ಕ್ಷಮಿಸಿ. ಬಾಡಿಗೆಗೆ/ಭೋಗ್ಯಕ್ಕೆ ಅಲ್ಲವೇ ಅಲ್ಲ!
ನೀನಿನ್ನು ಮರಳೋದಿಲ್ಲ ಅಂತ ತಿಳಿದ ಕೂಡಲೇ, ಹಿಂದೆ-ಮುಂದೆ ಯೋಚಿಸದೇ ನನ್ನ ಮನಸಿಗೊಂದು ದೊಡ್ಡ ಬೀಗ ಜಡಿದುಬಿಟ್ಟೆ. ಅದರ ಕೀಲಿ ಕೈ ನಿನಗೇ ಒಪ್ಪಿಸಿಬಿಡಬೇಕು ಅನ್ನೋ ಭಾವ ಬಹಳ ಕಾಡಿಬಿಟ್ಟಿತು ಆ ಕ್ಷಣದಲ್ಲಿ! ಬಡ್ಡೀ ಮಗಂದು ಕಣ್ಣೀರು ಬೀಗ ಜಡಿದ ಮನಸನ್ನೂ ಬಿಡಲ್ಲ... ತಿರುಗಿ ನೋಡಿದೆ, ನೀನಿರಲಿಲ್ಲ, ಬೀಗ ಬಧ್ರವಾಗಿತ್ತು,ಕಣ್ಣೀರೊರೆಸಿಕೊಂಡೆ!
ಬೇರೆ ಅವರಿಗೆ ಪ್ರೌಢ ಸಲಹೆಗಳನ್ನು ನೀಡುತ್ತಾ ತಿರುಗೋ ನನಗೆ
ನಿನ್ನ ವಿಚಾರದಲ್ಲಿ ಅದೇನು ಬಾಲಿಶತನವೋ ಕೊನೆವರೆಗೂ
ಅರ್ಥ ಆಗಲೇ ಇಲ್ಲ! ’ನಾನು ಮಾರು ಹೋಗಿದ್ದು ನಿನ್ನ ಬಾಹ್ಯ ಸೌಂದರ್ಯಕ್ಕೆ ಅಲ್ಲವೇ ಅಲ್ಲ ಕಣೆ!’
ಅಂತ ನಾನಂದಾಗ, ನನಗೆ ಮುಂದೆ ಮಾತಾಡೋಕೆ ಅವಕಾಶವೇ ಕೊಡದಂತೆ ನೀನು ಕಿಲ-ಕಿಲನೆ ನಕ್ಕಿದ್ದೆ... ಆ ನಗುವಿನಲ್ಲಿದ್ದದ್ದು
ನಿಷ್ಕಲ್ಮಶತೆ ಅಂತ ಈಗಲೂ ಮನಸು ನಂಬಿಕೊಂಡಿದೆ! ನಿನ್ನ ನಗೆ ನಿಂತಾಗ, ನನ್ನ ಪ್ರಶ್ನಾರ್ಥಕ ಮುಖ ನೋಡಿ,
ನನ್ನನ್ನು ನೀ ಮೃದುವಾಗಿ ತಬ್ಬಿಕೊಂಡಾಗ, ಅಲ್ಲಿ ನುಸುಳಿದ್ದೂ ಇದೇ.. ಇದೇ ಬಡ್ಡೀ ಮಗ ಕಣ್ಣೀರು...!
ಆ ಪುಟ್ಟ ಹನಿ
ನೋಡಿ, ನೀ ಮತ್ತೆ ನಗುವಾಗಿದ್ದೆ.. ನನ್ನ ಪೌರುಷತ್ವ ಆಗ ಜಾಗೃತವಾಗಿಬಿಟ್ಟಿತ್ತು ... ಕಣ್ಣೀರು ಆವಿಯಾಗಿಬಿಟ್ಟಿತ್ತು.
ಈಗ..? ಈಗ ಎನೂ ಮೊದಲಿನಂತಿಲ್ಲ..
ನೀನೆಷ್ಟು ನನ್ನ ಲವಲವಿಕೆಯ ಹಿಂದಿನ ಸಾಮರ್ಥ್ಯವಾಗಿದ್ದೆಯೋ ಅಷ್ಟೇ ನನ್ನ ಅತಿ ದೊಡ್ಡ ದೌರ್ಬಲ್ಯವೂ
ಆಗಿದ್ದೆ… ಈ ವಿಚಾರ ಇಬ್ಬರಿಗೂ ತಿಳಿದಿತ್ತು. ನೀನಿರುವಾಗ ಆ ದೌಬರ್ಲ್ಯಕ್ಕೂ ಒಂದು ಮುಗ್ಧತೆಯಿತ್ತು,
ಸೆಳೆತವಿತ್ತು... ಅಂತಹ ದೌರ್ಬಲ್ಯ ಮತ್ತೆ-ಮತ್ತೆ ಬೇಕು ಎಂದೆನಿಸುತ್ತಿತ್ತು. ಆದರೆ ನೀನಿಲ್ಲದಾಗ
ಅದೇ ದೌರ್ಬಲ್ಯ ನನ್ನನ್ನ ನಿರ್ಬಲನನ್ನಾಗಿಸಿದೆ...ಭಾವಗಳಿಗೆ ಜೀವವಿಲ್ಲ.. ನೋವುಗಳಿಗೆ...? ಬೇಡ ಬಿಡು...!
