ಕಥೆ ಅಲ್ಲ ಜೀವನ!
![](https://blogger.googleusercontent.com/img/b/R29vZ2xl/AVvXsEhkPa-8QvdRNhP8LAbZI1mfRb2cr_h9fW5vZW3NPWQUtOQBv8x1Gyu3I_lFDCK3l3797rwcXP9D9jrRBBci7tgZMldEsl3964D7xG4yClN0qErUIA350yaCXPQ0aVmTvVcZMPOI/s320/IMG_0662.jpg)
ಈಗ ತಾನೆ ನಡೆಯೋಕೆ ಕಲಿತ ಮಗು ಎಷ್ಟು ನಡೆದ್ರೂ ಇನ್ನೂ ನಡೀಬೇಕು ಅನ್ನತ್ತಲ್ಲ, ಹಾಗೇ ಆಗ್ತಿದೆ ನನಗೂ. ಎಷ್ಟು ಕಾರ್ ಓಡಿಸಿದ್ರೂ ಇನ್ನೂ ಓಡಿಸಬೇಕು ಅನ್ನೋ ಹಂಬಲ. ಹೊಸದಾಗಿರೋವಾಗ ಹುಮ್ಮಸ್ಸು ಜಾಸ್ತಿ ಅಂತೆ.. ಹಾಗಾಗಿ ಕಳೆದ ವಾರ, ನಮ್ಮ ಮನೆ ಮಂದಿಗೆಲ್ಲ ನನ್ನ ಜೊತೆ ಲಾಂಗ್ ಡ್ರೈವ್ ಗೆ ಹೋಗೊ ಸೌಭಾ(ದೌರ್ಭಾ)ಗ್ಯ ಬಂದೇ ಬಿಡ್ತು (ಮನೆ ಮಂದಿ ಅಂದ್ರೆ ನಮ್ಮೆಜಮಾನ್ರಷ್ಟೇ, ನನ್ನ ಮಗ ನನ್ನನ್ನು ಇನ್ನೂ ಅಪಾರವಾಗಿ ನಂಬ್ತಾನೆ!). ನಾನಂತೂ ಖುಷಿ-ಖುಷಿಯಾಗೇ ಬೆಳಿಗ್ಗೆ-ಬೆಳಿಗ್ಗೆನೇ ರೆಡಿ ಆಗಿಬಿಟ್ಟೆ. ಹೆಚ್ಚು-ಕಮ್ಮಿ ೬೦-೬೫ KM ನಷ್ಟು ದೂರ ಮೊದಲ ಬಾರಿಗೆ ಡ್ರೈವ್ ಮಾಡೋ ಅವಕಾಶ ಮಾಡಿಕೊಟ್ಟಿದ್ದು ನಮ್ಮೆಜಮಾನ್ರು, ಅವರ ಔದಾರ್ಯವನ್ನು ಗೌರವಿಸೋದು ನನ್ನ ಧರ್ಮ ಅಲ್ವಾ? ;-)
ಒಂದೇ ಒಂದು ಚಕ್ರ (ಸ್ಟೀರಿಂಗ್ ವ್ಹೀಲ್), ಹಾಗೂ ಒಂದೆರಡು ಕ್ಲಚ್-ಗೇರ್ ಗಳಿಂದ ನಾಲ್ಕು ಚಕ್ರಗಳನ್ನು ನಿರ್ವಹಿಸೋ ಕಲೆ ಬಹಳನೇ ಅಡ್ರೆನಾಲಿನ್ ರಷ್ ಕೊಡತ್ತೆ.. ಟ್ರಾಫಿಕ್ ಕಮ್ಮಿ ಇರೋ, ಜಾಸ್ತಿ ಹಸಿರು-ಹಸಿರಾಗಿರೋ ರಸ್ತೆಗಳಲ್ಲಿ ನಮ್ಮ ಪಯಣ ಶುರುವಾಯಿತು. ಜೊತೆಯಲ್ಲಿ ಅರ್ಥವಾಗದಿರೋ ಆದರೆ ಒಳ್ಳೇ ಸಂಗೀತವಿರೋ ತಮಿಳು ’ಬಾಯ್ಸ್’ ಫಿಲ್ಮಿನ ಹಾಡುಗಳು (ಒಂದೂಂದು ಸಲ ಅರ್ಥವಾಗ್ದಿರೋದು ಬಹಳ ಇಷ್ಟ ಆಗತ್ತೆ ಅಲ್ವಾ? ಯಾಕೆ ಹೀಗೆ..?!), ನನ್ನ ಅಡ್ರೆನಾಲಿನ್ ರಷ್ ನ ಇನ್ನೂ ಜಾಸ್ತಿ ಮಾಡಿದವು. ಈ ಲೌಡ್ ಮ್ಯೂಸಿಕ್ ಇಂದ ನನ್ನ ಕಾರ್ ಚಾಲನೆಗೆ (ಹೂಂ, ನನಗೂ ತಕ್ಕ ಮಟ್ಟಿಗೆ ಕನ್ನಡ ಬರತ್ತೆ, ಹಾಗೂ ಅದನ್ನ ನಾನು ಬಳಸ್ತೀನಿ ಕೂಡ!) ಒಂದು ಲಾಭ ಆಯ್ತು, ನಾನು ತಪ್ಪು-ತಪ್ಪಾಗಿ ಗೇರ್ ಬದಲಾಯಿಸಿದಾಗಲೆಲ್ಲ ಗೋಳಾಡುವ ಕಾರ್ ನ ಆರ್ತ ನಾದ ಯಾರಿಗೂ ಕೇಳಿಸಲೇ ಇಲ್ಲ! ಹೀಗಾಗಿ ನಮ್ಮ ಪ್ರಯಾಣ, ತಕ್ಕ ಮಟ್ಟಿಗೆ ಸುಖಕರವಾಗೇ ಇತ್ತು..
