಳನ್ನು ಸೊಗಸಾಗಿ ಚಿತ್ರಿಸಿದ್ದೀರಿ. ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ.
ಯೆಸ್! ಚೆನ್ನಾಗಿ ಬಂದಿದೆ ಪ್ರವಾಸ ಕಥನ.ದಯವಿಟ್ಟು ಮುಂದುವರೆಸಿ.
You have that flair.. Thumbs Up! :-)
Manjula said…
ಬದರಿ, ಸುಗುಣ, ಜಯಲಕ್ಷ್ಮಿ, ಸುನಾಥ ಕಾಕಾ & ಜೋಷಿ ಅವರೆ ನಿಮ್ಮೆಲ್ಲರ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.. :-) ಪ್ರವಾಸ ಕಥನ ಮುಂದುವರೀತಿದೆ (ಬರೀತಿದೀನಿ) ಮುಂದಿನ ವಾರದಲ್ಲಿ ಖಂಡಿತ updates ತಿಳಿಸುವೆ :-)
ನಮಸ್ತೆ ಮಂಜುಳಾ, ಪ್ರವಾಸ ಕಥನ ಚೆನ್ನಾಗಿದೆ.
ಜಲನಯನ said…
ಮಂಜುಳಾ ಚನ್ನಾಗಿದೆ ಪ್ರವಾಸ ಕಥನ,,, ಇನ್ನೂ ಚಿತ್ರಗಳು ಅನುಭವ ಮೂಡಿಬರಲಿ.

Popular Posts