ನಾನಲ್ಲದ ನಾನು... ಏನಾದರೇನು...?!

ನಾನಿರದ ನನಗಾಗಿ

ನನ್ನಿಂದ ದೂರಾಗಿ

ಅಲೆದಾಡಿ ಸಾಕಾಗಿ

ಮತ್ತೆ ಮನದ ಮನೆಯ

ಸೂಜಿಗಲ್ಲಿನ ಸೆಳೆತ...


ನನ್ನೊಡನೆ ನಾನಿರಲು ಬೇಸರವೋ?

ನಾನಲ್ಲದ ನನ್ನನು ಹುಡುಕುವ ಕಾತರವೋ?

ನನ್ನತನವನು ಪರೀಕ್ಷಿಸುವ ಕುತೂಹಲವೋ?

ಅಥವಾ ಇವೆಲ್ಲವುಗಳ ಕಲಸು ಮೇಲೋಗರವೋ?

ಒಟ್ಟಿನಲಿ, ನನ್ನಲಿ ನಾನಿಲ್ಲ

ಆಗಸದ ಏಕಾಂತ

ಮನದ ಮೂಲೆಗಳಲೆಲ್ಲ...!


ನನ್ನೊಡನೆ ನನ್ನ ಆಪ್ತ ಅಪ್ಪುಗೆಯಲ್ಲೂ

ದೂರದಲಿ ಹೊಳೆವ ಮಿಂಚು ಹುಳುವಿನ

ಆಕರ್ಷ...

ಕನಸಿನ ಮಾರು-ವೇಷದಲಿ ಕರೆಯುತಿವೆ

ಸಾಧನೆ, ಸಂತೃಪ್ತಿಗಳೆಂಬ ಮರೀಚಿಕೆಗಳು...

ಎಂದು ನನ್ನೊಡನೆ ನನ್ನ ಪರಾಗಸ್ಪರ್ಶ...?!


ದಿನದ ಜಾತ್ರೆಗಳಲಿ

ಕಳೆದು ಹೋಗುತಿರುವೆ ನಾನು

ಎಲ್ಲೊ ದೂರದಲೆಲ್ಲೋ ಕೇಳುತಿದೆ

ನನಗಾಗಿ ಕಾದಿರುವ ನನ್ನಯ ಇನಿದನಿ

ಹಿಂದಿರುಗಿ ಹೋಗುವ

ಹಾದಿಯನೂ ನಾ ಮರೆತಂತಿದೆ

ಕಣ್ಣಂಚಲಿ ಕುಡಿಯೊಡೆದಿದೆ

ಮತ್ತೊಂದು ಕಂಬನಿ ಹನಿ...


ನನ್ನೊಡನೆ ನಾನಾಗಿ

ಬದುಕಿಗೂ ಬೇಕಾಗಿ

ಮತ್ತೆ ನೆಮ್ಮದಿಯಾಗಿ

ಬಾಳಬೇಕಿದೆ ನಾನು...

ಇದಕೆ ಹೊರತಾದರೆ...

ನಾನಲ್ಲದ ನಾನು... ಏನಾದರೇನು...?!


Comments

super said…
ಅಕ್ಷರ ಜೋಡಣೆ ಮಾತ್ರ ಕವಿತೆಯಾಗುವುದಿಲ್ಲ.
ಬದಲಿಗೆ ಭಾವ ಜೋಡಣೆಯು
ಕವಿತೆಯಾಗುತ್ತದೆ ಎಂಬುದನ್ನು ನೀವು ಕವಿತೆಯಲ್ಲಿ ತೋರಿಸಿದ್ದೀರಿ
ಧನ್ಯವಾದಗಳು.


ಹೆಗ್ಗೆರೆ ರೇಣುಕಾರಾಧ್ಯ
ಮೈಸೂರು
sunaath said…
ನನ್ನತನದ ಹುಡುಕಾಟದ ಈ ಕವನ ಸುಂದರವಾಗಿದೆ.
Manjula said…
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು ರೇಣುಕಾರಾಧ್ಯರವರೆ. ನಿಮ್ಮ ಪ್ರತಿ ಸಲದ ಮೆಚ್ಚುಗೆ ನನ್ನನ್ನು ಕೃತಾರ್ಥಳನ್ನಾಗಿ ಮಾಡುತ್ತದೆ ಸುನಾಥ್ ಅವರೆ. ಧನ್ಯವಾದ :-)
ನಾನಲ್ಲದ ನಾನು... ಏನಾದರೇನು...?!
ಚಂದದ ಭಾವ ಲಹರಿ...
ಸ್ವ ಅನ್ವೇಷಕ ಕವನಗಳ ಸಾಲಿಗೆ ಸೇರುವ ಅಪರೂಪದ ಕವನ.

ಭಾವ ತೀವ್ರತೆಯು ತಟ್ಟುತ್ತದೆ.

Popular Posts