ಮತ್ತೆ ಮರಳಿದೆ ಪ್ರೀತಿ..

ನೀ ಮರೆತ ಪ್ರೀತಿಯ ಹಾಡು
ಒಣಗಿದೆಲೆಗಳಾಗಿ ಉದುರಿವೆ ಇಂದು
ಕಾಣುತಿಲ್ಲವಲ್ಲ ಎಲ್ಲೂ
ನಿನ್ನೊಲವ ಹಸಿರಿನ ಬಿಂದು

ಪ್ರೀತಿ ಅರುಹಿದ್ದೆ ನೀನು
ಅಂದು ಕನಸ ಬಿತ್ತಿದ್ದೆ
ಬೆಚ್ಚನೆಯ ಆ ಕನಸಿನ ಕಾವಿಗೆ
ನಾ ಹಸಿರಾಗಿ ಚಿಗುರೊಡೆದಿದ್ದೆ
ಪ್ರೀತಿಯಂತೇ ನಳನಳಿಸಿದ್ದೆ..

ನಗುವ ಕಲಿತಿದ್ದೆ ನಾನು
ಅಂದು ಪ್ರೀತಿ ಹಾಡ ಗುನುಗಿದ್ದೆ
ಜೇನು ಜಿನುಗಿದ್ದೆ ನೀನು
ನನ್ನೇ ಮರೆಸಿದ್ದೆ..

ಖುಷಿಯ ಮಂಪರಲ್ಲೇ
ಪ್ರೀತಿ ಋತುವು ಜಾರಿತ್ತು
ನೋಡು-ನೋಡುತಿದ್ದಂತೆ
ಹಸಿರ ರಂಗು ಮಾಸಿತ್ತು
ನಿನ್ನ ನೆನಪ ಸೂಸಿತ್ತು..

ಅರರೆ! ನಿನ್ನ ನೆನಪಿನ ಘಮ
ಮತ್ತೆ ನಿನ್ನೇ ತಲುಪಿದೆ ಇಂದು
ಮತ್ತೆ ಮರಳಲಿದೆ ನಮ್ಮ
ಪ್ರೀತಿ ಚಿಗುರು ಸಂಭ್ರಮವಿಂದು..

ಕಾಲ-ಕಾಲಕೆ ಮರಳಿ
ಹೊಸ ಜೀವ ನೀ ತುಂಬಿಸುವೆ
ಮತ್ತೊಮ್ಮೆ ಕಣ್ಮರೆಯಾಗಿ
ನನ್ನ ಕಂಗಾಲಾಗಿಸುವೆ..!!

ಈ ನಿನ್ನ ಪ್ರೀತಿಯ ಪರಿಯ
ಅರಿಯಲಾರೆ ನಾ ಗೆಳೆಯ
ಕೊನೆ ತನಕ ಜೊತೆ ಇರು ನೀನು
ಇರಲಾರೆಯಾ ನೀ ಸನಿಹ..?!

(ಈ ವಸಂತ ಋತುವಿನಲ್ಲಿ ಮೂಡಿದ ಸಾಲುಗಳು..)

Comments

ಜಲನಯನ said…
ಮಂಜುಳಾ, ಬಹಳ ಸರಳವಾಗಿ ಮಾರ್ಮಿಕವಾಗಿ ಜೋಡಿಸಿ ಬರೆದಿದ್ದೀರಿ..ಸರಳ ಪದಗಳನ್ನ...ಅದರಲ್ಲೂ ಈ ಸಾಲುಗಳು...

ನಗುವ ಕಲಿತಿದ್ದೆ ನಾನು
ಅಂದು ಪ್ರೀತಿ ಹಾಡ ಗುನುಗಿದ್ದೆ
ಜೇನು ಜಿನುಗಿದ್ದೆ ನೀನು
ನನ್ನೇ ಮರೆಸಿದ್ದೆ..
Manjula said…
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಜಲನಯನ. ಕವಿತೆಗಳೇ ಹಾಗೆ, ತಾವಾಗೆ ಸರಳವಾಗಿ ನಮ್ಮಲ್ಲಿ ಮೂಡಿ ಬಿಡುತ್ತವೆ.. :-)
chendada kavite..sogasada salugalu.

nimma magana photo nodide tumbaa chennaagiddane.
sunaath said…
ಮಂಜುಳಾ,
ಯಾವುದೋ ತಪ್ಪಿನಿಂದಾಗಿ, ನನ್ನ ಪ್ರತಿಕ್ರಿಯೆ ಈ ಮೊದಲೇ ದಾಖಲಾಗದಿರುವದು ಇಂದು ನನ್ನ ಅರಿವಿಗೆ ಬಂದಿತು.
ನಿಮ್ಮ ಕವನದ ಆಶಯ ಮಂಗಳ-ಮಂಜುಳವಾಗಿದೆ.

ಬೆಟಗೇರಿ ಕೃಷ್ಣಶರ್ಮರ ಸಾಲೆರಡು ನೆನಪಿಗೆ ಬಂದವು:
"ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ
ನನ್ನಿ ಹಿಗ್ಗಿನ ಹೊಸ ತೋಟ;
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ,
ಚೆನ್ನೆ ಚೆನ್ನೆನಿತು ಈ ಕೂಟ!"
Manjula said…
ನಿಮ್ಮ ಪ್ರೋತ್ಸಾಹಕ್ಕೆ ಹಾಗೂ ನನ್ನ ಮಗನ ಬಗ್ಗೆ ನಿಮ್ಮ ಮೆಚ್ಚುಗೆಗೆ ಎರಡಕ್ಕೂ ತುಂಬಾ ಧನ್ಯವಾದಗಳು ಮನಮುಕ್ತಾ ಅವರೆ :-) ಮತ್ತೆ ಸಿಗುವ
Manjula said…
ಧನ್ಯವಾದ ಸುನಾಥ್ ಅವರೆ. ನಿಮ್ಮ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನನಗೆ ದಾರಿ ದೀಪ :-) ಬೆಟಗೇರಿ ಕೃಷ್ಣಶರ್ಮ ರ ಆ ಪೂರ್ಣ ರಚನೆ ಸಿಗಬಹುದಾ ನನಗೆ ಓದಲು..!

Popular Posts