ನೀ ಬಂದಾದ ಮೇಲೆ ಹಲವಾರು ಹುಡುಗಿಯರು
ನನ್ನ ಮನದ ಕದವನ್ನು ತಟ್ಟಿದಾರೆ. ಇಲ್ಲ ಅನ್ನೋದಿಲ್ಲ. ಆದರೆ ಅವರಿಗ್ಯಾರಿಗೂ ಅಲ್ಲಿ ಜಡಿದಿರೋ ಬೀಗ
ಕಂಡಿದ್ದೇ ಇಲ್ಲ! ಸುಂದರ ಕಂಗಳ ಕುರುಡಿಯರು ಅವರು...! ಕಾಲನ ಆಟವೂ ಎಷ್ಟು ವಿಚಿತ್ರ ಅಲ್ವ? ನೀನು ಮೊದಲು
ಸಿಕ್ಕೆ ಅನ್ನೋ ಒಂದೇ ಒಂದು ಕಾರಣಕ್ಕೆ ನಿನಗಿಂತ ಒಳ್ಳೆಯ (?) ಹುಡುಗಿಯರನ್ನೂ ನಾನೀಗ ನಿರ್ಲಕ್ಷಿಸುವಂತೆ
ಆಗಿಬಿಟ್ಟಿದೆ. ಆದರೇನಂತೆ? ನಾನೊಬ್ಬ ಹಠವಾದಿ-ಆಶಾವಾದಿ…! ಬೀಗ ಜಡಿದ ಮನಸನ್ನು ಕಂಡೂ, ಅದು ಬಾಡಿಗೆಗೋ-ಭೋಗ್ಯಕ್ಕೋ
ಅಷ್ಟೇ ಇರುವ ಸೊತ್ತಲ್ಲ ಅಂತ ತಿಳಿದೂ, ಯಾರಾದ್ರೂ ಚೆಲುವೆ(?) ನನ್ನ ಹಟಮಾರಿ ಮನಸಿನ ಬಾಗಿಲಿಗೆ ಎಡೆ
ಬಿಡದೇ ಗುದ್ದಿದಳೋ… ಕೀಲಿ ಕೈ ಅವಳಿಗೆ ಒಪ್ಪಿಸಿ, ನಿರಮ್ಮಳವಾಗಿಬಿಡ್ತೀನಿ.. ಆದರೆ ಈ ಸಲ ಷರತ್ತುಗಳು
ಅನ್ವಯ..! (ಮರೆಯಲಾರದ ಪಾಠಗಳನ್ನು ಕಲಿಸಿದ ಚೆಲುವೆಯೇ ನಿನಗೊಂದು ನಮಸ್ಕಾರ! ಈ ಷರತ್ತುಗಳು ಕೆಲಸಕ್ಕೆ
ಬರಲ್ಲ ಅಂತ ಗೊತ್ತಮ್ಮ ತಾಯಿ.. ಆದರೆ ಈಗ ಮನಸು ರಕ್ಷಣಾತ್ಮಕವಾಗಿಬಿಟ್ಟಿದೆ.. ಅದು ಹೀಗಂತ ಕೂಗಿಸ್ತಿದೆ,
ಅಷ್ಟೇ…) ಅಂದ ಹಾಗೆ ಆ ಮೊಂಡು ಚೆಲುವೆ ನೀನೂ ಆಗಿರಬಹುದು..! ಯಾಕಾಗಬಾರದು..??
ಚಿತ್ರ ಕೃಪೆ: ಅಂತರ್ಜಾಲ
Comments
ಕಾಕಾ, ದುರ್ಬಲತೆ ಚಂದ ಕೆಲವು ಸಮಯದಲ್ಲಿ :-)
ಪ್ರಭಾಮಣಿ ಸದ್ಯದಲ್ಲ ನಿಮ್ಮ ಬ್ಲಾಗ್ ಗೆ ಭೇಟಿ ಕೊಡುವೆ. ನಿಮ್ಮ ಮೆಚ್ಚುಗೆಗೆ ಧನ್ಯವಾದ :-)