ಬಂಗಾರ ಲಹರಿ
ಆವತ್ತು ಮುಂಜಾನೆ ಎಂದಿನಂತೆ ನಾನು ನನ್ನ ಪೇಪರ್ ಪ್ರಪಂಚದಲ್ಲಿ ಮುಳುಗಿದ್ದೆ. ಆ ದಿನ ದಸರೆ ರಜಾ ಬೇರೆ ಹೀಗಾಗಿ ದಿನಪತ್ರಿಕೆಯನ್ನು ಸ್ವಲ್ಪ ಆರಾಮವಾಗಿಯೇ ಓದುತ್ತಾ ಇದ್ದೆ. ಮಧ್ಯದಲ್ಲೇ ನನ್ನಾಕಿ ಮುಂಜಾನೆಯ ಚಹಾನ ನಾನು ಕೇಳೋ ಮೊದ್ಲ ತಂದು ನನ್ನ ಕೈಗಿತ್ತಳು. ಆವತ್ತು ಚಹಾ ದಿನಕ್ಕಿಂತ ಹೆಚ್ಚು ರುಚಿ ಅನಿಸಿತು.
ರಜಾ ಅದೆ ಅದಕ್ಕ ನನ್ನ ಹೆಂಡತಿನೂ ರುಚಿಯಾಗಿ ಚಹಾ ಮಾಡಿದ್ದಾಳೆ, ನನಗೂ ಆಸ್ವಾದಿಸಲು ಸಮಯ ಅದೆ ಅಂತ ಒಂದೆರಡು ನಿಮಿಷ ಸಂತೋಷಪಟ್ಟೆ, ಮತ್ತೆ ಪೇಪರ್ನಲ್ಲಿ ಮುಳುಗಿದೆ. ಅಷ್ಟರಲ್ಲೇ ನನ್ನಾಕಿ ರಾಗವಾಗಿ ರಾಗ ತೆಗೆದಳು... ಅವಳು ಸಂಗೀತ ಕಲಿಯದಿದ್ದರೂ ಕೂಡ ಈ ರಾಗವನ್ನು ಸರಾಗವಾಗಿ, ನಿರರ್ಗಳವಾಗಿ ಶುರು ಮಾಡ್ತಾಳೆ. ರೀ..ಸ್ವಲ್ಪ ಇಲ್ಲಿ ಬರ್ತೀರೇನು..?
ಕೇಳೋದೇನು? ಬರೀ ಪ್ರಶ್ನೆ ಪ್ರಶ್ನೆಯಲ್ಲಷ್ಟ.. ನಾನೊಂದಿಷ್ಟು ಒಟಗುಡುತ್ತ ಅಡುಗೆ ಮನೆಗೆ ನಡೆದೆ. ಓ..! ನನಗೇ ಆಗಲೇ ಜ್ಞಾನೋದಯವಾಯಿತು.. ಆ ರುಚಿಯಾದ ಚಹಾದ.. ಆ ಸರಾಗವಾದ ರಾಗದ ಹಿಂದಿನ ಉದ್ದೇಶ.. ಅವಳು ಯಾಕೆ ನನ್ನ ಕರೆದಿದ್ದು ಅಂತ ನನಗೆ ಗೊತ್ತಾಗಿ ಹೋಗಿತ್ತು.
