ಕಲ್ಪನೆ ನನ್ನ ತವರು...

ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ನಾ ಹುಟ್ಟಿ ಬೆಳೆದದ್ದು
ಮತ್ತೆ ಬೆರಗಾಗಿದ್ದು
ಕನಸುಗಳ ಹೆಣೆದದ್ದು
ಅಲ್ಲೇ ಎಲ್ಲ
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ಉಸಿರುಗಟ್ಟಿಸುತದೆ ವಾಸ್ತವ
ಅದ ಪಲ್ಲವಿಸುವ ಗಾಳಿಯಿಲ್ಲ
ಮತ್ತೆ ತವರಿಗೆ ತೆರಳಿ
ಹೊಸ ಜೀವದೊರವ ಪಡೆದು
ನಸು-ನಗುತ ಮರಳಿದರೆ
ಇಲ್ಲಿ ಏನಿಲ್ಲ
ಅಲ್ಲಿ ಏನೇನಿಲ್ಲ!
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ಚಂದ್ರ ತಾರೆಗಳವರು
ಸೂರ್ಯ, ಬಾಂದಳದೂರು
ಇವರೆಲ್ಲರೂ ನನ್ನ ಬಂಧು-ಬಳಗ
ದೂರದಲ್ಲಿದ್ದರೂ
ಹತ್ತಿರವ ಮುಟ್ಟುವರು
ಮತ್ತೆ ಪಿಸುಗುಟ್ಟುವರು
ಮರಳಿ ಬಾ ಮಗಳೇ!
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ತವರ ತೇರನು ಎಳೆದು
ಇಲ್ಲಿ ತರಲಾಗದು
ಆ ಲೋಕವೇ ಬೇರೆ ಇಲ್ಲಿನಂತಲ್ಲ
ನಕ್ಕರೂ, ಅತ್ತರೂ,
ಮನದಣಿಯೆ ಕುಣಿದರೂ
ನನ್ನ ತವರಿನಲಿ ಯಾವ ಸುಂಕವಿಲ್ಲ
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ
ಈ ಪಯಣದಲೇ ಜೀವನ
ತೆವಳಿ ಸಾಗುತಲಿದೆ
ತವರಲ್ಲೇ ಉಳಿಯಲು
ನನಗೆ ಅನುಮತಿಯಿಲ್ಲ!
ವಾಸ್ತವಕೆ ಮರಳಿದರೂ
ತವರಿನಲ್ಲಿಯೇ ಮನಸು
ಕನಸ ತೊರೆದು ಬದುಕಿ
ನನಗೆ ಅಭ್ಯಾಸವಿಲ್ಲ
ಕಡ ತಂದ ಬದುಕಿಗೆ
ಬದುಕ ತುಂಬಲು ಹಂಬಲಿಸುತೇನೆ
ನನ್ನುಸಿರ ಏರಿಳಿತ
ಇಲ್ಲ್ಯಾರಿಗೂ ತಿಳಿಯುವುದೇ ಇಲ್ಲ...
ಕಲ್ಪನೆ ನನ್ನ ತವರು
ವಾಸ್ತವದಲೇನಿಲ್ಲ...

Comments

sunaath said…
ಮಂಜುಳಾ,
ನಿಮ್ಮ ಕವನ ಮನಸ್ಸನ್ನು ತಾಕುತ್ತದೆ. ಹಗಲು, ರಾತ್ರಿಗಳಂತೆ, ವಾಸ್ತವ ಹಾಗು ಕನಸು ಇವು ಬದುಕಿನ ಎರಡು ಮುಖಗಳಲ್ಲವೆ?

ನೀವು ಒಂದು ವರ್ಷದ ನಂತರ ಬ್ಲಾ^ಗ್ ಬರಹಕ್ಕೆ ಮರಳಿದ್ದೀರಿ. ಬರುತ್ತಲೇ ಇರಿ.
shared at:
https://www.facebook.com/groups/191375717613653?view=permalink&id=435285689889320

"ಕನಸ ತೊರೆದು ಬದುಕಿ
ನನಗೆ ಅಭ್ಯಾಸವಿಲ್ಲ"
ನಮಗೂ ಸಹ ಕವಿಯತ್ರೀ...
ಉತ್ತಮ ಶೀರ್ಷಿಕೆ...
Swarna said…
ತವರಿಂದ ಮರಳಿದ ಕವಯಿತ್ರಿಗೆ ಸ್ವಾಗತ
ಆಗಾಗ ತವರಿಗೆ ಹೋಗಿ ಇಂತಹ ಕವಿತೆಗಳೊಂದಿಗೆ ಬನ್ನಿ

Popular Posts