ಗುರುತ್ವಾಕರ್ಷಣೆ!
ಕಾಲಾತೀತವಾಗಿ
ನಿನ್ನೆ, ಇಂದು, ನಾಳೆಗಳ
ಹಂಗಿಲ್ಲದೇ...
ಹಂಗಿನರಮನೆಯಲ್ಲಿ ಬಂಧಿಯಾಗಿರುವುದಕಿಂತ
ಬೀದಿ ಅಲೆಯಬೇಕೆನಿಸುತ್ತದೆ
ಯಾವ ಎಗ್ಗಿಲ್ಲದೇ!
ಎಲ್ಲಿದೆ ಹಂಗು?
ಕಣ್ಣಿಗೆ ಕಾಣದು ಎಂದೆಯಾ?
ಕಾಲವಾದರೂ ಕಂಡಿದ್ದರೆ
ಹಿಡಿದು ತಾ ನನ್ನೆದುರು
ಗಡಿಯಾರದ ತಿರುಗೋ ಮುಳ್ಳುಗಳ
ಸಮಯವೆಂದು ತಿಳಿದೆಯಾ ಮಳ್ಳ?
ನಮ್ಮನೆಯ ಗಡಿಯಾರದ ಮುಳ್ಳುಗಳು ಚಲಿಸದೇ
ಗಂಟೆಗಳಲ್ಲ,
ಆಗಲೇ ಹದಿ’ಮೂರು’ ’ದಿನ’ಗಳಾಯ್ತು!
ಕಣ್ಣಿಗೆ ಕಾಣದ್ದೆಲ್ಲ
ತೋರಿಸುವ ಚಪಲ
ನಮಗೆಲ್ಲರಿಗೂ
ಆ ಕವಿ, ಈ ಚಿತ್ರಕಾರ
ಮತ್ತೆ ಕಲ್ಪನೆಗಳ
ಕೊರಳ ಹಾರ!
ಅಲ್ಪರು ನಾವೆಲ್ಲ
ಭೂಮಿ ತಾಯಿಯ ಮುಂದೆ
ಅವಳಿಗೂ ಇದೇ ಚಪಲ
ಅರಿವಾಗಿರಲಿಲ್ಲ ನನಗೆ!
ಆಕರ್ಷಣೆ, ಅಲ್ಲಲ್ಲ
’ಗುರುತರ’ ಆಕರ್ಷಣೆ,
ಅಲ್ಲಲ್ಲ, ಗುರುತ್ವಾಕರ್ಷಣೆಯ
ಹೇಗೆ ತೋರುವಳಮ್ಮ?
ನ್ಯೂಟನ್ನನ ಸೇಬು
ಕೆಳಗುರುಳಿದಂತೆ
ಜೀವವೂ ಉರುಳಬಲ್ಲದಂತೆ
ಗುರುತ್ವಾಕರ್ಷಣೆಯಿಂದ!
ನ್ಯೂಟನ್ಗೂ ನನಗೂ
ಎತ್ತಿಂದೆತ್ತಣ ಸಂಬಂಧ?
ಯಾವ ಜನ್ಮದ, ಋಣಾನುಬಂಧ?! :-)
ಬಂಧಗಳಿರದ ಬದುಕು
ಸಾಧ್ಯವಿಲ್ಲವೆನಿಸಿದಾಗಲೆಲ್ಲ
ನಿಡುಸುಯ್ಯಬೇಕೆನಿಸುವುದು ಮತ್ತೆ-ಮತ್ತೆ!
ಮುಕ್ತಿ ಎಂಬುದು ಕೇವಲ
ಕಲ್ಪನೆಯ ಕೂಸೆನಿಸಿದಾಗ
ಮರಳುತ್ತೇನೆ ನಾನು
ವಾಸ್ತವತಾವಾದಿಯಂತೆ!
Comments
ಸುಂದರ ಸಾಲುಗಳು
ಬದುಕು ಜಟಿಲ. ಪ್ರೀತಿಯೆನ್ನುವ ಗುರುತ್ವಾಕರ್ಷಣೆಯೇ ಬದುಕನ್ನು ಸರಳ ಮಾಡಬಲ್ಲದು.
ಇಷ್ಟವಾಯ್ತು