ನನ್ನ ಶ್ರೀಮತಿ ಅತೀ ಶ್ರದ್ಧೆಯಿಂದ ವಿನಯ ಗಾಂಭೀರ್ಯದಿಂದ ಹೇಳಿದಳು, ರೀ ಈವತ್ತು ದಸರಾ, ಸಾಡೇ ತೀನೀ ಮುಹೂರ್ತ, ಒಂದಿಷ್ಟು ಬಂಗಾರ ತೊಗೊಂಡು ಬರೂಣ್ರೀ.. ಅಂತ.. ಅವಳ ಜೊತೆ ನನ್ನ ಎಲ್ಲ ಕಲೆಗಳೂ/ವಿದ್ಯೆಗಳೂ ಮುಗಿದು ಹೋಗಿಬಿಟ್ಟಿವೆ.. ಅವಳು ಹೇಳಿದ್ದಕ್ಕೆ ಹೂಂ ಅನ್ನದೇ ಬೇರೆ ಏನೂ ನನಗೆ ಈಗ ಬರೋದಿಲ್ಲ.. ಪಾಪ! ಅಕೀ ಹೇಳೂದರಾಗರ ಏನ ತಪ್ಪ ಅದ.. ಬಂಗಾರ ಅಂದ್ರ ಇಡೀ ಪ್ರಪಂಚನೇ ಬಾಯಿ ಬಿಡ್ತದ.. ಅಂಥಾದರಾಗ ಇಕಿ ಅರ ಏನ ಮಾಡತಾಳ.. ಮತ್ತೆ ಮ್ಯಾಲೆ ನಮಗೊಬ್ಬಾಕಿ ಕುಲಪುತ್ರಿ, ಮುದ್ದಿನ ಕೂಸೂ ಅದ.. ನಾ ಏನರ ಕಾಂ- ಕೀಂ ಅಂದರ, ನನ್ನಾಕಿ ಮಾತ್ರ ಪ್ರತೀ ಸಲಾನೂ ತನ್ನ ಬ್ರಹ್ಮಾಸ್ತ್ರವನ್ನ ಯಶಸ್ವಿಯಾಗೀನ ಪ್ರಯೋಗ ಮಾಡ್ತಾಳ. "ಅಲ್ರೀ.. ನಾಳೆ ಮಗಳ ಮದುವೀಗೆ ಏನು ಮಾಡೋರು..." ಬ್ಯಾಡಪ್ಪ ಸುದ್ದಿ ಅಂತ ನಾನ.. ಸುಮ್ಮನಾಗಿಬಿಡ್ತೀನಿ.
ಆದರ ಈ ಬಂಗಾರದ ವಿಚಾರ ಮಾತ್ರ ನನ್ನನ್ನ ಯಾವಾಗಿದ್ರೂ, ಒಂದು ವಿಚಾರ ಲಹರಿ ಒಳಗ ಕರಕೊಂಡು ಹೋಗ್ತದ.. ಅದರ ಬಗ್ಗೆ ಯೋಚಿಸಿದಷ್ಟೂ ಅಷ್ಟೇ ಜಟಿಲವಾಗ್ತದ ಈ ಪ್ರಶ್ನೆ.. ಜನಕ್ಕ ಬಂಗಾರ ಅಂದ್ರ ಯಾಕ ಪ್ರೀತಿ, ಶ್ರದ್ಧೆ, ಭಕ್ತಿ.. ಇತ್ಯಾದಿ..ಇತ್ಯಾದಿ..?
ಈ ಪ್ರಶ್ನೆ ಬಗ್ಗೆ ಯೋಚಿಸಿದಷ್ಟೂ ನಾನು ಇನ್ನೂ ದೀರ್ಘವಾಗಿ ಯೋಚಿಸ್ತೀನಿ. ಒಂದೊಂದು ಸಲ ದಿಕ್ಕೂ ತಪ್ತದ.. ಅಲ್ಲಾ ನೀವ ನೋಡ್ರಿ ನನ್ನ ಹೆಂಡ್ತಿನ ಹಿಡ್ಕೊಂಡು ಎಲ್ಲರೂ.. ಪ್ರತಿಯೊಬ್ಬರೂ ಬಂಗಾರ ಅಂದ್ರ ಬಿದ್ದು ಸಾಯ್ತಾರ.. ಅದಕ್ಕ ಇಡಿ ಜಗತ್ತಿನೊಳಗ ಒಂದು ವಿಶೇಷ ಸ್ಥಾನ-ಮಾನ ಅದ..
