ಹತ್ತ್, ಇಪ್ಪತ್ತ್, ಮೂವತ್ತ್, ನಲ್ವತ್ತ್...
"ಹತ್ತ್, ಇಪ್ಪತ್ತ್,
ಮೂವತ್ತ್, ನಲ್ವತ್ತ್,
ಐವತ್ತ್, ಅರವತ್ತ್,
ಎಪ್ಪತ್ತ್, ಎಂಬತ್ತ್,
ತೊಂಬತ್ತ್, ನೂರು"
ಆಟ ಅಂದುಕೊಂಡೇ
ಕಣ್ಮುಚ್ಚಿಕೊಂಡದ್ದು
ಕಣ್ತೆರೆದಾಗ ಯಾರಿಲ್ಲ!
ಹುಡುಕಿದಷ್ಟೂ ಮರೆಯಾಗುವ ಚಾಳಿ
ಇಂದು ನೆನ್ನೆಯದಲ್ಲ
ಎಂದು ನನಗೆ ತಿಳಿದಿರಲಿಲ್ಲ
"ಹತ್ತ್, ಇಪ್ಪತ್ತ್,
ಮೂವತ್ತ್, ನಲ್ವತ್ತ್,
ಐವತ್ತ್, ಅರವತ್ತ್,
ಎಪ್ಪತ್ತ್, ಎಂಬತ್ತ್,
ತೊಂಬತ್ತ್, ನೂರು"
ಆಟ ಅಂದುಕೊಂಡೇ
ಕಣ್ಮುಚ್ಚಿಕೊಂಡದ್ದು
ಹತ್ತರಿಂದ ನೂರುಎಣಿಸಿದ್ದು
ನಂಬಿಕೆಯಿಂದಲೇ
ಕಣ್ಣಾಮುಚ್ಚಾಲೆಯಾಟ ಶುರುವಾಗೋದು!
ಕಣ್ಣಾಮುಚ್ಚಾಲೆಯ ಹಿಂದೆಯೂ ಕಣ್ಣಾಮುಚ್ಚಾಲೆಗಳಾಟಗಳಿದ್ದಿರಬಹುದು
ಎಂದು ನನಗೆ ಅನಿಸಿರಲೇ ಇಲ್ಲ
ಶತದಡ್ಡಿ ನಾನು
ಎಂದೇನೂ ನನಗೆ ಅನಿಸುವುದಿಲ್ಲ
ಆದರೂ ಯಾಕೋ
ನಗು ನಗುತ್ತದೆ!
ನಮ್ಮ ನೋಡಿ ನಾವೇ ನಗುವುದು
ಕನ್ನಡಿಗಾದರೂ ಅರ್ಥವಾಗುವುದಾ?
ಗೊತ್ತಿಲ್ಲ!
"ಹತ್ತ್, ಇಪ್ಪತ್ತ್,
ಮೂವತ್ತ್, ನಲ್ವತ್ತ್,
ಐವತ್ತ್, ಅರವತ್ತ್,
ಎಪ್ಪತ್ತ್, ಎಂಬತ್ತ್,
ತೊಂಬತ್ತ್, ನೂರು"
ಆಟ ಅಂದುಕೊಂಡೇ
ಕಣ್ಮುಚ್ಚಿಕೊಂಡದ್ದು
ಕಣ್ತೆರೆದಾಗ ಯಾರಿಲ್ಲ!
ಕಣ್ತೆರೆದಾಗ ಯಾರಿಲ್ಲ!
ಕೆಲವೊಮ್ಮೆ ಕಣ್ಣಾಮುಚ್ಚಾಲೆಯಾಟ
ನಿಜವಾಗಿಯೂ ಕಣ್ತೆರೆಸುವಾಟ
ಶತದಡ್ಡಿ ನಾನು
ಅಂತ ಯಾಕೋ
ನನಗೆ ಇನ್ನೂ ಅನಿಸುವುದೇ ಇಲ್ಲ...
"ಹತ್ತ್, ಇಪ್ಪತ್ತ್,
ಮೂವತ್ತ್, ನಲ್ವತ್ತ್,...
ಯಾರಲ್ಲಿ?! ನಾನಿಲ್ಲಿ
Comments