ನೆನಪು-ಕನಸು-ಮತ್ತು-ನಾ!

ಖಾಲಿ-ಖಾಲಿ ಮನಸ ತುಂಬೆಲ್ಲ
ನಿನ್ನದೇ ಘಮ
ಖಾಲಿ ಪುಸ್ತಕದ ಹಾಳೆಗಳಿಂದ
ಹೊಮ್ಮುವ ಆ ಸುಗಂಧದಂತೆ..

ಒಂದರೆ ಘಳಿಗೆ ಮನದ ಪುಟಗಳು ಖಾಲಿ
ಏನೋ ಬರೆದಳಿಸಿದ ದೂರದ ನೆನಪು..
ಮತ್ತೆ ಪುಟ ತಿರುವಿದರೆ
ನೆನಪುಗಳ ಚುಕ್ಕಿ ಮೂಡಿಬಿಟ್ಟಿವೆ
ಯಾಕೋ ತಿಳಿಯದು ಮನದಾಟದ ಈ ಗೋಜಲು!

ನೆನ್ನೆ-ಇಂದುಗಳಲ್ಲಿ, ನೆನ್ನೆ ಚೆನ್ನಿತ್ತೇನೋ..
ನಾಳೆ, ಮತ್ತೆ ಇಂದಿನಂತೆ, ಮತ್ತೆ ನೆನ್ನೆಯ ಮೆಲುಕು
ಕನಸುಗಳ ಬಗ್ಗೆಯಂತೂ ಕೇಳಲೇ ಬೇಡ ನೀ
ನೆನಪು ಪುಸ್ತಕದ ಚುಕ್ಕಿಯಾದರೆ
ಕನಸು ಆಗಸದ ಚುಕ್ಕಿ..
ನೆನ್ನೆಯದೋ, ಇಂದಿನದೋ, ನಾಳೆಯದೋ ತಿಳಿವುದೇ ಇಲ್ಲ..!
ಎಲ್ಲಿ ಯಾವಾಗ ಜಾರುವುದೋ, ಎಲ್ಲಿ ಯಾವಾಗ ಮಿನುಗುವುದೊ ಗೊತ್ತಿಲ್ಲ..

ನೆನಪಿದ್ದರೂ ಮನಸೇಕೆ ಖಾಲಿ?
ಕನಸಿದ್ದರೂ ಈ ನಯನಗಳಿಗೆ ಮತ್ತೇನರದೋ ಖಯಾಲಿ..
ಕಳೆದು ಹೋಗುತ್ತೇನೆ ನ(ನಿ)ನ್ನಲ್ಲೇ ನಾ..
ಮತ್ತೆಲ್ಲಿಂದ ಹೇಗೆ ಮರಳಿ ಬರುತ್ತೇನೋ..!

ನನ್ನೊಡನೇ ನಾನಾಡುವ ಕಣ್ಣಾ-ಮುಚ್ಚಾಲೆ
ಯಾವಾಗ ಶುರುವಾಗಿ ಯಾವಾಗ ಮುಗಿಯಿತೋ
ಅರ್ಥವಾಗುವುದಿಲ್ಲ..
ನಾನೇ ನನಗೊಂದು ಒಗಟು
ನೀನಾದರೂ ಏನು ಮಾಡೀಯ..

Comments

sunaath said…
"ಸವಿ ಕಳವಳ"ದ ಮರುಕಳಿಕೆಯಾಗುತ್ತಿದೆಯಲ್ಲವೆ? ಕವನ ಸುಂದರವಾದ ಭಾವದರ್ಶನವಾಗಿದೆ.
Sree said…
nice one...
"ನೆನಪು ಪುಸ್ತಕದ ಚುಕ್ಕಿಯಾದರೆ
ಕನಸು ಆಗಸದ ಚುಕ್ಕಿ..
ನೆನ್ನೆಯದೋ, ಇಂದಿನದೋ, ನಾಳೆಯದೋ ತಿಳಿವುದೇ ಇಲ್ಲ..!
ಎಲ್ಲಿ ಯಾವಾಗ ಜಾರುವುದೋ, ಎಲ್ಲಿ ಯಾವಾಗ ಮಿನುಗುವುದೊ ಗೊತ್ತಿಲ್ಲ.." lovely lines!
Manjula said…
ಧನ್ಯವಾದ, sunaath. ಮನದ ಮಾತುಗಳೇ ಹಾಗೆ.. ಎಲ್ಲಿ ಯಾವಾಗ ಭಾವಗಳ ದಿಗ್ದರ್ಶನವಾಗುವುದೋ ಹೇಳೋದು ಕಷ್ಟ.. :-)