ಈಗ ಸಣ್ಣ ಮಕ್ಕಳ್ನ ತೊಗೋರಿ.. ನಾವು ಪ್ರೀತಿಯಿಂದ ನಮ್ಮ ಮಕ್ಕಳ್ನ ಬಂಗಾರ.. ಚಿನ್ನ.. ಚಿನ್ನೂ.. ಚಿನ್ನಾರಿ..ಶೋನಿ.. ಅಂತ ಎಲ್ಲ ಕರೀತೀವಿ.. ಉತ್ತರ ಭಾರತದಾಗ, ತಮ್ಮ ಪ್ರೀತಿಯವರನ್ನ ಸೋನು ಅಂತ ಕರೀತಾರ..ಅಲ್ಲಾ ನಮ್ಮ ಮಕ್ಕಳನ್ನ ನಮ್ಮ ಪ್ರೀತಿಯವರನ್ನ ಬಂಗಾರ ಅಂತ ಯಾಕ ಕರೀತಿವಿ?
ಮತ್ತೆ ಇತಿಹಾಸಕಾರರನ್ನ ತೊಗೋರಿ.. ಇತಿಹಾಸದ ಯಾವುದೇ ಸುಭೀಕ್ಷ ಕಾಲವನ್ನ ಚಿನ್ನದ ಯುಗ ಅಂತ ಕರೀತಾರ. ಮನ್ನೆ ಮನ್ನೆ ಒಬ್ಬ ಪತ್ರಕರ್ತರು ಹೇಳ್ತಾ ಇದ್ದರು.. ಭಾರತವನ್ನ 'ಚಿನ್ನದ ಹಕ್ಕಿ' ಅಂತ ಕರೀತಾರ ಅಂತ..ಅವರ ಮಾತು ಅವರ ಮಾತಿನ ಅರ್ಥ ತಲೆಗೆ ಹೋದರೂ ಬಂಗಾರದ ವಿಚಾರದ ನಶಾ ಹಂಗ.. ಏರಲಿಕ್ಕತ್ತಿತ್ತು..
ಹೋದರ ಹೊಗಲಿ.. ಒಂದು ಛೊಲೊ ಅಣ್ಣಾವ್ರ ಪಿಕ್ಚರ್ ನೋಡೋಣು ಅಂದ್ರೂ.. ಆ ಪಿಕ್ಚರ್ ಗಳ ಹೆಸರೂ 'ಬಂಗಾರದ ಮನುಷ್ಯ', 'ಬಂಗಾರದ ಪಂಜರ'... ಹೋಗ್ಲಿ ನನ್ನ ಪ್ರೀತಿಯ ನಟಿ ಭಾರತೀನೂ, 'ಬಾಳ ಬಂಗಾರ ನೀನು..' ಹಾಡಿಗೆ ತಾನೋ-ತಂದಾನೋ ಅಂತ ಕುಣಿತಾಳ.. ಏನಂತ ಹೇಳ್ಲೀರೀ ನಾ ಇದಕ್ಕ..
ಈ ಬಂಗಾರ ಬರೀ ನಮ್ಮ ಕನ್ನಡಕ್ಕ ಮಾತ್ರ ಸೀಮಿತ ಆಗಿಲ್ಲ.. ಇಡೀ ಪ್ರಪಂಚಕ್ಕ ಇದರ ಹುಚ್ಚು ಅದ.. ಒಲಂಪಿಕ್ಸ್ ನಂಥಾ ಒಲಂಪಿಕ್ಸ್ ನಾಗ.. ಗೆದ್ದವರಿಗೆ ಬಂಗಾರದ ಪದಕ.. ಅಲ್ಲಾ ನಮಗ-ನಿಮಗೆಲ್ಲ ಗೊತ್ತು, ಪ್ಲಾಟಿನಂ, ವಜ್ರ. ಇವೆಲ್ಲ ಬಂಗಾರಕ್ಕಿಂತ ತುಟ್ಟಿ ಅಂತ.. ಅವುಗಳ ಪದಕ ಯಾಕ ಕೊಡೂದಿಲ್ಲ..ಬಂಗಾರನ.. ಯಾಕ ಆಗಬೇಕು ಅಂತ..? ಆಂಗ್ಲದಲ್ಲಿ ಒಂದು ಗಾದೆ ಮಾತು ಅದ "ಆಲ್ ದಟ್ ಗ್ಲಿಟರ್ಸ್ ಈಸ್ ನಾಟ್ ಗೋಲ್ಡ್" ಅಂತ.. ಈಗರ ಒಪ್ತೀರೋ ಇಲ್ಲೋ ಬಂಗಾರ ಅಂದ್ರ ಜಗತ್ತ.. ಬಾಯಿ ಬಿಡ್ತದ ಅಂತ..
