ಗಾಲಿಗಳುರುಳುವವು



ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ಈ ಊರ ದಾರಿಗಳವು
ಲಕ್ಷ ಜನರ ಅಲಕ್ಷ್ಯದ ನಡುವೆಯೂ
ನಿನ್ನ ನೆನಪ ಮೆತ್ತಿಕೊಂಡಿಹವು
ಗಾಲಿಗಳುರುಳುವಾಗ ಮುಂದೆ-ಮುಂದೆ
ಹಿಂದೆ ನೆನಪುಗಳರಳುವವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ನಾ-ನೀ ಭೇಟಿಯಾಗುತಿದ್ದ ಜಾಗಗಳು,
ಕೈ-ಕೈ ಜೋಡಿಸಿ ನಡೆದ ದಾರಿಗಳು,
ಹೆಜ್ಜೆ ಗುರುತುಗಳ,
ಗೆಜ್ಜೆ ಸದ್ದುಗಳ
ಜೋಪಾನವಾಗಿರಿಸಿಹವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ದಾರಿಗಳ ಸರದಾರ ನೀ,
ಅದೆಲ್ಲೋ ಹೋಗಿ, ಇನ್ನೆಲ್ಲೋ ತಿರುಗಿ,
ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ
ಹೊಸ ದಾರಿ ತೋರಿಸುತಿದ್ದೆ.
ನೀ ತೋರಿದ ದಾರಿಗಳೇ
ದಾರಿದೀಪ ನನಗೀಗ!

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ರಾತ್ರಿಯೂಟಗಳಿಗಾಗಿ,
ಬೆಳಗಿನುಣುಸುಗಳಿಗಾಗಿ,
ತರಕಾರಿ-ದಿನಿಸುಗಳಿಗಾಗಿ,
ಕೆಲಸ ಸಲುವಾಗಿ,
ಪಯಣದ ಸುಖಕಾಗಿ
ಹೋಗದ ದಾರಿಗಳಿಲ್ಲ
ತಿರುಗದ ತಿರುವುಗಳಿಲ್ಲ

ಊರಿನ ಮೂಲೆ-ಮೂಲೆಗಳಲೂ
ನೀ ನೆನಪಿನ ಗಂಟು ಕಟ್ಟಿಟ್ಟದ್ದು
ನನಗೆಂದೂ ತಿಳಿಯಲೇ ಇಲ್ಲ!
ಇಂದೂ ಅಷ್ಟೇ
ಇವೆಲ್ಲ ನನ್ನ ನೆನಪುಗಳಲ್ಲ...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

ರಸ್ತೆಗಳಗುಂಟ
ಮನಸ ಬೆಚ್ಚಗಾಗಿಸುವ
ಥರ-ಥರದ ನೆನಪುಗಳು,
ಅದರ ಮಗ್ಗುಲಲೇ
ಜೊತೆ-ಜೊತೆಯಾಗಿ ಓಡುವ
ನೋವಿನ ಗೆರೆಗಳು

ತುಟಿಯಂಚಿನಲ್ಲಿ ಮುಗುಳುನಗೆ,
ಕಣ್ಣಂಚಲ್ಲಿ ನೀರ ಹನಿ
ಪದೇ-ಪದೇ ಈ ರಸ್ತೆಗಳಿಗೆ
ಸಲಾಮು ಹಾಕುವವು...

ನನಗೆ ವಿಪರೀತ ಮರೆವು
ಆದರೂ ಗಾಲಿಗಳುರುಳುವವು!

Comments

ಮನದ ನೋವಿನ ಗೆರೆಗಳಗುಂಟ ಬರೆದ ಪದಗಳ ಸಾಲು.

ಭಾವ ತೀವ್ರ ಗಾಲಿಗಳ ಹಾದಿ.
Hejje hejjeyallu nenapu
munde saagali baduku
Nandanavaagirali baalu
.....

ಮನಸು said…
endinante chendada kavana
ಮಧುರ ನೆನಪುಗಳು....
savi nenapugala nelahaasinalli galigalu urulali , kattitta kansina buttigalanella unisutta .tumba channagide manjula nimma kavana
Gopal Wajapeyi said…
ಓದುತ್ತ ಓದುತ್ತ ಕಣ್ಣು ಮಂಜಾದವು ಮಂಜಕ್ಕ...
Ahalya said…
ದಾರಿಗುಂಟ ನೀವು ಬೆಳೆಸುವ ಇಂತಹ ಹೂಗಳು ನಿಮ್ಮನ್ನು ಪೊರೆಯಲಿ.ಅವುಗಳ ಘಮಕೆ ತಲೆದೂಗುವ ನಮಗೆ ಕ್ಷಮೆ ಇರಲಿ....ಅಹಲ್ಯಾ
ತೀವ್ರವಾಗಿ ಕಾಡುವ ಕವನ.... ಹಾಳಾದ ಮರೆವು ಒಂದು ಇಲ್ಲದಿದಿದ್ದರೆ.... ಗಾಲಿಗಳುರುಳುತ್ತಿದ್ದವೋ ಇಲ್ಲವೋ!!! :)
sunaath said…
ಮಂಜುಳಾ,
ನೆನಪೇ ದಾರಿದೀಪವಾಗಲಿ.
Sree said…
Ahalya +1!
Jayalaxmi said…
ಮರೆವು ವರವಾಗಲಿ, ನೆನಪು ದಾರಿದೀಪವಾಗಲಿ ಮಂಜು.

Popular Posts