ಧನ್ಯವಾದ ಶ್ರೀ..ನಾನು ಮೊದಲು ಕನ್ನಡ ಬ್ಲಾಗ್ ಗಳ ಬಗ್ಗೆ ಅನ್ವೇಷಣೆ ನಡೆಸುತ್ತಿದ್ದಾಗ, ಇಷ್ಟ ಪಟ್ಟ ಬ್ಲಾಗ್ ಗಳಲ್ಲಿ, ನಿಮ್ಮ ಬ್ಲಾಗ್ ಕೂಡ ಒಂದು. ನಿಮ್ಮ ಕಾಮೆಂಟ್ ನೋಡಿ ಖುಷಿ ಆಯ್ತು :-)
MD said…
ಭಾವ-ದರ್ಪಣ ತುಂಬ ದಿನಗಳ ನಂತರ ಬ್ಲಾಗ್ ಲೋಕದಲ್ಲಿ ಕಾಣಿಸಿದ್ದೀರಿ.

"ನನ್ನೊಡನೇ ನಾನಾಡುವ ಕಣ್ಣಾ-ಮುಚ್ಚಾಲೆ
ಯಾವಾಗ ಶುರುವಾಗಿ ಯಾವಾಗ ಮುಗಿಯಿತೋ
ಅರ್ಥವಾಗುವುದಿಲ್ಲ.." ಒಳ್ಳೆಯ ಪದಭಾವ
Manjula said…
md ಅವರೆ ನನ್ನ ಬ್ಲಾಗ್ ನಲ್ಲಿ ಬರೆದು ಸುಮಾರು ದಿನಗಳಾಯಿತು ಸರಿಯೇ.. ಆದರೆ ಬ್ಲಾಗ್ ಲೋಕದ ವಿಹಾರ ಪ್ರತಿದಿನ ಇದ್ದೇ ಇದೆ.. :-) ನಿಮ್ಮ ಗಜಲ್ ಬಹಳ ಇಷ್ಟ ಆಯಿತು ನನಗೆ.. ಆದರೆ ಏನೊ techincal problem ನಿಂದ ಯಾಕೋ ನಾನು ಬರೆದ ಕಾಮೆಂಟ್ ಮಾತ್ರ ಪೋಸ್ಟ್ ಆಗಲಿಲ್ಲ ಅಲ್ಲಿ..
ಭಾವ ದರ್ಪಣದ ಬ್ಲಾಗಿಗರಿಗೆ ನಮಸ್ತೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.
Manjula said…
ಶ್ರೀನಿಧಿ ಅವರೇ ನೀವು ಕೊಟ್ಟ ಮಾಹಿತಿಗೆ ವಂದನೆಗಳು. ಖಂಡಿತ, ಬರಲು ಪ್ರಯತ್ನಿಸುತ್ತೇನೆ.. :-)
MD said…
ಅಂತೂ ನಿಮ್ಮ ಬ್ಲಾಗ್ ಲೋಕವಿಹಾರ ನಡೆದೇ ಇರುತ್ತೆ ಅನ್ನಿ!
ನಿಮ್ಮ ಬ್ಲಾಗನಲ್ಲಿ ನನ್ನ ಗಜಲ್ ಬಗ್ಗೆ ಹೊಗಳಿದ್ದಕ್ಕೆ ಧನ್ಯವಾದಗಳು; ಅವು ಕೂಡ ನಿಮ್ಮ ಬ್ಲಾಗಿನಲ್ಲೇ ಸಂತೋಷ :-)
ಅಯ್ಯೋ ! ಕಮೆಂಟು ಹಾಕೋಕೆ techincal problem ಬರ್ತಾ ಇದೆಯಾ? ಈಗ್ಲೆ ನೋಡ್ತೀನಿ
ನಮ್ಮ ಶತಮಾನಂಭವತಿಯ ಮೊದಲ ಕವನದ ಕವಿಯತ್ರಿ ಮಂಜುಳಾ ಅವರ ಈ ಕವನದಲ್ಲಿಯ ತುಡಿತ ಬಹಳ ನೆಚ್ಚಿಗೆಯಾಗುತ್ತದೆ.

"ನೆನಪು ಪುಸ್ತಕದ ಚುಕ್ಕಿಯಾದರೆ
ಕನಸು ಆಗಸದ ಚುಕ್ಕಿ"

Popular Posts