ನೀವು ಪ್ರತಿಯೊಂದು ವಿಚಾರ ತೊಗೋರಿ, ಮನೆ-ಮಠ, ಹೊಲ, ಅಸ್ತಿ, ಮನುಷ್ಯರು.. ಏನ ಛೊಲೋ ಇದ್ದರೂ ಅದಕ್ಕ ಬಂಗಾರ ಅಂತಾರ.. :)
ತ್ರೇತಾಯುಗದಿಂದ, ಕಲಿಯುಗದ ತನಕ ಬಂಗಾರ ತನ್ನ ಬೆಲೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದದ ಅಂದ್ರ ನೀವ ವಿಚಾರ ಮಾಡ್ರ್ಯಲ್ಲಾ..ಒಂದ ನಾಕ ಅಕ್ಷರ ಓದ್ಲಿಕ್ಕೆ-ಬರೀಲಿಕ್ಕೆ ಬರಲಿಲ್ಲ ಅಂದ್ರೂ, ಒಂದು ತೊಲಿ ಬಂಗಾರದ ಧಾರಣಿ ಮಾತ್ರ ಎಲ್ಲಾರಿಗೂ ಗೊತ್ತಿರತದ..ಹುಟ್ಟಿದ ಕೂಸಿನಿಂದ ಹಿಡ್ಕೊಂಡು, ಮುಪ್ಪಾನ ಮುದುಕರವರೆಗೂ ಜಗತ್ತಿಗೆ ಗುಂಗ ಹಿಡಿಸ್ತದ ಈ ಬಂಗಾರ..
ಈ ಬಂಗಾರದ ಜಟಿಲ ಪ್ರಶ್ನೆ, ಈ ಬಂಗಾರ ಲಹರಿ.. ಯೋಚಿಸಿದಷ್ಟೂ ವಿಶಾಲವಾಗಿ ಬೆಳೀತದ.. ಈ ಪ್ರಶ್ನೇನೂ ಹೆಂಡತಿ, ಮಕ್ಕಳು, ಸಂಸಾರ, ಮನಿ.. ಈ ಥರ ಇನ್ನೊಂದು ಮಾಯಾ ಅದ.. ಉತ್ತರ ಹಿಡುಕ್ಕೋತ ಹೋದ್ರ ಎಲ್ಲಾ ಶೂನ್ಯ ಅದ.. ಆ ಮೇಲೆ ನಾ ಸನ್ಯಾಸಿ ಆಗಬೇಕಾಗ್ತದ ಅಂತ ನಕ್ಕು ಸುಮ್ಮನಾಗ್ತೀನಿ. ಅಲ್ಲಾ ನಿಮಗೂ ಯಾವಾಗರ ಈ ಬಂಗಾರದ ಗುಂಗು ಹಿಡಿದದ್ದು ಅದ ಏನು..? ಇದ್ರ ನಾ ಬರೆದಿದ್ದನ್ನ ಓದಿ ನಕ್ಕು ಬಿಡ್ರಿ..ಇಲ್ಲಾ ಅಂದ್ರ, ಯಾವಾಗರ ಈ ಗುಂಗು ಹಿಡಿತಂದ್ರ ನನ್ನ ನೆನಪಿಸಿಕೊಳ್ರಿ ಅಷ್ಟು ಸಾಕು :)
"ನಿಮ್ಮ ಬಾಳು ಬಂಗಾರವಾಗಲಿ..!!!" :)
[ಈ ಲೇಖನ ದಟ್ಸ್ ಕನ್ನಡದಲ್ಲೂ ಪ್ರಕಟವಾಗಿತ್ತು: ಬಂಗಾರ ಲಹರಿ, ಯಾಕೋ ಬರೀ ಲಿಂಕ್ ಕೊಡೋ ಮನಸಾಗಲಿಲ್ಲ.. :-)]
Comments
ಹೆಣ್ಣಿಗೆ ಇರೋ ಬಂಗಾರದ ಆಸೆ ನಿಮಗ(ಗಂಡ್ಸರಿಗೆ),ಹೆಂಗ ತಿಳೀತsದ? ನೀವೂ ಮುಂದಿನ ಜಲ್ಮದಾಗ ಹೆಣ್ಣಾಗಿ ಹುಟ್ಟಿದರ,ನಿಮಗ ಬಂಗಾರದ ವಜನ ಗೊತ್ತಾದೀತು!
