ಹಳತೆಲ್ಲ ಹೊಸತು...!
ಈ ತಿಂಗಳು ನನ್ನ ಕೆಲವು ಹಳೆಯ ಕವನಗಳನ್ನು ಇಲ್ಲಿ ಪೋಸ್ಟಿಸುವ ಸಮಯ. ಅಲ್ಲಿ-ಇಲ್ಲಿ ಹರಡಿಕೊಂಡಿರುವ ಕವನಗಳನ್ನ ಒಂದೆಡೆ ಸಂಗ್ರಹಿಸಿ ಮುಂದುವರೆಯುವ ಆಲೋಚನೆ. ಈ ನಿಟ್ಟಿನಲ್ಲಿ ಮೊದಲನೆಯದು ಇದು...
’ಕಾಲ’ ಕೂಡಿ ಬಂದಾಗ!
ಮನಸಿನ, ಕನಸಿನ ಹಸಿ-ಬಿಸಿ
ಮಣ್ಣು
ಆಳದಿ ಹುದುಗಿದ
ಭಾವ ಬೀಜಗಳು
ಕೊಡುವವರ್ಯಾರೋ ಬೆಳಕು, ನೀರು
ಉಸಿರಾಗುವ ತವಕ,
ಹಸಿರಾಗುವ ತನಕ,
ಬಸಿರಿನ ಪುಳಕವ ಹೊತ್ತು ಕಾಯುವರ್ಯಾರು?!
ಕತ್ತಲ ಮಡುವಲೇ ಮನೆಯನು ಮಾಡಿ
ಗಾಳಿಗೆ, ಬೆಳಕಿಗೆ ತಡ-ತಡಕಾಡಿ
ಆಂತರ್ಯದ ತುಮುಲದ
ಅರ್ಥ ಜಾಲಾಡಿ
ಕುಡಿಯೊಡೆಯಲು ಮತ್ತೆ-ಮತ್ತೆ
ಹೆಣಗಾಡಿ...
ಇವುಗಳ ಇಲ್ಲಿಗೆ ತಂದವರ್ಯಾರು..?!
ಸೋತವರ್ಯಾರು? ಗೆದ್ದವರ್ಯಾರು?!
ದಿನಗಳೆದಂತೆ ಮಾಗುವ ಮನಸು
ಕತ್ತಲ ಮುಸುಕನು ಭೇದಿಸಿ ಬೆಳೆಯುವ
ಕನಸು
ಮೆಲ್ಲನೆ ನುಸುಳಿದೆ ಅರ್ಥದ
ಬೆಳಕು
ಜೊತೆಯಲೆ ನಗುತಿದೆ ಅನು’ಭಾವ’ದ
ಚಿಮುಕು
’ಇಂದು’
ಭಾವ ಬೀಜಗಳು
ಹಸಿರಾಗುವ ಸಮಯ
’ಕಾಲ’ ಕೂಡಿ ಬಂದಾಗಲೇ
ಹೊಸ - ಬದುಕಿನ ಉದಯ!
ಚಿತ್ರ ಕೃಪೆ : ಅಂತರ್ಜಾಲ
Comments
ಕವನ ಸ್ಫೂರ್ತಿಯುತವಾಗಿದೆ!
ಒಳ್ಳೆಯ ಕವನ ಆಯ್ದುಕೊಟ್ಟಿದ್ಟೀರಿ.