ಕಣ್ಮಿಂಚು...
ಕಣ್ಣು ಮಿಟುಕಿಸಿಯಾಗಿದೆ
ಗೆಳೆಯ, ಮಾಡುವುದೇನು ನಾನಿನ್ನು?
ಕೇಳಿತೊಂದು ನಕ್ಷತ್ರ ಇನ್ನೊಂದನ್ನು
ಅವಳ ದೃಷ್ಟಿಯ ಜ್ವಾಲೆ
ಕೆಣಕುತಿದೆ ನನ್ನೊಳಹನ್ನು
ತಾಳದಾಗಿಹೆ ನಾ
ಆ ನೋಟದ ಬಿಸುಪನ್ನು..!
ಹೆದರಬೇಡ ಮಿತ್ರ
ಏನೇ ಆದರೂ
ನೀನವಳಿಗೆ ನಿಲುಕದ ನಕ್ಷತ್ರ!
ಎಷ್ಟೇ ತೀಕ್ಷ್ಣವಾಗಿದ್ದರೂ
ಅವಳ ಆ ನೋಟ
ತಲುಪಲಾರದದು
ಈ ತಾರೆಗಳ ತೋಟ
ಹೇಳಿತಿನ್ನೊಂದು ತಾರೆ
ತನ್ನ ಗೆಳೆಯನ ಸಂತೈಸುತ್ತ...
ಮಿರ-ಮಿರನೆ ಮಿಂಚುತ್ತ
ಮಿಂಚಿ ಹಿಂಜರಿಯುತ್ತ
ನೆಟ್ಟಿತಾ ನಕ್ಷತ್ರ
ತನ್ನ ನೋಟವ, ಆ ಚೆಲುವ ಕಂಗಳತ್ತ
ಕ್ಷಣಗಳುದುರಿದಂತೆ
ಗಾಢವಾಯಿತು ಆಕರ್ಷಣೆ
ಅವಳ ಸೆಳೆತಕೆ ಆಯ ತಪ್ಪಿ
ಜಾರಿಯೇ ಬಿಟ್ಟಿತದು ಭುವಿಗೆ ಮೆಲ್ಲನೆ!
ಜಾರಿದ ನಕ್ಷತ್ರವ
ತನ್ನ ಕಣ್ಮಿಂಚಲಿ ಸೆರೆ ಹಿಡಿದು
ಆ ಬೆಳದಿಂಗಳ ಬಾಲೆ ನಗುತಿರಲು
ಆ ತಾರಾ ಮಿತ್ರನಿಗೆ ಇನ್ನಿಲ್ಲದ ದಿಗಿಲು!
ಕರಗುವ ಮುನ್ನ ತಾನಿನ್ನು
ಆ ಮಾಯಾಂಗನೆಯ ನೋಟಕೆ
ಸರಿಯಿತದು ಬೆಳಕ ಪರದೆಯ ಹಿಂದೆ
ತನ್ನ ವಿಶ್ರಾಂತಿಯ ತಾಣಕೆ
ಹೋಗುವ ಮುನ್ನ
ಸೂರ್ಯನಿಗೂ ಎಚ್ಚರಿಸಿತದು
ನೂರು ನಕ್ಷತ್ರಗಳ ಸೆಳೆದಾಗಿದೆ ಆ ಕಂಗಳು
ನೋಟ ಬೆರೆಸೀಯ ಅವಳೊಂದಿಗೆ ಜೋಕೆ!
Comments