ಕಣ್ಮಿಂಚು...









ಕಣ್ಣು ಮಿಟುಕಿಸಿಯಾಗಿದೆ
ಗೆಳೆಯ, ಮಾಡುವುದೇನು ನಾನಿನ್ನು?
ಕೇಳಿತೊಂದು ನಕ್ಷತ್ರ ಇನ್ನೊಂದನ್ನು

ಅವಳ ದೃಷ್ಟಿಯ ಜ್ವಾಲೆ
ಕೆಣಕುತಿದೆ ನನ್ನೊಳಹನ್ನು
ತಾಳದಾಗಿಹೆ ನಾ
ಆ ನೋಟದ ಬಿಸುಪನ್ನು..!

ಹೆದರಬೇಡ ಮಿತ್ರ
ಏನೇ ಆದರೂ
ನೀನವಳಿಗೆ ನಿಲುಕದ ನಕ್ಷತ್ರ!
ಎಷ್ಟೇ ತೀಕ್ಷ್ಣವಾಗಿದ್ದರೂ
ಅವಳ ಆ ನೋಟ
ತಲುಪಲಾರದದು
ಈ ತಾರೆಗಳ ತೋಟ
ಹೇಳಿತಿನ್ನೊಂದು ತಾರೆ
ತನ್ನ ಗೆಳೆಯನ ಸಂತೈಸುತ್ತ...

ಮಿರ-ಮಿರನೆ ಮಿಂಚುತ್ತ
ಮಿಂಚಿ ಹಿಂಜರಿಯುತ್ತ
ನೆಟ್ಟಿತಾ ನಕ್ಷತ್ರ
ತನ್ನ ನೋಟವ, ಆ ಚೆಲುವ ಕಂಗಳತ್ತ

ಕ್ಷಣಗಳುದುರಿದಂತೆ
ಗಾಢವಾಯಿತು ಆಕರ್ಷಣೆ
ಅವಳ ಸೆಳೆತಕೆ ಆಯ ತಪ್ಪಿ
ಜಾರಿಯೇ ಬಿಟ್ಟಿತದು ಭುವಿಗೆ ಮೆಲ್ಲನೆ!

ಜಾರಿದ ನಕ್ಷತ್ರವ
ತನ್ನ ಕಣ್ಮಿಂಚಲಿ ಸೆರೆ ಹಿಡಿದು
ಆ ಬೆಳದಿಂಗಳ ಬಾಲೆ ನಗುತಿರಲು
ಆ ತಾರಾ ಮಿತ್ರನಿಗೆ ಇನ್ನಿಲ್ಲದ ದಿಗಿಲು!

ಕರಗುವ ಮುನ್ನ ತಾನಿನ್ನು
ಆ ಮಾಯಾಂಗನೆಯ ನೋಟಕೆ
ಸರಿಯಿತದು ಬೆಳಕ ಪರದೆಯ ಹಿಂದೆ
ತನ್ನ ವಿಶ್ರಾಂತಿಯ ತಾಣಕೆ

ಹೋಗುವ ಮುನ್ನ
ಸೂರ್ಯನಿಗೂ ಎಚ್ಚರಿಸಿತದು
ನೂರು ನಕ್ಷತ್ರಗಳ ಸೆಳೆದಾಗಿದೆ ಆ ಕಂಗಳು
ನೋಟ ಬೆರೆಸೀಯ ಅವಳೊಂದಿಗೆ ಜೋಕೆ!



Comments

sunaath said…
ಮಂಜುಳಾ, ಬಹಳ ದಿನಗಳ ಬಳಿಕ ನಿಮ್ಮ blogpost ಓದುತ್ತಿರುವುದೇ ಒಂದು ಖುಶಿ! Astrophysicsಅನ್ನು ಮಾಯಾಂಗನೆಯನ್ನಾಗಿ ಮಾಡಿದ ನಿಮ್ಮ ಕವನ ನನ್ನ ಮೇಲೆ ಮೋಡಿ ಹಾಕಿತು!
Manjula said…
ನಿಮ್ಮ ಕಾಮೆಂಟ್ ಇಲ್ದಿದ್ರೆ ನನ್ನ ಬ್ಲಾಗ್ ಪೋಸ್ಟ್ ಅಪೂರ್ಣ ಅನ್ಸತ್ತೆ.. ಧನ್ಯವಾದ ಕಾಕಾ ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಮೆಚ್ಚುಗೆಯ ನುಡಿಗಳಿಗೆ.. ಕನ್ನಡದ ಒಡನಾಟ ಈಗೀಗ ಬಹಳವೇ ಆಗಿರೋದ್ರಿಂದ ಇನ್ಮುಂದೆ ಭಾವ-ದರ್ಪಣ ಮತ್ತೆ ಮಿರ-ಮಿರ ಮಿಂಚಬಹುದು..! :-)

Popular Posts