ಪಂಚಾಯತ್ ಚುನಾವಣೆಯ ದಿನ ಆವತ್ತು.. ದಾರೀಲಿ ಬಂದ ಹಳ್ಳಿಯ ಜನರೆಲ್ಲ ಅವಾಕ್ಕಾಗಿ ನಮ್ಮ ಕಾರ್ ನ ನೋಡ್ತಿದ್ರು, ಊಂಹು, ನಾನು ಕಾರ್ ನ ಅಷ್ಟು ಚೆನ್ನಾಗಿ ಓಡಿಸ್ತಿದ್ದೆ ಅಂತ ಅಲ್ಲ, ಅಥವಾ ನಾನು ಕಣ್ಣು ಕುಕ್ಕೋ ಥರ ಅಲಂಕಾರ ಮಾಡ್ಕೊಂಡಿದ್ದೆ ಅಂತಾನೂ ಅಲ್ಲ.. ಬಹುಶಃ ಅವರಿಗೆ ನನ್ನ ಕಾರ್ ಓಡಿಸುವ ಶೈಲಿ ದಿಗಿಲು ಹುಟ್ಟಿಸಿತ್ತೋ ಏನೋ, ನಾನಂತೂ ಒಂದೇ ಸಮನೆ ಹಾರ್ನ್ ಮಾಡಿ ನನ್ನ ಕರ್ತವ್ಯ ನಿರ್ವಹಿಸ್ತಾ ಇದ್ದೆ. ಇಷ್ಟಾದರೂ, ಮಂದಹಾಸ ಬೀರುತ್ತಿದ್ದ ನನ್ನ ಪತಿ ರಾಯರ ತಾಳ್ಮೆಯನ್ನು ಮೆಚ್ಚಲೇ ಬೇಕು!
ಹಾಗೂ-ಹೀಗೂ ಕುಂಟುತ್ತ, ತೆವಳುತ್ತ, ಓಡುತ್ತ, ರಭಸವಾಗಿ ಬೀಸಿ ಬರೋ ಗಾಳಿ, ಒಳ್ಳೇ ಸಂಗೀತ, ಅಲ್ಲಿ-ಇಲ್ಲಿ ಅಕಸ್ಮಾತ್ತಾಗಿ ಬರುವ ಹಂಪ್ ಗಳಲ್ಲಿ ಆಗೋ ಕಾರ್ ನ ಕರಡಿ-ಕುಣಿತ ಇವುಗಳನೆಲ್ಲ ಆಸ್ವಾದಿಸುತ್ತ.. ಎಲ್ಲರೂ ಸುರಕ್ಷಿತವಾಗಿ ಗುರಿ ತಲುಪಿದಾಗ ನನ್ನಲ್ಲೊಂದು ಸಂತೃಪ್ತಿಯ ನಗು ಮೂಡಿತ್ತು.. ಅಲ್ಲಿದ್ದ ಹಕ್ಕಿಗಳ ಚಿಲಿ-ಪಿಲಿ ನನಗೇಕೋ ಕರತಾಡನದಂತೆ ಕೇಳಿಸಿತು! :-) ನೀವೇನಂತೀರ?!
Comments
Success often comes to those who dare and drive! ಕಾರು ಓಡಸ್ತಾನೆ ಇರಿ.
I like the way you have narrated your journey..:)
ಮಾಲಾ