ಭಲೇ ಭಲೇ
ಪಾತ್ರ ಬದಲಾವಣೆ ಹಿಡಿಸಿತು..
ನಿಮ್ಮ ಬಾಳೂ ಬಂಗಾರವಾಗಲಿ ಪ್ಲಾಟಿನಂವಾಗಲಿ ಡೈಮಂಡಾಗಲಿ
ಎಮ್.ಡಿ ಅವರೆ, ಪಾತ್ರ ಬದಲಾವಣೆ ಮಾಡಿ ಬರೆಯೋದ್ರಾಗೂ ಒಂಥರ ಖುಷಿ ಐತ್ರೆಪಾ.. ಏನಂತೀರಿ..? :-)
ಪ್ರೀತಿಯ ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
ಬಂಗಾರ ನೋಡ್ಕೊಂತ ಕೂತು ಬಿಟ್ಟೀರೇನ್ರಿ?
ನಿಮ್ಮ blogಗೆ ಪ್ರತಿದಿನಾ ಬಂದು, ಖಾಲಿ ಖಾಲಿ ಹೊಳ್ಳಿ ಹೊಂಟೇನಿ.
ಇಂಥಾವು ಇನ್ನೂ ೪-೫ ಬಂಗಾರ ನಿಮಗ ಸಿಗಲಿ ಅಂತ ಹಾರೈಸ್ತೇನಿ!
ನಿಮ್ಮ ಭಾಷೆ ಓದಲಿಕ್ಕೆ ಹಿತ ಅನ್ನಿಸ್ತು. ನನಗೆ ನನ್ನ ಗೆಳತಿಯರು ಬೈತಾ ಇರ್ತಾರೆ, ಬಂಗಾರದ ಮೇಲೆ ಆಸೆಯಿಲ್ಲದಾಕಿ ನೀನು ಹೆಣ್ಣುಮಗಳಾಗಿರಲಿಕ್ಕೆ ಲಾಯಕ್ಕಿಲ್ಲ ಅಂತ.ನಾನು ನೀವು ಸುನಾಥರಿಗೆ ಕೊಟ್ಟ ಹಾಗೇ ಹೇಳಿ ತೇಲಿಸ್ತೀನಿ!!
-ಟೀನಾ
ಯಾರು ಭಾವದರ್ಪಣ ದ ಬಗ್ಗೆ ತಿಳಿಸಿದರು ಕೇಳಬಹುದಾ?
:-)
ಹಾಂ ಆದ್ರ ನನ್ನ ಹೆಂಡತಿಗದ..ನಿಮ್ಮ ಶೈಲಿ, ಬಳಸಿದ ಭಾಷಾ ಹಿಡಿಸ್ತು
ನಮ್ಮ ಕಾಕಾ ಹೇಳಿದಂಗ "ಬಂಗಾರದ ಬರಹ.."